ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಶೇಷಾದ್ರಿಪುರಂ ಪದವಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ, ಕನ್ನಡ, ಇಂಗ್ಲಿಷ್, ಹಿಂದಿ ವಿಭಾಗ, ಜರ್ಮನಿಯ ಬರ್ಲಿನ್ ಕನ್ನಡ ಸಂಘ, ಬೆಳಗಾವಿಯ ಅಭಿಜಾತ ಕನ್ನಡ ದ್ವೈಮಾಸಿಕ ಕನ್ನಡ ಸಂಶೋಧನಾ ಪತ್ರಿಕೆ, ಶೋಧ್ ರಿತ್ಯುಅಂತಾರಾಷ್ಟ್ರೀಯ ಬಹುಶಿಸ್ತೀಯ ಸಂಶೋಧನಾ ಪತ್ರಿಕೆ ಸಹಯೋಗದಲ್ಲಿ ಬುಧವಾರ ಅವಲೋಕನ - 2026 ಬಹುಭಾಷಾ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿತ್ತು.ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ವಿವಿ ಕುಲಸಚಿವೆ ಎಂ.ಕೆ. ಸವಿತಾ ಮಾತನಾಡಿ, ಭಾಷೆಯು ಇವತ್ತಿನ ತಂತ್ರಜ್ಞಾನದಲ್ಲಿ ಅವನತಿ ಅಂತಕ್ಕೆ ತಲುಪುತ್ತಿರುವುದನ್ನು ಗಮನಿಸಬಹುದು. ಭಾಷೆ ಸಂಸ್ಕೃತಿ ತಂತ್ರಜ್ಞಾನ ಇವುಗಳಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಇಂದಿನ ಕೃತಕ ಬುದ್ಧಿಮತ್ತೆಯಿಂದ ಸಾಹಿತ್ಯವನ್ನು ಓದುವ ವಿದ್ಯಾರ್ಥಿಗಳು ಆ ಸಾಹಿತ್ಯವನ್ನು ಬರೆದವರು ಯಾರು ಎಂದು ತಿಳಿದುಕೊಳ್ಳುವುದಿಲ್ಲ. ಭಾಷೆ ಒಂದು ಸಂವಹನ ಮಾಧ್ಯಮ. ವ್ಯವಹಾರದ ದೃಷ್ಟಿಯಿಂದ ನಾವು ಬೇರೆ ಬೇರೆ ಭಾಷೆಗಳನ್ನು ಕಲಿಯುವುದು ಬಹಳ ಉತ್ತಮ, ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಮಾತೃ ಭಾಷೆಯಿಂದ ಭಾವನೆಗಳನ್ನು ಅಭಿವ್ಯಕ್ತಿಸಲು ಸಹಾಯವಾಗುತ್ತಿಲ್ಲ ಎಂದು ತಿಳಿಸಿದರು.ಮುಖ್ಯ ಅತಿಥಿಯಾಗಿದ್ದ ಇಂಗ್ಲಿಷ್ ಅಧ್ಯಯನ ವಿಭಾಗದ ಪ್ರೊ. ರಮೇಶ್ ಜಯರಾಮಯ್ಯ ಮಾತನಾಡಿ, ನಾವು ಕೇವಲ ಬದಲಾಗುತ್ತಿರುವ ಜಗತ್ತಿನಲ್ಲಿ ವಾಸಿಸುತ್ತಿಲ್ಲ, ಬದಲಾಗಿ ವೇಗವಾಗಿ ರೂಪಾಂತರಗೊಳ್ಳುತ್ತಿರುವ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಪ್ರಸ್ತುತ ಸಂದರ್ಭದಲ್ಲಿ ನಮಗೆ ಬೇಕಾದನ್ನು ತಕ್ಷಣವೇ ಪಡೆಯುವಂತಹ ವೇಗದ ಪ್ರಪಂಚದಲ್ಲಿ ನಾವು ಇದ್ದೇವೆ ಎಂದರು.
ನವ ವಸಾಹತುಶಾಹಿ ಬಗ್ಗೆ ಮಾತನಾಡುತ್ತಾ, ಅತಿ ಹೆಚ್ಚಾಗಿ ಇಂದಿನ ಯುವ ಜನತೆ ಅಮೆರಿಕನ್ ಸಂಸ್ಕೃತಿಗೆ ಹೊಂದಿಕೊಳ್ಳುತ್ತಿದ್ದು ಸ್ಥಳೀಯ ಸಂಸ್ಕೃತಿಯನ್ನು ಮರೆಮಾಚುವ ಸ್ಥಿತಿಗೆ ತಲುಪಿದ್ದೇವೆ. ಡಿಜಿಟಲ್ ತಂತ್ರಜ್ಞಾನವು ಹೆಚ್ಚಾಗಿ ಇಂಗ್ಲಿಷ್ ಭಾಷೆಯಿಂದ ಪ್ರಾಬಲ್ಯ ಹೊಂದಿದೆ ಎಂದು ಅವರು ಹೇಳಿದರು.
ಸಂಸ್ಥೆ ಗೌರವ ಕಾರ್ಯದರ್ಶಿ ಡಾ. ವುಡೇ ಪಿ. ಕೃಷ್ಣ ಮಾತನಾಡಿ, ಭಾಷೆ ಆಕರ್ಷಣೆ ಮೂಲಕ ಎಲ್ಲರನ್ನು ಜೊತೆಗೂಡಿಸುವ ಮಾಧ್ಯಮವಾಗಿದೆ. ಬೇರೆ ಬೇರೆ ರಾಷ್ಟ್ರಗಳಲ್ಲಿ ಭಾಷೆಯು ಬಾಂಧವ್ಯವೇ ಸೃಷ್ಟಿಸುತ್ತದೆ. ಬದಲಾವಣೆ ಜಗದ ನಿಯಮವಾದ್ದರಿಂದ ನಾವು ಬಹುಮುಖ ದೃಷ್ಟಿಕೋನದಿಂದ ಇರಬೇಕು ಎಂದರು.
ಅಭಿಜಾತ ಕನ್ನಡ ಸಂಶೋಧನಾ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾಕದ ಎ.ಎಂ.ಎಂ. ಕೊಟ್ರಸ್ವಾಮಿ, ಕಾಲೇಜಿನ ಪ್ರಾಂಶುಪಾಲೆ ಡಾ.ಕೆ. ಸೌಮ್ಯ ಈರಪ್ಪ, ಆಂತರಿಕ ಗುಣಮಟ್ಟ ಭರವಸೆ ಕೋಶ ನಿರ್ದೇಶಕಿ ಪ್ರೊ. ಮೃದುಲ ಸೋಜನ, ಕನ್ನಡವಿಭಾಗದ ಮುಖ್ಯಸ್ಥೆ ಡಾ.ಸಿ.ಪಿ. ಲಾವಣ್ಯ, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಜೋಸೆಫ್ ಮ್ಯಾಥ್ಯೂ, ಹಿಂದಿ ವಿಭಾಗದ ಮುಖ್ಯಸ್ಥ ಧನಲಕ್ಷ್ಮಿ, ಸಂಚಾಲಕರಾದ ಕೃಪಾಲಿನಿ, ಕೆ.ಎಂ. ಸಿದ್ದಪ್ಪ, ಬಿ.ಕೆ. ರಶ್ಮಿ ಮೊದಲಾದವರು ಇದ್ದರು.