ಹೊಸಪೇಟೆಯಲ್ಲಿ ಮೆರವಣಿಗೆ, ಸರ್ಕಾರದ ವಿರುದ್ಧ ಘೋಷಣೆ

| Published : Aug 02 2025, 12:00 AM IST

ಸಾರಾಂಶ

ಸುಪ್ರಿಂ ಕೋರ್ಟ್‌ ಆದೇಶದಂತೆ ರಾಜ್ಯದಲ್ಲಿ ಶೀಘ್ರವೇ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ವಿಜಯನಗರ ಜಿಲ್ಲಾ ಮಾದಿಗ ಜಾತಿ, ಉಪಜಾತಿ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ಹೊಸಪೇಟೆಯಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಯಿತು.

ಹೊಸಪೇಟೆ: ಸುಪ್ರಿಂ ಕೋರ್ಟ್‌ ಆದೇಶದಂತೆ ರಾಜ್ಯದಲ್ಲಿ ಶೀಘ್ರವೇ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ವಿಜಯನಗರ ಜಿಲ್ಲಾ ಮಾದಿಗ ಜಾತಿ, ಉಪಜಾತಿ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಯಿತು.

ನಗರದ ಸಾಯಿಬಾಬಾ ದೇವಸ್ಥಾನದ ವೃತ್ತದಿಂದ ನೂರಾರು ಮಾದಿಗ ಸಮಾಜ ಬಾಂಧವರು, ಜಿಲ್ಲಾಧಿಕಾರಿ ಕಚೇರಿ ವರೆಗೆ ಅರೆಬೆತ್ತಲೆ ಮೆರವಣಿಗೆ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ನೀಡಲು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ. ಆದರೆ, ಸರ್ಕಾರ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಜಾರಿಗೊಳಿಸಲು ಅನಗತ್ಯ ವಿಳಂಬ ಮಾಡುತ್ತಿದೆ. ಈ ವಿಳಂಬ ನೀತಿಯಿಂದಾಗಿ ನಮ್ಮ ಸಮುದಾಯದ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಕಾರ್ಮಿಕರು ಹಾಗೂ ಮಹಿಳೆಯರು ನ್ಯಾಯಯುತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.

ಹಂಪಿ, ಮಾತಂಗ ಪರ್ವತದ ಪೂರ್ಣಾನಂದ ಭಾರತಿ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಜಿಲ್ಲಾ ಅಂಬೇಡ್ಕರ್ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ. ಉಮಾಪತಿ, ಮುಖಂಡರಾದ ಎಂ.ಸಿ. ವೀರಸ್ವಾಮಿ, ಬಲ್ಲಾಹುಣ್ಸಿ ರಾಮಣ್ಣ, ಎಚ್‌. ಶೇಷು, ಪೂಜಪ್ಪ, ಮರಿಸ್ವಾಮಿ, ದುರುಗೇಶ, ಉಚ್ಚಂಗೆಪ್ಪ, ಪುತ್ರೇಶ, ಸಣ್ಣ ಮಾರೆಪ್ಪ, ಸಂತೋಷ ಕುಮಾರ, ಕಣಿವಳ್ಳಿ ಮಂಜುನಾಥ, ಮಲ್ಲಿಕಾರ್ಜುನ, ಲಕ್ಷ್ಮಣ, ಜಗನ್ನಾಥ, ಶ್ರೀನಿವಾಸ್‌, ಸಿ. ಆರ್. ಭರತ್ ಕುಮಾರ್ ಮತ್ತಿತರರಿದ್ದರು.

ಕುತ್ತಿಗೆ ಕೊಯ್ದುಕೊಳ್ಳುವೆ ಎಂದು ಬ್ಲೇಡ್‌ ಪ್ರದರ್ಶನ: ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ನಡೆಯುತ್ತಿದ್ದ ಅರೆಬೆತ್ತಲೆ ಮೆರವಣಿಗೆಯಲ್ಲಿ ಓರ್ವ ಪ್ರತಿಭಟನಾಕಾರ ಜಿಲ್ಲಾಧಿಕಾರಿ ಕಚೇರಿಯ ಒಳ ಪ್ರವೇಶಿಸುವುದನ್ನು ತಡೆದರೆ, ಕುತ್ತಿಗೆ ಕೊಯ್ದುಕೊಳ್ಳುವೆ ಎಂದು ಶೇವಿಂಗ್ ಬ್ಲೇಡ್ ಪ್ರದರ್ಶನ ಮಾಡುತ್ತಿದ್ದಂತೆ ಪೊಲೀಸರು ತಡೆದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.