ಸಾರಾಂಶ
ಚಿತ್ರೋತ್ಸವದಲ್ಲಿ 800 ಸಾಕ್ಷ್ಯಚಿತ್ರಗಳು ಭಾಗವಹಿಸಿದ್ದವು. 15 ವಿಭಾಗದಲ್ಲಿ 10 ಚಲನಚಿತ್ರ ಆಯ್ಕೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ತನ್ನ ಸಾಕ್ಷ್ಯಚಿತ್ರ ‘ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು - ಭೂತಕ್ಕಾಗಿ ಪ್ರತಿಷ್ಠಿತ ಕಲ್ಚರ್ ಸಿನಿಮಾ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ (ಸಿ2ಎಫ್2) ನಲ್ಲಿ ಸಾಮಾಜಿಕ ಅಭ್ಯಾಸಗಳ ವಿಭಾಗದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.ಈ ಚಿತ್ರೋತ್ಸವದಲ್ಲಿ ಪ್ರಪಂಚದಾದ್ಯಂತದ 800 ಸಾಕ್ಷ್ಯಚಿತ್ರಗಳು ಭಾಗವಹಿಸಿದ್ದವು. ಒಟ್ಟು 15 ವಿಭಾಗಗಳಲ್ಲಿ ಟಾಪ್ 10 ಚಲನಚಿತ್ರಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ‘ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು - ಭೂತ’ ತನ್ನ ವಿಭಾಗದಲ್ಲಿ ವಿಜೇತವಾಗಿ ಹೊರಹೊಮ್ಮಿದೆ.
ವಿಶ್ವಸಂಸ್ಥೆಯು 2024 ರ ಮೇ 21 ರಂದು ‘ಸಂವಾದ ಮತ್ತು ಅಭಿವೃದ್ಧಿಗಾಗಿ ಸಾಂಸ್ಕೃತಿಕ ವೈವಿಧ್ಯತೆಗಾಗಿ ವಿಶ್ವ ದಿನ’ ಎಂದು ಘೋಷಿಸಿದ ಸ್ಮರಣಾರ್ಥವಾಗಿ ಕಲ್ಚರ್ ಸಿನಿಮಾ ಫಿಲ್ಮ್ ಫೆಸ್ಟಿವಲ್ ನ್ನು ಪ್ರತಿವರ್ಷ ಮೇ 21ರಂದು ಆಯೋಜಿಸಲಾಗುತ್ತಿದೆ. ಆ. 25ರಂದು ಪ್ರಶಸ್ತಿ ಪ್ರದಾನ ನಡೆಸಲಾಯಿತು.ಈ ಸಾಧನೆಗೆ ಮಾಹೆಯ ಸಹಕುಲಾಧಿಪತಿ ಡಾ.ಎಚ್. ಎಸ್. ಬಲ್ಲಾಳ್ ಮತ್ತು ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಸಾಕ್ಷ್ಯಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.