ಕೇಂದ್ರ ಸರ್ಕಾರದ ಅನುದಾನ ಹಾಗೂ ಸ್ಮಾರ್ಟ್‌ ಸಿಟಿ ಯೋಜನೆಯಡಿ ಒಟ್ಟು ₹180 ಕೋಟಿ ವೆಚ್ಚದಲ್ಲಿ ನಗರದಲ್ಲಿ ನಿರ್ಮಿಸುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಮುಚ್ಚಯ ಕಾಮಗಾರಿ ಮುಕ್ತಾಯ ಹಂತಕ್ಕೆ ತಲುಪಿದೆ. ಉತ್ತರ ಕರ್ನಾಟಕ ಭಾಗದ ಕ್ರೀಡಾಪಟುಗಳಿಗೆ ಮತ್ತಷ್ಟು ಪ್ರೋತ್ಸಾಹ ಹಾಗೂ ಕ್ರೀಡಾ ಸಂಕೀರ್ಣ ಕಲ್ಪಿಸುವ ನಿಟ್ಟಿನಲ್ಲಿ 16 ಎಕರೆ ವಿಶಾಲವಾದ ಪ್ರದೇಶದಲ್ಲಿ ಅತ್ಯಾಧುನಿಕ ಗುಣಮಟ್ಟದ ಕ್ರೀಡಾ ಸಂರ್ಕೀರ್ಣ ತಲೆ ಎತ್ತಿದೆ.

ಮಹಮ್ಮದ ರಫೀಕ್‌ ಬೀಳಗಿ

ಹುಬ್ಬಳ್ಳಿ: ದೇಶದ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಮುಚ್ಚಯ ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ ನಿರ್ಮಾಣವಾಗುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗಲಿದೆ. ಈ ಸಂಕೀರ್ಣದಲ್ಲಿ ಏಕಕಾಲಕ್ಕೆ 22 ಕ್ರೀಡೆಗಳನ್ನು ಆಯೋಜಿಸಬಹುದಾಗಿದೆ. ಇಂತಹ ಕ್ರೀಡಾ ಸಂಕೀರ್ಣ ದೇಶದಲ್ಲಿ ಮೊದಲು.

ಇನ್ನುಳಿದ ಕ್ರೀಡಾಂಗಣಗಳನ್ನು ಕ್ರೀಡೆಗಳಿಗೆ ಅನುಗುಣವಾಗಿ ಮಾರ್ಪಡಿಸಿ ಆಟ ಆಡಿಸಲಾಗುತ್ತದೆ. ಆದರೆ, ವಾಣಿಜ್ಯ ನಗರಿಯಲ್ಲಿ ನಿರ್ಮಾಣವಾಗುತ್ತಿರುವ ಈ ಕ್ರೀಡಾ ಸಂಕೀರ್ಣದಲ್ಲಿ ಒಳಾಂಗಣ 16 ಮತ್ತು ಹೊರಾಂಗಣ 6 ಕ್ರೀಡೆಗಳನ್ನು ಏಕಕಾಲದಲ್ಲೇ ಆಯೋಜಿಸಬಹುದಾಗಿದೆ.

ಕೇಂದ್ರ ಸರ್ಕಾರದ ಅನುದಾನ ಹಾಗೂ ಸ್ಮಾರ್ಟ್‌ ಸಿಟಿ ಯೋಜನೆಯಡಿ ಒಟ್ಟು ₹180 ಕೋಟಿ ವೆಚ್ಚದಲ್ಲಿ ನಗರದಲ್ಲಿ ನಿರ್ಮಿಸುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಮುಚ್ಚಯ ಕಾಮಗಾರಿ ಮುಕ್ತಾಯ ಹಂತಕ್ಕೆ ತಲುಪಿದೆ. ಉತ್ತರ ಕರ್ನಾಟಕ ಭಾಗದ ಕ್ರೀಡಾಪಟುಗಳಿಗೆ ಮತ್ತಷ್ಟು ಪ್ರೋತ್ಸಾಹ ಹಾಗೂ ಕ್ರೀಡಾ ಸಂಕೀರ್ಣ ಕಲ್ಪಿಸುವ ನಿಟ್ಟಿನಲ್ಲಿ 16 ಎಕರೆ ವಿಶಾಲವಾದ ಪ್ರದೇಶದಲ್ಲಿ ಅತ್ಯಾಧುನಿಕ ಗುಣಮಟ್ಟದ ಕ್ರೀಡಾ ಸಂರ್ಕೀರ್ಣ ತಲೆ ಎತ್ತಿದೆ.

ಅಂತಾರಾಷ್ಟ್ರೀಯ ದರ್ಜೆ: ಇಲ್ಲಿ ನಿರ್ಮಿಸಲಾಗುತ್ತಿರುವ ಕ್ರೀಡಾಂಗಣಗಳನ್ನು ಅಂತಾರಾಷ್ಟ್ರೀಯ ದರ್ಜೆಯಲ್ಲೇ ನಿರ್ಮಿಸಲಾಗುತ್ತಿದೆ. ಪ್ರತಿಯೊಂದು ಅಂಗಣಕ್ಕೆ ಆಯಾ ಕ್ರೀಡೆಗಳ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ. ಫೆಡರೇಶನ್‌ಗಳು ಬದಲಾವಣೆಗೆ ಅಥವಾ ಚಿಕ್ಕಪುಟ್ಟ ಮಾರ್ಪಾಡುಗಳೊಂದಿಗೆ ಕಾಮಗಾರಿ ಮಾಡಲಾಗುತ್ತಿದೆ. ಫೆಡರೇಶನ್‌ಗಳು ಪರಿಶೀಲಿಸಿ ಮಾನ್ಯತೆ ನೀಡಿದ ನಂತರ ಕ್ರೀಡಾಕೂಟ ಆಯೋಜನೆಗೆ ಹಸ್ತಾಂತರಿಸಲಾಗುತ್ತದೆ. ವಿಶ್ವದರ್ಜೆಯೆ ಎಲ್ಲ ವ್ಯವಸ್ಥೆಗಳನ್ನು ಒಳಗೊಂಡ ಮಾದರಿ ಸಮುಚ್ಚಯ ಇದಾಗಲಿದೆ.

ಯಾವ್ಯಾವ ಕ್ರೀಡೆ?

ಒಳಾಂಗಣದಲ್ಲಿ ಟೇಬಲ್‌ ಟೆನ್ನಿಸ್‌, ಬಿಲಾಸ್, ಫೂಲ್ ಟೇಬಲ್, ಸ್ನೋಕರ್‌, ಬ್ಯಾಡ್ಮಿಂಟನ್‌, ಸ್ಕಾಶ್‌, ಶೂಟಿಂಗ್‌, ಮಾರ್ಷಲ್‌ ಆರ್ಟ್ಸ್‌, ಕಬಡ್ಡಿ, ಆರ್ಚರಿ, ರೆಸ್ಲಿಂಗ್‌, ಸ್ಕೇಟಿಂಗ್‌, ಕಬ್ಬಡ್ಡಿ, ಈಜು ಕಲಿಯುವವರು ಮತ್ತು ಮಕ್ಕಳಿಗಾಗಿ ಒಳಾಂಗಣ ಈಜುಗೊಳ ನಿರ್ಮಿಸಲಾಗಿದೆ.

ಹೊರಾಂಗಣದಲ್ಲಿ ಫುಟ್‌ಬಾಲ್‌, ವಾಲಿಬಾಲ್‌, ಹಾಕಿ, ಖೋಖೋ, ಟೆನ್ನಿಸ್‌, ಅಥ್ಲೆಟಿಕ್ಸ್‌ ಕ್ರೀಡಾಂಗಣ ನಿರ್ಮಿಸಲಾಗಿದೆ. ಅಲ್ಲದೇ ಕುಸ್ತಿ ಹಾಗೂ ಯೋಗಕ್ಕೆ ಪ್ರತ್ಯೇಕ ಸಂಕಿರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ. ಕ್ರೀಡಾಪಟುಗಳಿಗೆ ವಾರ್ಮ್ ಅಪ್, ವಿಶ್ರಾಂತಿ ಗೃಹ, ಶೌಚಾಲಯ ಹಾಗೂ ೪೫೦ ಆಸನದ ಸಭಾಭವನ ಹಾಗೂ ಮ್ಯೂಸಿಕ್ ಆಡಿಟೋರಿಯಂ ಸಹ ಇಲ್ಲಿದೆ.

ಹಗಲು ಮತ್ತು ರಾತ್ರಿಯ ವೇಳೆಯಲ್ಲೂ ಎಲ್ಲ ಆಟಗಳು ನಡೆಸಲು ಅನುಕೂಲವಾಗುವಂತೆ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಮಳೆಕೊಯ್ಲು ವ್ಯವಸ್ಥೆ, ಸೋಲಾರ್‌ ವ್ಯವಸ್ಥೆ ಅಳವಡಿಸಲಾಗಿದೆ. ಈಗಾಗಲೇ ಕಾಮಗಾರಿ ಶೇ. 85ರಷ್ಟು ಮುಗಿದಿದೆ. ಅಂತಿಮ ಹಂತದ ಕಾಮಗಾರಿ ನಡೆಯುತ್ತಿದ್ದು, ಶೀಘ್ರದಲ್ಲೇ ಕಾಮಗಾರಿ ಮುಗಿಯಲಿದೆ ಎಂದು ಕಾಮಗಾರಿ ಮೇಲ್ವಿಚಾರಣೆ ಮಾಡುತ್ತಿರುವ ಬಸವರಾಜ ತಿಳಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ವ್ಯವಸ್ಥಿತ ಕ್ರೀಡಾಂಗಣ ನಿರ್ಮಿಸುವ ಉದ್ದೇಶದಿಂದ ಕಂಡಿರುವ ಕನಸು ನನಸಾಗುವ ಸಮಯ ಬಂದಿದೆ. ನಮ್ಮ ಭಾಗದ ಕ್ರೀಡಾಪಟುಗಳು ಸೌಲಭ್ಯ ಹೊಂದಿದ ಕ್ರೀಡಾಂಗಣ ಅರಸಿ ಬೆಂಗಳೂರಿನತ್ತ ಮುಖಮಾಡಬೇಕಿತ್ತು. ಇದನ್ನು ನಿವಾರಿಸಲು ಮತ್ತು ಓಲಂಪಿಕ್‌ ಕ್ರೀಡಾಕೂಟಕ್ಕೆ ನಮ್ಮ ಭಾಗದ ಆಟಗಾರರನ್ನು ಸಜ್ಜುಗೊಳಿಸಲು ಈ ಕ್ರೀಡಾ ಸಂಕೀರ್ಣ ಸಹಕಾರಿಯಾಗಲಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ತಿಳಿಸಿದರು.

ಹುಬ್ಬಳ್ಳಿಯಲ್ಲಿ ವಿಶ್ವದರ್ಜೆಯ ಸಂಕೀರ್ಣ ನಿರ್ಮಾಣ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ದೇಶದ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದು ಉತ್ತಮ ಕಾರ್ಯ. ಇತರೆ ರಾಜ್ಯಗಳಲ್ಲೂ ಈ ತರಹದ ಸೌಲಭ್ಯ ಕಲ್ಪಿಸಿದರೆ ಕೇಂದ್ರ ಸರ್ಕಾರ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಕ್ರಮಕೈಗೊಳ್ಳಲಿದೆ ಎಂದು ಕೇಂದ್ರದ ಯುವಜನ ಸೇವಾ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಾ ನಿಖಿಲ್‌ ಖಡ್ಸೆ ಹೇಳಿದರು.