ಸಾರಾಂಶ
ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾಡಳಿತ ವತಿಯಿಂದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಉಡುಪಿ ಜಿಲ್ಲೆಯ ಮಲ್ಪೆ ಬೀಚ್, ಕಾಪು ಬ್ಲೂ ಫ್ಲಾಗ್ ಬೀಚ್, ಡೆಲ್ಟಾ ಬೀಚ್, ಕೋಡಿ ಬೀಚ್, ತ್ರಾಸಿ, ಮರವಂತೆ, ಬೈಂದೂರಿನ ಸೋಮೇಶ್ವರ ಮುಂತಾದ ಪ್ರಮುಖ ಕಡಲ ಕಿನಾರೆಯಲ್ಲಿ ಏಕಕಾಲದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ಮಲ್ಪೆ
ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾಡಳಿತ ವತಿಯಿಂದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಉಡುಪಿ ಜಿಲ್ಲೆಯ ಮಲ್ಪೆ ಬೀಚ್, ಕಾಪು ಬ್ಲೂ ಫ್ಲಾಗ್ ಬೀಚ್, ಡೆಲ್ಟಾ ಬೀಚ್, ಕೋಡಿ ಬೀಚ್, ತ್ರಾಸಿ, ಮರವಂತೆ, ಬೈಂದೂರಿನ ಸೋಮೇಶ್ವರ ಮುಂತಾದ ಪ್ರಮುಖ ಕಡಲ ಕಿನಾರೆಯಲ್ಲಿ ಏಕಕಾಲದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಮಲ್ಪೆ ಕಡಲತೀರದಲ್ಲಿ ಸ್ವತಃ ತಾವೇ ಕಸಗಳನ್ನು ಸಂಗ್ರಹಿಸುವ ಮೂಲಕ ಚಾಲನೆ ನೀಡಿದರು. ಇದಕ್ಕೆ ಮೊದಲು ಪರಿಸರ ಜಾಗೃತಿಯ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿ, ಪ್ಲಾಸ್ಟಿಕ್ ಬಳಸದಂತೆ ಪ್ರಮಾಣವಚನ ಬೋಧಿಸಿದರು.ನಂತರ ಮಾತನಾಡಿ, ಮೊದಲು ನಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಮ್ಮ ಸುತ್ತಮುತ್ತ ಸ್ವಚ್ಛವಾಗಿದ್ದಲ್ಲಿ ಮಾತ್ರ ನಾವು ಉತ್ತಮ ಆರೋಗ್ಯದಿಂದಿರಲು ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಕೆನರಾ ಬ್ಯಾಂಕ್ ಮಹಾಪ್ರಬಂಧಕ ಗಂಗಾಧರ್ ಹಾಗೂ ಮಾಹೆಯ ವಿದ್ಯಾರ್ಥಿಗಳು, ನಗರಸಭಾ ಸ್ವಚ್ಛತಾ ಕರ್ಮಿಗಳು, ವಿದ್ಯಾರ್ಥಿಗಳು, ಕೆನರಾ ಬ್ಯಾಂಕ್ ಸಿಬ್ಬಂದಿ, ಕರಾವಳಿ ಕಾವಲು ಪಡೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.