ತಂತ್ರಜ್ಞಾನ, ನಾವಿನ್ಯತೆಯೊಂದಿಗೆ ಕೃಷಿಗೆ ಹೊಸ ಭವಿಷ್ಯ ರೂಪಿಸುವ ಉದ್ದೇಶ । ನಿತ್ಯ ೨ ಲಕ್ಷಕ್ಕೂ ಹೆಚ್ಚು ರೈತರು, ಉದ್ಯಮಿಗಳು, ಸಾರ್ವಜನಿಕರ ಭೇಟಿ ನಿರೀಕ್ಷೆ
ಕನ್ನಡಪ್ರಭ ವಾರ್ತೆ ಮಂಡ್ಯಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ಕೃಷಿ ಇಲಾಖೆ ಸಹಯೋಗದೊಂದಿಗೆ ಏ.೨೪ರಿಂದ ಏ.೨೬ರವರೆಗೆ ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಜಾಗತಿಕ ಕೃಷಿ ತಂತ್ರಜ್ಞಾನ ಶೃಂಗಸಭೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾರೆಡ್ಡಿ ತಿಳಿಸಿದರು.
ಮೂರು ದಿನಗಳ ಕಾಲ ನಡೆಯಲಿರುವ ಶೃಂಗಸಭೆಯು ರೈತರು, ಕೃಷಿ ಉದ್ಯಮಿಗಳು, ತಂತ್ರಜ್ಞಾನ, ವಿನ್ಯಾಸಕಾರರು, ಹೂಡಿಕೆದಾರರು ಮತ್ತು ಜಾಗತಿಕ ಖರೀದಿದಾರರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ತಂತ್ರಜ್ಞಾನ ಮತ್ತು ನಾವಿನ್ಯತೆಯ ಮೂಲಕ ಕೃಷಿಯ ಭವಿಷ್ಯವನ್ನು ರೂಪಿಸಲು ಉದ್ದೇಶಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಮೌಲ್ಯವರ್ಧನೆ ಮತ್ತು ಜಾಗತಿಕ ವಾಣಿಜ್ಯಕ್ಕಾಗಿ ಅಪಾರ ಸಾಧ್ಯತೆಯನ್ನು ಗುರುತಿಸುತ್ತಿರುವ ದೃಷ್ಟಿಯಿಂದ ಎಫ್‌ಕೆಸಿಸಿಐ ಗ್ಲೋಬಲ್ ಅಗ್ರಿ- ಟೆಕ್ ಸಮ್ಮಿಟ್ ಕೃಷಿ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿ ಆವಿಷ್ಕಾರ, ವ್ಯವಸಾಯ ಹೂಡಿಕೆ ಮತ್ತು ಉದ್ಯಮಶೀಲತೆಯನ್ನು ವೇಗಗೊಳಿಸಲು ಈ ಶೃಂಗಸಭೆಯನ್ನು ಆಯೋಜಿಸಲಾಗಿದೆ ಎಂದರು.
ಈ ಸಭೆಯಲ್ಲಿ ಭೂಮಿ, ಬೀಜ, ವಿಜ್ಞಾನ, ಸಂಶೋಧನೆ, ಕೈಗಾರಿಕೆ ಮತ್ತು ಸರಬರಾಜು ಸರಪಳಿಗಳನ್ನು ಸಂಪರ್ಕಿಸುವ ಜಾಗತಿಕ ವೇದಿಕೆಯಾಗುವಂತೆ ವಿನ್ಯಾಸಗೊಳಿಸಲಾಗಿದೆ. ಕೃಷಿ, ತೋಟಗಾರಿಕೆ, ಪಶು ಮತ್ತು ಪ್ರಾಣಿಪಾಲನೆ, ಆಹಾರ ಸಂಸ್ಕರಣೆ, ಕೃಷಿ ರಫ್ತುಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದು, ಈ ಉದ್ಯಮವು ರೈತರನ್ನು ಕೃಷಿ ಉದ್ಯಮಿಗಳನ್ನಾಗಿ ಶಕ್ತಿ ತುಂಬಲು ಮತ್ತು ಕೃಷಿ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್‌ಗಳಾಗಿ ರೂಪಿಸಲು ಉದ್ದೇಶಿಸಿದೆ ಎಂದು ಹೇಳಿದರು.
ಹೊಸ ತಂತ್ರಜ್ಞಾನ, ನೂತನ ಆವಿಷ್ಕಾರಗಳನ್ನು ಪ್ರೋತ್ಸಾಹಿಸುವುದು, ಕೃಷಿ- ಆಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿ ವ್ಯಾಪಾರ ಅವಕಾಶಗಳು, ಕೃಷಿ ತಂತ್ರಜ್ಞಾನದಲ್ಲಿ ಹೂಡಿಕೆ ಮತ್ತು ನಾವಿನ್ಯತೆಯನ್ನು ಉತ್ತೇಜಿಸುವುದು, ಕೃಷಿ ಉದ್ಯಮಿಗಳು, ಸ್ಟಾರ್ಟಪ್‌ಗಳ ಬೆಳವಣಿಗೆಗೆ ಬೆಂಬಲ, ರೈತರ ಆದಾಯ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ ಎಂದು ನುಡಿದರು.
ಈ ಶೃಂಗಸಭೆಯಲ್ಲಿ ಅನೇಕ ತಾಂತ್ರಿಕ ಅಧಿವೇಶನಗಳು ನಡೆಯಲಿವೆ. ಜ್ಞಾನ ಹಂಚಿಕೆ ಮತ್ತು ವ್ಯವಹಾರ ಕೇಂದ್ರೀಕೃತ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಮುಂದಿನ ತಲೆಮಾರಿನ ಕೃಷಿ ಪರಿಹಾರಗಳನ್ನು ಪ್ರದರ್ಶಿಸುವ ಜಾಗತಿಕ ಕೃಷಿ ಟೆಕ್ ಪ್ರದರ್ಶನ, ಕೃಷಿ ಡ್ರೋನ್, ನಿಖರ ಯಂತ್ರ ಸಾಮಗ್ರಿಗಳು, ಸ್ಮಾರ್ಟ್ ನೀರಾವರಿ ವ್ಯವಸ್ಥೆ, ನೀತಿ ನಿರೂಪಕರು, ವಿಜ್ಞಾನಿಗಳು ಮತ್ತು ಕೈಗಾರಿಕಾ ತಜ್ಞರೊಂದಿಗೆ ಉನ್ನತಮಟ್ಟದ ದುಂಡುಮೇಜಿನ ಚರ್ಚೆಗಳು ಮತ್ತು ಜ್ಞಾನಾಧಾರಿತ ಅಧಿವೇಶನಗಳು ನಡೆಯಲಿವೆ. ಅಂತಾರಾಷ್ಟ್ರೀಯ ಮತ್ತು ದೇಶೀಯ ವಾಣಿಜ್ಯ ಸಂಪರ್ಕಗಳಿಗೆ ಖರೀದಿದಾರರು- ಮಾರಾಟಗಾರರ ಜೊತೆ ಸಭೆ, ಜಾಗತಿಕ ಮಾರುಕಟ್ಟೆಗಳಿಗೆ ಪ್ರಮಾಣಪತ್ರಗಳು, ಅನುಸರಣೆ ಮತ್ತು ಲಾಜಿಸ್ಟಿಕ್ಸ್ ಕುರಿತು ಭಾಗವಹಿಸುವವರಿಗೆ ಮಾರ್ಗದರ್ಶನ ನೀಡಲು ರಫ್ತು ನೆರವಿನ ಡೆಸ್ಕ್ ವ್ಯವಸ್ಥೆ ಮಾಡಿದೆ ಎಂದರು.ಈ ಸಮಾವೇಶದಲ್ಲಿ ಕ್ರಮಬದ್ಧ ಕೃಷಿ, ಐಒಟಿ, ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ, ಬ್ಲಾಕ್ ಚೇನ್, ಜೈವಿಕ ತಂತ್ರಜ್ಞಾನ, ಶೀತ ಸರಪಳಿ ಲಾಜಿಸ್ಟಿಕ್ಸ್, ಆಹಾರ ಸಂಸ್ಕರಣೆ, ಹೊಸ ಅಂಶಗಳು ಮತ್ತು ಸುಧಾರಿತ ಪ್ಯಾಕೇಜಿಂಗ್ ಪರಿಹಾರಗಳಂತಹ ಅತ್ಯುತ್ತಮ ತಂತ್ರಜ್ಞಾನಗಳನ್ನು ಹೈಲೈಟ್ ಮಾಡಲಿದೆ ಎಂದರು.
ಇಲ್ಲಿ ಕೃಷಿ ಟೆಕ್ ಸ್ಟಾರ್ಟಪ್‌ಗಳು, ರೈತರು, ರೈತ ಉತ್ಪಾದಕ ಸಂಸ್ಥೆಗಳು, ಆಹಾರ ವ್ಯವಸಾಯ ಕಂಪನಿಗಳು, ಕೃಷಿ ಇನ್‌ಪುಟ್ ಸರಬರಾಜುದಾರರು, ರಫ್ತುಗಾರರು, ಸಂಶೋಧನಾ ಸಂಸ್ಥೆಗಳು, ಲಾಜಿಸ್ಟಿಕ್ ಪೂರೈಕೆದಾರರು ಮತ್ತು ಹಣಕಾಸು ಸಂಸ್ಥೆಗಳಂತಹ ಅನೇಕ ಸಂಸ್ಥೆಗಳು ಪಾಲ್ಗೊಳ್ಳಲಿದ್ದಾರೆ. ಪ್ರದರ್ಶನದಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಪ್ರದರ್ಶಕರು, ೩೦ ಸಾವಿರಕ್ಕೂ ಹೆಚ್ಚು ಅಧಿಕ ವ್ಯವಹಾರ ಪ್ರತಿನಿಧಿಗಳನ್ನು ಆಕರ್ಷಿಸುತ್ತದೆ. ಈ ಸಮ್ಮಿಟ್‌ನಲ್ಲಿ ೨೫ ಸಾವಿರಕ್ಕೂ ಅಧಿಕ ವ್ಯವಹಾರ ಭೇಟಿ, ಮತ್ತು ಪ್ರತಿದಿನ ೨ ಲಕ್ಷಕ್ಕೂ ಹೆಚ್ಚು ರೈತರು, ಉದ್ಯಮಿಗಳು ಹಾಗೂ ಸಾರ್ವಜನಿಕರು ಭೇಟಿ ನೀಡಬಹುದೆಂದು ಅಂದಾಜಿಸಲಾಗಿದೆ ಎಂದು ಹೇಳಿದರು.ಗೋಷ್ಠಿಯಲ್ಲಿ ಉಪಾಧ್ಯಕ್ಷ ಬಿ.ಪಿ.ಶಶಿಧರ್, ಅಗ್ರಿಟೆಕ್ ಸಮ್ಮಿಟ್ ಚೇರ್ಮನ್ ರೂಪಾರಾಣಿ, ಎಫ್‌ಕೆಸಿಸಿಐ ನಿರ್ದೇಶಕರಾದ ಕೆ.ಎನ್.ನರಸಿಂಹಮೂರ್ತಿ, ಎನ್.ಸತೀಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಪ್ರಭಾಕರನ್ ಇದ್ದರು.
೨೩ಕೆಎಂಎನ್‌ಡಿ-೩ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾರೆಡ್ಡಿ ಮಾತನಾಡಿದರು.