ಸಾರಾಂಶ
ಬೀದರ್: ದೊಡ್ಡ ಕನಸು ಹೊತ್ತ ವಿದ್ಯಾರ್ಥಿಗಳು ಒಂದು ಕಾಲದಲ್ಲಿ ಬೀದರ್ ಬಿಟ್ಟು ಬೇರೆ ಬೇರೆ ಜಿಲ್ಲೆಗಳಿಗೆ ಉನ್ನತ ಶಿಕ್ಷಣಕ್ಕಾಗಿ ಹೋಗುತ್ತಿದ್ದರು ಆದರೆ ಇಂದು ಉತ್ತಮ ಶಿಕ್ಷಣ ಕಲ್ಪಿಸುತ್ತಿರುವ ಸಂಸ್ಥೆಗಳಿಂದಾಗಿ ಸ್ಥಿತಿಗತಿ ಬದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದಲ್ಲಿ ಲಿಟಲ್ ಬಡಿ ಇಂಟರ್‌ನ್ಯಾಷನಲ್ ಪ್ರೀ ಸ್ಕೂಲ್‌ನ್ನು ಅನ್ನು ನಾಡೋಜ ಬಸವಲಿಂಗ ಪಟ್ಟದೇವರು, ಅವಧೂತಗಿರಿ ಮಹಾರಾಜರು ಮತ್ತು ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರ ಸಾನ್ನಿಧ್ಯದಲ್ಲಿ ಉದ್ಘಾಟಿಸಿ ಮಾತನಾಡಿ, ಶೈಕ್ಷಣಿಕ ಪ್ರಗತಿಯನ್ನು ಜಿಲ್ಲೆಯು ಕಾಣುತ್ತಿದೆ ಎಂದರು.ಶಾಹೀನ್ ಶಿಕ್ಷಣ ಸಂಸ್ಥೆ ಹಾಗೂ ಹಿರೇಮಠ ಸಂಸ್ಥಾನದಂತಹ ಸಂಸ್ಥೆಗಳು ಪ್ರತಿಭೆಗಳ ಕೊರತೆ ನೀಗಿಸಿವೆ ಆದರೂ ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಕ್ರಾಂತಿ ಆಗಬೇಕಿದೆ. ಅಂತರರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಅವಶ್ಯಕತೆ ಜಿಲ್ಲೆಗೆ ಬೇಕಿದೆ. ಶಾಲೆಗೆ ಸೇರಿಸಿದ ತಕ್ಷಣ ಪೋಷಕರ ಜವಾಬ್ದಾರಿ ಮುಗಿಯುವದಿಲ್ಲ, ಶಿಕ್ಷಕರು ವಿದ್ಯಾರ್ಥಿಗಳಿಗೆ ದಯೆ, ಕರುಣೆಯಿಂದ ಉತ್ತಮ ವಿದ್ಯೆ ಒದಗಿಸಿದಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗುತ್ತಾರೆ ಎಂದು ನುಡಿದರು.
ಜಿಲ್ಲೆಯ ಹಿರಿಯ ಪತ್ರಕರ್ತ ಬಾಬು ವಾಲಿ ಅವರ ಪುತ್ರಿ ಡಾ.ದೀಪ ಬಾಲೋಡೆ ನೇತೃತ್ವದಲ್ಲಿ ಯುಕೆ ಮಾದರಿಯ ಲಿಟಲ್ ಬಡಿ ಇಂಟರ್‌ನ್ಯಾಷನಲ್ ಸ್ಕೂಲ್‌ನಂತಹ ಒಳ್ಳೆ ಶಾಲೆ ಬೀದರ್ ಜಿಲ್ಲೆಯಲ್ಲಿ ಆರಂಭಗೊಂಡಿದ್ದು, ಖುಷಿ ತಂದಿದೆ. ಜಿಲ್ಲೆಯ ಜನರು ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, ಮೈಸೂರಿನಲ್ಲಿ ವಿಶ್ವವಿದ್ಯಾಲಯಗಳು ತೆರೆದಾಗ ಜಿಲ್ಲೆಯಲ್ಲಿ ಪದವಿ ಪೂರ್ವ ಕಾಲೇಜುಗಳು ಇದ್ದಿಲ್ಲ. ಇಂದು ಜಿಲ್ಲೆಯಲ್ಲಿ ಹಿರೇಮಠ ಸಂಸ್ಥಾನ ಉತ್ತಮ ವಿಶ್ವವಿದ್ಯಾಲಯ ಕಟ್ಟಿದೆ. ಶಿಖಾಮಣಿ ಅವಧೂತಗಿರಿ ಮಹಾರಾಜರು ಜಿಲ್ಲೆಯಲ್ಲಿ ಒಳ್ಳೆಯ ವಿದ್ಯಾ ಕೇಂದ್ರವನ್ನು ನಡೆಸುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಎಂ.ಜಿ.ಮುಳೆ ಮಾತನಾಡಿ, ಕಾಲೇಜು ಸ್ಥಾಪನೆ ಮಾಡಿ ನಡೆಸುವುದು ಅಷ್ಟು ಕಷ್ಟವೇನಲ್ಲ ಆದರೆ ಪ್ರೀ ಸ್ಕೂಲ್ ಆರಂಭಿಸಿ ಅಷ್ಟು ಚಿಕ್ಕ ಚಿಕ್ಕ ಮಕ್ಕಳನ್ನು ನಿರ್ವಹಿಸುವುದು ತುಂಬಾ ಕಷ್ಟದ ಕೆಲಸ. ಇದನ್ನು ಸವಾಲಾಗಿ ಪಡೆದ ಡಾ.ದೀಪಾ ಡಾ. ಸಂತೋಷ ಬಾಲೋಡೆ ಅವರಿಗೆ ಶುಭವಾಗಲಿ ಎಂದು ನುಡಿದರು.ಪೌರಾಡಳಿತ ಸಚಿವ ರಹೀಮ್ ಖಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದರು. ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ನಗರಸಭೆ ಅಧ್ಯಕ್ಷ ಎಂಡಿ ಗೌಸ್, ಹಿರಿಯರಾದ ಬಸವರಾಜ ಪಾಟೀಲ್ ಅಷ್ಟೂರ, ನಗರಸಭೆ ಸದಸ್ಯರಾದ ಶಶಿ ಹೊಸಳ್ಳಿ, ರಾಜರಾಮ ಚಿಟ್ಟಾ, ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ ಉಪಸ್ಥಿತರಿದ್ದರು.
ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಡಾ.ದೀಪಾ ಬಾಲೋಡೆ ನಿರೂಪಿಸಿ ಸ್ವಾಗತಿಸಿದರು. ಪ್ರೀ ಸ್ಕೂಲ್‌ನ ಸೆಂಟರ್ ಹೆಡ್ ಕಾವ್ಯ ವಂದಿಸಿದರು.