ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಮಣಿಪಾಲ್ ಸ್ಕೂಲ್ ಆಫ್ ನರ್ಸಿಂಗ್ ವತಿಯಿಂದ ಅಂತಾರಾಷ್ಟ್ರೀಯ ದಾದಿಯರ ದಿನವನ್ನು ವಿವಿಧ ಚಟುವಟಿಕೆಗಳೊಂದಿಗೆ ಶುಕ್ರವಾರ ಆಚರಿಸಲಾಯಿತು.ಶ್ರೇಷ್ಟ ದಾದಿ ಫ್ಲೋರೆನ್ಸ್ ನೈಟಿಂಗೇಲ್ ಅವರ ಜನ್ಮದಿನವನ್ನು ದಾದಿಯರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ವರ್ಷ ‘ನಮ್ಮ ದಾದಿಯರು, ನಮ್ಮ ಭವಿಷ್ಯ: ಆರೈಕೆಯ ಆರ್ಥಿಕ ಶಕ್ತಿ’ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಮಾಹೆಯ ಮಣಿಪಾಲದ ಬೋಧಕ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್ ಮಾತನಾಡಿ, ರೋಗಿಗಳ ಆರೈಕೆಯಲ್ಲಿ ದಾದಿಯರು ವಹಿಸುವ ಮೌಲಿಕ ಸೇವೆ ಮತ್ತು ಅವರು ರೋಗಿಗಳೊಂದಿಗೆ ಕಳೆಯುವ ಮಹತ್ವದ ಸಮಯ ಶ್ಲಾಘನೀಯ ಎಂದರು.ಕಸ್ತೂರ್ಬಾ ಆಸ್ಪತ್ರೆಯ ನಿವೃತ್ತ ಸ್ಟಾಫ್ ನರ್ಸ್ ವಿವಿಯನ್ ವಿಲ್‌ಫ್ರೆಡ್ ಸೋನ್ಸ್ ಮತ್ತು ಕಡೆಕಾರಿನ ಗ್ರಾಮೀಣ ಹೆರಿಗೆ ಮತ್ತು ಶಿಶುಪಾಲನಾ ಕೇಂದ್ರದ ನಿವೃತ್ತ ಎನ್‌ಎನ್‌ಎಂ ಸಿಬ್ಬಂದಿ ಸಾಕಮ್ಮ ಅವರನ್ನು ರೋಗಿಗಳ ಕ್ಷೇಮಪಾಲನೆ, ಸಾಮುದಾಯಿಕ ಆರೋಗ್ಯ ಕ್ಷೇತ್ರದ ಕೊಡುಗೆ ಮತ್ತು ವಿದ್ಯಾರ್ಥಿ ಕಲಿಕೆಗೆ ನೀಡಿದ ಪ್ರೋತ್ಸಾಹಕ್ಕಾಗಿ ಸನ್ಮಾನಿಸಲಾಯಿತು.
ಮಂಗಳೂರಿನ ಫಾದರ್ ಮುಲ್ಲರ್ಸ್ ಕಾಲೇಜ್ ಆಫ್ ನರ್ಸಿಂಗ್‌ನ ಸಾಮುದಾಯಿಕ ಆರೋಗ್ಯ ಆರೈಕೆ ವಿಭಾಗದ ಪ್ರಾಧ್ಯಾಪಕಿ ಡಾ. ದೆವಿನಾ ಇ. ರೊಡ್ರಿಗಸ್ ಆವರು ಧ್ಯೇಯವಾಕ್ಯದ ಬಗ್ಗೆ ಉಪನ್ಯಾಸ ನೀಡಿದರು.ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್‌ನ ಡೀನ್ ಡಾ. ಜುಡಿತ್ ಎ. ನೊರೊನ್ಹ ಸ್ವಾಗತಿಸಿದರು. ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯ ಸಂಯೋಜಕಿ ರಂಜನಿ ಪಿ., ಅಂತಾರಾಷ್ಟ್ರೀಯ ದಾದಿಯರ ದಿನದ ಚಟುವಟಿಕೆಗಳ ಕುರಿತ ಸಮಗ್ರ ವರದಿಯನ್ನು ಪ್ರಸ್ತುತಪಡಿಸಿದರು.
ಅಸೋಸಿಯೇಟ್ ಡೀನ್ ಡಾ. ಟೆಸ್ಸಿ ಟ್ರೀಸಾ ಜೋಸ್ ಅತಿಥಿಗಳನ್ನು ಪರಿಚಯಿಸಿದರು.ಮಣಿಪಾಲ್ ಸ್ಕೂಲ್ ಆಫ್ ನರ್ಸಿಂಗ್‌ನ ಪ್ರಿನ್ಸಿಪಾಲ್ ಡಾ. ಲೀನಾ ಸೀಕ್ವೆರ, ಸನ್ಮಾನಿತರ ಸಾಧನೆಯ ಕುರಿತು ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಸಹ ಸಂಯೋಜಕರಾದ ಡಾ. ಸವಿತಾ ಪ್ರಭು ವಂದಿಸಿದರು.