ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುರೇಷ್ಮೆ ಮತ್ತು ರೇಷ್ಮೆ ಉದ್ಯಮಕ್ಕೆ ಸಂಬಂದಿಸಿದ ಅಂತಾರಾಷ್ಟ್ರೀಯ ತರಬೇತಿ ಶಿಬಿರವು ಫೆ. 19ರಂದು ಮುಗಿದಿದ್ದರಿಂದ 7 ರಾಷ್ಟ್ರಗಳ 21 ಅಭ್ಯರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.ತರಬೇತಿ ವಿಭಾಗದ ಮುಖ್ಯಸ್ಥ ಡಾ.ಆರ್. ಮೀನಾಲ್ ಶಿಬಿರಾರ್ಥಿಗಳ ವಿವರ ಮಂಡಿಸಿದರು. ಸಹಾಯಕ ಕಾರ್ಯದರ್ಶಿ ಪದ್ಮನಾಭ ನಾಯಕ್ ಅವರು ರೇಷ್ಮೆ ಉದ್ಯಮಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ತರಬೇತಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಿದರು.ಶಿಬಿರಾರ್ಥಿಯಾಗಿ ಡಾ. ಅಡೆಲಾ ರಮೊನ ಮೊಯಿಸ ಮಾತನಾಡಿ, ತಾವು ಈ ಶಿಬಿರದಲ್ಲಿ ರೇಷ್ಮೆ ಕೃಷಿಗೆ ಸಂಬಂದಿಸಿದ ಸಂಪೂರ್ಣ ಮಾಹಿತಿ ಪಡೆದಿದ್ದು ಈ ಜ್ಞಾನವನ್ನು ತಮ್ಮ ರಾಷ್ಟ್ರದಲ್ಲಿ ಬಳಕೆ ಮಾಡಲಾಗುವುದು. ಇದು ತುಂಬಾ ಉಪಯುಕ್ತ ಎಂದರು.ಸದಸ್ಯ ಕಾರ್ಯದರ್ಶಿ ಪಿ. ಶಿವಕುಮಾರ್ ಮಾತನಾಡಿ, ನೀವು ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಮೈಸೂರಿನಿಂದ ಹಲವಾರು ತಾಂತ್ರಿಕತೆಗಳನ್ನು ತಿಳಿದಿದ್ದು ಅದನ್ನು ತಮ್ಮ ರಾಷ್ಟ್ರದಲ್ಲಿ ರೇಷ್ಮೆ ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.7 ರಾಷ್ರ್ಟಗಳ 21 ಅಭ್ಯರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಮಾಣ ಪತ್ರ ಮತ್ತು ಮೈಸೂರು ಅರಮನೆಯ ನೆನಪಿನ ಕಾಣಿಕೆ ನೀಡಲಾಯಿತು.ವಿದೇಶಾಂಗ ವ್ಯವಹಾರಗಳ ಹೆಚ್ಚುವರಿ ಕಾರ್ಯದರ್ಶಿ ವಿರಾಜ್ ಸಿಂಗ್ ಮಾತನಾಡಿ, ತಾವು ಭಾರತಕ್ಕೆ ಬಂದು ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ತಿಳಿದಿದ್ದು ತಾವು ಇದನ್ನು ತಮ್ಮ ದೇಶದಲ್ಲಿ ಬಳಕೆ ಮಾಡಬೇಕು. ನಾವು ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ವಿಜ್ಞಾನಿಗಳ ಸಹಾಯ ಅವಶ್ಯಕತೆ ಇರುವ ಕುರಿತು ಮನವಿ ಬಂದರೆ ಅದನ್ನು ಪರಿಗಣಿಸಿ ವಿಷಯ ಪರಿಣಿತರನ್ನು ಕಳುಹಿಸಲಾಗುವುದು ಎಂದರು.ಮುಂದಿನ ದಿನಗಳಲ್ಲಿ ವಿವಿಧ ರೀತಿಯ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭ ಕೋರಿದರು.ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ನಿರ್ದೇಶಕ ಡಾ.ಎಸ್. ಗಾಂಧಿ ದಾಸ್ ಸ್ವಾಗತ ಕೋರಿದರು. ವಿಜ್ಞಾನಿ ಡಾ.ಎಲ್. ಕುಸುಮಾ ಕಾರ್ಯಕ್ರಮ ನಿರೂಪಿಸಿದರು. ಡಾ. ರೇವಪ್ಪ ವಂದಿಸಿದರು. ಸಂಸ್ಥೆಯ ವಿಜ್ಞಾನಿಗಳು, ಅಧಿಕಾರಿ, ಸಿಬಂದಿ, ಯೋಜನಾ ಸಹಾಯಕರು ಭಾಗವಹಿಸುವರು.