ಲಿಂಗ ಸಮಾನತೆ ಇರಬೇಕು, ತಾರತಮ್ಯ ಇರಬಾರದು

| Published : Mar 14 2025, 12:35 AM IST

ಸಾರಾಂಶ

ಗಂಡೆಂದು ಸುಮ್ಮನೆ ಕೂರಿಸುವುದು, ಹೆಣ್ಣೆಂದು ಹೆಚ್ಚಿನ ಕೆಲಸ ಕೊಡುವುದು ಸರಿಯಲ್ಲ. ಸಮಾನತೆ ಮನೆಗಳಿಂದಲೇ ಆರಂಭವಾಗಬೇಕು

ಕನ್ನಡಪ್ರಭ ವಾರ್ತೆ ಮೈಸೂರುಲಿಂಗ ಸಮಾನತೆ ಇರಬೇಕು, ತಾರತಮ್ಯ ಇರಬಾರದು ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶರಾದ ಉಷಾರಾಣಿ ತಿಳಿಸಿದರು.ನಗರದ ಕಲಾಮಂದಿರದಲ್ಲಿ ನ್ಯಾಯಾಂಗ ಇಲಾಖೆ ಮತ್ತು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘ ಸಂಯುಕ್ತವಾಗಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.ಗಂಡೆಂದು ಸುಮ್ಮನೆ ಕೂರಿಸುವುದು, ಹೆಣ್ಣೆಂದು ಹೆಚ್ಚಿನ ಕೆಲಸ ಕೊಡುವುದು ಸರಿಯಲ್ಲ. ಸಮಾನತೆ ಮನೆಗಳಿಂದಲೇ ಆರಂಭವಾಗಬೇಕು. ಹೆಣ್ಣು ಹೆಣ್ಣೇ, ಗಂಡು ಗಂಡೇ. ಅವರವರ ಕೆಲಸ ಅವರವರು ಮಾಡಲೇಬೇಕು. ಆದರೆ, ಪರಸ್ಪರ ಗೌರವಿಸುತ್ತಾ ಮುಂದೆ ಸಾಗಬೇಕು ಎಂದು ಅವರು ಹೇಳಿದರು.ನಾವೂ ಬಹಳಷ್ಟು ಸಮಸ್ಯೆ ಎದುರಿಸಿಯೇ ಈ ಹಂತಕ್ಕೆ ಬಂದಿದ್ದೇವೆ. ಸಮಸ್ಯೆಗಳು ಎಲ್ಲರಿಗೂ ಇರುತ್ತವೆ. ಅವೆಲ್ಲವನ್ನೂ ಮೀರಿ ಛಲದಿಂದ ಬದುಕಿ ಸಾಧನೆ ತೋರಬೇಕು. ಹಲವು ಜವಾಬ್ದಾರಿಯನ್ನು ಹೊತ್ತುಕೊಂಡು ಕುಟುಂಬವನ್ನು ನಿರ್ವಹಿಸುವ ಜೊತೆಗೆ ದೇಶದ ಸಂಸ್ಕೃತಿಯನ್ನು ಉಳಿಸುವ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯನ್ನು ನಮ್ಮ ಹಿಂದೂ ಸಂಸ್ಕೃತಿಯಲ್ಲಿ ನೀಡಲಾಗಿದೆ ಎಂದು ಅವರು ತಿಳಿಸಿದರು. ಮಹಿಳಾ ಸಮಾನತೆ ಶೇ.100 ಅನುಷ್ಠಾನಕ್ಕೆ ಬಂದಿಲ್ಲಕುಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಸಾವಿತ್ರಿ ಶಿವಪುತ್ರ ಕುಜ್ಜಿ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಪ್ರಾವೀಣ್ಯತೆ ತೋರಿಸುತ್ತಿದ್ದಾರೆ. ಪುರುಷರಿಗಿಂತ ಕಡಿಮೆ ಏನಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಯಾವುದೇ ಹುದ್ದೆಯಲ್ಲಿದ್ದರೂ ಶೇ.90 ರಷ್ಟು ಮಹಿಳಾ ನೌಕರರು ಮನೆಯಲ್ಲಿ ದರ್ಪವನ್ನು ತೋರಿಸುವುದಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯ ಕಡಿಮೆಯಾಗಿದೆ ಎನ್ನಲಾಗುವುದಿಲ್ಲ. ಮಹಿಳಾ ಸಮಾನತೆ ಇವರೆಗೂ ಶೇ.100 ರಷ್ಟು ಅನುಷ್ಠಾನಕ್ಕೆ ಬಂದಿಲ್ಲ ಎಂದು ವಿಷಾದಿಸಿದರು.ಇದೇ ವೇಳೆ ಉದ್ಯೋಗಸ್ಥ ಮಹಿಳೆಯರ ಮಾನಸಿಕ ಸಮಸ್ಯೆಗಳು ಮತ್ತು ಅದನ್ನು ಎದುರಿಸುವ ವಿಧಾನ ಕುರಿತು ಮನಃಶಾಸ್ತ್ರಜ್ಞೆ ಭಾರತಿ ಕುಲಶೇಖರ್‌ ಹಾಗೂ ಒತ್ತಡ ನಿವಾರಣೆಗಾಗಿ ಸರಳ ಧ್ಯಾನ ಬಗ್ಗೆ ಧ್ಯಾನತಜ್ಞೆ ಮನೋರಮಾ ಉಪನ್ಯಾಸ ನೀಡಿದರು.ನಂತರ ಶ್ರೀ ದುರ್ಗಾ ನೃತ್ಯ ಅಕಾಡೆಮಿಯ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ ಮಹಿಳಾ ನೌಕರರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.3ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಕೆ. ಭಾಗ್ಯಾ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಂಗ ಇಲಾಖೆಯ ನೌಕರರಾದ ಭಾರತಿ, ವಸುಧಾ, ಹೇಮಲತಾ, ಗೀತಾ, ರಾಜೇಶ್ವರಿ, ಅನಿತಾಕುಮಾರಿ, ಯಶೋದಾ ಮೊದಲಾದವರು ಇದ್ದರು.