ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ತಾಲೂಕಿನ ಮೋಕಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ವತಿಯಿಂದ "ಅಂತರಾಷ್ಟ್ರೀಯ ಮಹಿಳಾ ದಿನ " ಆಚರಿಸಲಾಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಿವೃತ್ತ ಪ್ರಾಧ್ಯಾಪಕಿ ಪ್ರೊ. ಎಸ್.ಎಂ. ಶೈಲಜಾ ಅವರು, ಮಹಿಳೆಯನ್ನು ತಾಳ್ಮೆಯ ಸಾಕಾರ ಮೂರ್ತಿ ಎಂದು ಬಣ್ಣಿಸಲಾಗುತ್ತದೆ. ಆದರೆ, ಮಹಿಳೆ ಬರೀ ತಾಳ್ಮೆಯ ಸಾಕಾರವಷ್ಟೇ ಅಲ್ಲ; ಶಕ್ತಿ ಕೇಂದ್ರವೂ ಆಗಿದ್ದಾಳೆ. ಇಂದು ಎಲ್ಲ ರಂಗಗಳಲ್ಲಿ ಪ್ರಗತಿ ಸಾಧಿಸುತ್ತಿದ್ದಾಳೆ. ಕೌಟುಂಬಿಕ ಅಡ್ಡಗೋಡೆಗಳ ನಡುವೆ ಸಾಧನೆಯ ಹಾದಿ ತುಳಿದಿದ್ದಾಳೆ ಎಂದರು.
ಕೆಎಂಎಫ್‌ನ ಹಿರಿಯ ಅಧಿಕಾರಿ ಎಚ್. ಸರೋಜಾ ಅವರು ಮಾತನಾಡಿ, ಮಹಿಳಾ ದಿನಾಚರಣೆ ನಡೆದು ಬಂದು ಹಾದಿ, ಮಹಿಳೆಯರ ಸಾಧನೆ ಹಾಗೂ ಅನೇಕ ಸಾಮಾಜಿಕ ಕಟ್ಟುಪಾಡುಗಳ ನಡುವೆ ಮಹಿಳೆಯರು ಸಾಧನೆಗೈದ ಪರಿ ಕುರಿತು ವಿವರಿಸಿದರು.ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಮಹಿಳಾ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಶ್ರೀದೇವಿ ಅವರು, ಮಹಿಳಾ ಅಭಿವೃದ್ಧಿ ಮತ್ತಷ್ಟೂ ವೇಗ ಪಡೆದುಕೊಳ್ಳಬೇಕಾದ ಅಗತ್ಯವಿದೆ. ಮಹಿಳೆಯರ ಆರ್ಥಿಕ ಹಾಗೂ ಶೈಕ್ಷಣಿಕ ಸಬಲೀಕರಣಗೊಳ್ಳಬೇಕಾಗಿದೆ. ಪ್ರಮುಖವಾಗಿ ಮಹಿಳೆಯರ ಹಕ್ಕುಗಳ ರಕ್ಷಣೆಯಾಗಬೇಕಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಹರಡಿಕೊಂಡಿರುವ ಲಿಂಗಪೂರ್ವ ಗ್ರಹಿಕೆಗಳನ್ನು ಹೋಗಲಾಡಿಸಬೇಕಾಗಿದೆ ಎಂದು ತಿಳಿಸಿದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬಿ.ಜಿ. ಕಲಾವತಿ ಅವರು, ಮಣ್ಣುಮರ ಬಳ್ಳಿಯ ಅಸ್ವಿತ್ವ ಪ್ರಾಕೃತಿಕವಾಗಿ ಹೇಗೆ ಸಹಜವೊ ಹಾಗೆಯೇ ಸಮಾಜದಲ್ಲಿ ಗಂಡು-ಹೆಣ್ಣುಗಳ ನಡುವಿನ ಸಹಕಾರ, ಸಹಚರ್ಯೆ ಅವಶ್ಯಕವಾಗಿದೆ. ಈ ಮೂಲಕ ನಾವೆಲ್ಲರೂ ಮಹಿಳಾ ಅಸ್ವಿತ್ವಕ್ಕೆ ಒತ್ತು ಕೊಡಬೇಕಾಗಿದೆ ಎಂದು ತಿಳಿಸಿದರು.ತಿರುಮಲ ಮತ್ತು ತಂಡ ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆ ಹಾಡಿದರು. ಜೀವೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.