ನಾರಾಯಣ ಗುರುಗಳ ಜೀವನ ಸಂದೇಶ ಅರ್ಥೈಸಿ: ಶಾಸಕ ಡಾ.ಮಂತರ್ ಗೌಡ

| Published : Nov 19 2024, 12:47 AM IST

ನಾರಾಯಣ ಗುರುಗಳ ಜೀವನ ಸಂದೇಶ ಅರ್ಥೈಸಿ: ಶಾಸಕ ಡಾ.ಮಂತರ್ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

17ನೇ ವರ್ಷದ ಅದ್ಧೂರಿ ಓಣಂ ಆಚರಣೆ ಸಭಾ ಕಾರ್ಯಕ್ರಮ ನಡೆಯಿತು. ಶಾಸಕ ಡಾ. ಮಂತರ್‌ಗೌಡ ಮಾತನಾಡಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಶ್ರೀ ನಾರಾಯಣ ಗುರುಗಳ ಜೀವನ ಸಂದೇಶವಾದ ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು ಮನುಷ್ಯರಿಗೆ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.

ಸೋಮವಾರ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸುಂಟಿಕೊಪ್ಪ ಮಲಯಾಳಿ ಸಮಾಜದ ವತಿಯಿಂದ 17ನೇ ವರ್ಷದ ಅದ್ಧೂರಿ ಓಣಂ ಆಚರಣೆ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯೆಯಿಂದ ಪ್ರಬುದ್ಧರಾಗಿರಿ ಸಂಘಟನೆಯಿಂದ ಶಕ್ತರಾಗಿರಿ ಎಂಬ ಸಂದೇಶವನ್ನು ತಮ್ಮ ಸಮಾಜದಲ್ಲಿ ಮಾತ್ರವೇ ಅನುಸರಿಸದೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳನ್ನು ತಲುಪುವಂತೆ ಕಳೆದ 16 ವರ್ಷಗಳಿಂದ ಓಣಂ ಆಚರಣೆಯಲ್ಲಿ ತೊಡಗಿಸಿಕೊಂಡು ಹಬ್ಬವನ್ನು ಆಚರಿಸುತ್ತಿರುವುದು ಹರ್ಷದಾಯಕ ವಿಚಾರ ಎಂದು ತಿಳಿಸಿದರು.

ಶ್ರೀ ನಾರಾಯಣ ಗುರುಗಳ ಮುಖ್ಯ ಸಂದೇಶವಾದ ಸಮಾಜ ಬಾಂಧವರು ಉನ್ನತ ಶಿಕ್ಷಣವನ್ನು ಪಡೆಯುವುದು ಗುರಿಯಾಗಬೇಕು. ವಿವಿಧತೆಯಲ್ಲಿ ಏಕತೆ ಮತ್ತು ಸಮಾಜದಲ್ಲಿ ಸಮಬಾಳು ಸಮಪಾಲುತತ್ವವನ್ನು ತರುವಲ್ಲಿ ಶ್ರಮಿಸುತ್ತಿದ್ದು, ನಾವೆಲ್ಲಾರೂ ಈ ವಿಚಾರದಲ್ಲಿ ಸುಂಟಿಕೊಪ್ಪ ಮಲಯಾಳಿ ಸಮಾಜವನ್ನು ಅಭಿನಂದಿಸಬೇಕಾಗಿದೆ ಎಂದು ಹೇಳಿದ ಅವರು ಈ ಕಾರಣಕ್ಕಾಗಿಯೇ ಕಳೆದ 16ವರ್ಷಗಳಿಂದ ಓಣಂ ಆಚರಣೆಯು ವರ್ಷದಿಂದ ವರ್ಷಕ್ಕೆ ಅದ್ಧೂರಿ ಮತ್ತು ವರ್ಣರಂಜಿತವಾಗಿ ನಡೆಯುತ್ತಿರುವುದು ಸಾಕ್ಷಿಯಾಗಿದೆ ಎಂದು ಅವರು ಶ್ಲಾಘಿಸಿದರು.

ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ಪನ್ಯ ಪ್ರಕರಣವು ಒಂದು ವಿಶೇಷ ಮತ್ತು ಅಪರೂಪದ ಪ್ರಕರಣಗಳಲ್ಲಿ ಒಂದಾಗಿದ್ದು, ತಮ್ಮ ಸೇವಾವಧಿಯಲ್ಲಿ ಅತ್ಯಂತ ಸವಾಲಿನ ಪ್ರಕರಣವಾಗಿದ್ದು, ಇದನ್ನು ತಮ್ಮ ಮೇಲಾಧಿಕಾರಿ ಸಹೋದ್ಯೋಗಿಗಳ ಬೆಂಬಲ ಮಾರ್ಗದರ್ಶನದಿಂದ ತಂಡದ ಸ್ಪೂರ್ತಿಯಿಂದ ಮಾಡಿದ ಪರಿಣಾಮ ಪ್ರಕರಣವನ್ನು ಭೇದಿಸಲು ಸಾಧ್ಯವಾಯಿತು. ಯಾರು ಕೂಡ ಕಾನೂನಿನ ಮುಂದೆ ದೊಡ್ಡರಾಗುವ ಪ್ರಯತ್ನ ಕಾನೂನನ್ನು ಉಲ್ಲಂಘಿಸಿ ಜೀವನ ಮಾಡಬಹುದು ಎಂಬ ಚಿಂತನೆಗಳಿದ್ದರೇ ಈ ಪ್ರಕರಣವನ್ನು ಅವಲೋಕಿಸಿ ಅಂತಹ ಋಣಾತ್ಮಕ ಚಿಂತನೆಗಳಿಂದ ಹೊರ ಬರಬೇಕೆಂದು ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ಲತೀಫ್ ಮಾತನಾಡಿ, ನಾವೆಲ್ಲರೂ ಪರಸ್ಪರ ಸಹೋದರತೆಯಿಂದ ಸಾಮರಸ್ಯದಿಂದ ಬಾಳಬೇಕು ಈ ರೀತಿಯ ಕಾರ್ಯಕ್ರಮಗಳು ಆಯೋಜಿಸುವ ಸಂದರ್ಭ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸ ಬೇಕು ಎಂದು ಕರೆ ನೀಡಿದರು.

ಮಡಿಕೇರಿ ಹಿಂದೂ ಮಲಯಾಳಿ ಸಮಾಜದ ಸ್ಥಾಪಕಾಧ್ಯಕ್ಷ ಕೆ. ಎಸ್. ರಮೇಶ್ ಮಾತನಾಡಿ, ಸಮಾಜ ಬಾಂಧವರು ತಮ್ಮ ಮಕ್ಕಳ ಉನ್ನತ ಶಿಕ್ಷಣದತ್ತ ಹೆಚ್ಚು ಗಮನಹರಿಸಬೇಕು. ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆ ಕೂಡ ಮಾದಕ ವ್ಯಸನಿಗಳ ಆಶ್ರಯ ತಾಣವಾಗುತ್ತಿದ್ದು ಇದರಲ್ಲಿ ಯುವ ಜನಾಂಗ ಹೆಚ್ಚು ಹೆಚ್ಚು ಕಂಡು ಬರುತ್ತಿರುವುದು ಅತಂಕದ ವಿಚಾರ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಚಲನ ವಲನಗಳನ್ನು ಎಚ್ಚರಿಕೆಯಿಂದ ಗಮನಿಸುವುದು ಅಗತ್ಯ ಎಂದು ಅವರು ಕಿವಿ ಮಾತು ಹೇಳಿದರಲ್ಲದೆ ಸಮಾಜ ಬಾಂಧವರು ವೈವಾಹಿಕ ವೇದಿಕೆಯನ್ನು ಸೃಷ್ಟಿ ಮಾಡಿ ನಮ್ಮ ಯುವಕ ಯುವತಿಯರಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಹೆಚ್ಚು ಸಂಬಂಧಗಳು ಉಂಟಾಗುವ ರೀತಿಯಲ್ಲಿ ಹಿರಿಯರು ಆಲೋಚಿಸಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್, ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ.ವಿಜಯನ್, ಮಡಿಕೇರಿ ತಾಲೂಕಿನ ಖಜಾಂಜಿ ದಿನೇಶ್, ಮಡಿಕೇರಿ ಎಸ್.ಎನ್.ಡಿ.ಪಿ. ಅಧ್ಯಕ್ಷ ವಾಸುದೇವನ್, ಪ್ರಕಾಶ್, ಸುಂಟಿಕೊಪ್ಪ ಮಲಯಾಳಿ ಸಮಾಜದ ಸ್ಥಾಪಕಾಧ್ಯಕ್ಷ ಪಿ.ಆರ್.ಸುಕುಮಾರ್, ಪಿ.ಸಿ.ಮೋಹನ್, ವಿ.ಎ.ಸಂತೋಷ್ ಮಾತನಾಡಿದರು.

ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಎಂ.ಆರ್.ಶಶಿಕುಮಾರ್ ವಹಿಸಿದರು.

ಮಲಯಾಳಿ ಬಾಂಧವರು ಓಣಂ ಆಚರಣೆಯ ಪ್ರಮುಖ ಭಾಗವಾದ ಪೂಕಳಂ ಸ್ಪರ್ಧೆಯು ಬೆಳಗ್ಗೆ 7.30ರಿಂದ 9.30ಗಂಟೆಯವರೆಗೆ ನಾರಾಯಣ ಗುರು ಭವನದಲ್ಲಿ ನಡೆಯಿತು.

ನಂತರ 10.30 ಕ್ಕೆ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿ ನಂತರ ಮಲಯಾಳಿ ಜನಾಂಗದ ಸಾಂಪ್ರಾದಾಯಿಕ ಉಡುಗೆ ತೊಟ್ಟು ಕೇರಳದ ಚಂಡೆ ವಾದ್ಯದೊಂದಿಗೆ, ಮಾವೇಲಿ ವೇಷಾಧಾರಿಯೊಂದಿಗೆ, ನಾರಾಯಣ ಗುರುಗಳ ಭಾವಚಿತ್ರವನ್ನು ಇರಿಸಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.

ಓಣಂ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ದೇಶದ ಸೇನೆಯಲ್ಲಿ ಯೋಧರಾಗಿ ಸೇವೆಸಲ್ಲಿಸಿ ನಿವೃತ್ತಿಗೊಂಡಿರುವ ಪ್ರಶಾಂತ್, ಶಿವಪ್ರಸಾದ್, ಹಾಗೂ ಸುಂಟಿಕೊಪ್ಪ ಪನ್ಯ ತೋಟದಲ್ಲಿ ಅಂತರ್ ರಾಜ್ಯದಲ್ಲಿ ಕೊಲೆಗೈದು ಮೃತದೇಹದ ಗುರುತು ಪತ್ತೆಯಾಗದಂತೆ ಸುಟ್ಟು ಹಾಕಿರುವ ಪ್ರಕರಣವನ್ನು ಭೇದಿಸಿದ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್, ಪ್ರವೀಣ್ ಹಾಗೂ ಮಹಿಳಾ ಪೇದೆ ಆಶಾ ಅವರನ್ನು ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರ, ಓಣಂ ಸದ್ಯ ನಡೆಯಿತು. ಮಧ್ಯಾಹ್ನದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.