ಸಾರಾಂಶ
ಹೊನ್ನಾಳಿ, ನ್ಯಾಮತಿ ಪೊಲೀಸರ ಕಾರ್ಯ । ದುರುಳರೊಂದಿಗೆ ಗುಂಡಿನ ಚಕಮಕಿ । 7ರಲ್ಲಿ ನಾಲ್ವರು ವಂಚಕರ ಬಂಧನ
ಕನ್ನಡ ಪ್ರಭ ವಾರ್ತೆ ಹೊನ್ನಾಳಿ/ನ್ಯಾಮತಿ/ದಾವಣಗೆರೆಸಿನಿಮೀಯ ರೀತಿಯಲ್ಲಿ ದರೋಡೆ ಗ್ಯಾಂಗ್‌ನ್ನು ಹೊನ್ನಾಳಿ ಮತ್ತು ನ್ಯಾಮತಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕ್ರಾಸ್ ಬಳಿ ಭಾನುವಾರ ನಸುಕಿನ ಜಾವ ನಡೆದಿದೆ.
ಆರೋಪಿಗಳ ಬಂಧಿಸುವ ಯತ್ನದಲ್ಲಿ ಪೊಲೀಸರ ನಡುವೆ ಘರ್ಷಣೆ ಉಂಟಾಗಿದೆ. ತಪ್ಪಿಸಿಕೊಳ್ಳಲು ದರೋಡೆಕೋರ ಪೊಲಿಸ್ ಪೇದೆ ಮೇಲೆ ಮಚ್ಚಿನಿಂದ ದಾಳಿ ಮಾಡಿದ್ದಾನೆ. ಈ ವೇಳೆ ನ್ಯಾಮತಿ ಪೊಲೀಸ್ ಇನ್‌ಸ್ಪೆಕ್ಟರ್ ರವಿ ಆತ್ಮರಕ್ಷಣೆಗೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.ಉತ್ತರ ಪ್ರದೇಶದ ಬಾದಾಯ್ ಜಿಲ್ಲೆಯ ಕಕ್ರಾಳ ಗ್ರಾಮದ ಗುಡ್ಡು ಆಲಿಯಸ್ ಕಾಲಿಯಾ (45). ಹಜರತ್ ಆಲಿ (50). ಅಸ್ಲಾಂ ಆಲಿಯಾಸ್ ಟನ್ ಟನ್ (55). ಕಮರುದ್ದಿನ್ ಆಲಿಯಾಸ್ ಬಾಬು ಸೆರೆಲಿ (40) ಬಂಧಿತರು. ಇನ್ನು ಉತ್ತರ ಪ್ರದೇಶದ ಬಚೌರ ಗ್ರಾಮದ ರಾಜಾರಾಮ್, ಉತ್ತರ ಪ್ರದೇಶದ ನೌಲಿ ಗ್ರಾಮದ ಬಾಬುಷಾ, ಕರ್ನಾಟದ ಕೋಲಾರ ಜಿಲ್ಲೆ ಮಾಲೂರಿನ ಅಪೀಜ್ ಪಾರಾರಿಯಾಗಿರುವ ಆರೋಪಿಗಳು. ಇವರ ಪತ್ತೆಗೆ ಪೊಲೀಸರ ತಂಡಗಳನ್ನು ರಚಿಸಲಾಗಿದೆ.
ಘಟನೆಯಲ್ಲಿ ಪೇದೆ ಆನಂದ್ ಅವರ ತೋಳಿಗೆ ಮಚ್ಚಿನಿಂದ ಏಟು ಬಿದ್ದಿದೆ, ಗುಂಡಿನೇಟಿಗೆ ಒಳಗಾದ ದರೋಡೆಕೋರ ಗುಡ್ಡು (45) ಮತ್ತು ಪೇದೆಯನ್ನು ದಾವಣಗೆರೆ ಚಿಟಗೇರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.ಏತನ್ಮಧ್ಯೆ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಘಟನೆ ನಡೆದ ತಾಲೂಕಿನ ಅರಬಗಟ್ಟೆ ಕ್ರಾಸ್‌ಗೆ ಭೇಟಿ ನೀಡಿ ಪರಿಶೀಲಿಸಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು.
ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಮಾಧ್ಯಮದವರೊಂದಿಗೆ ಮಾತನಾಡಿ, ಹರಿಹರದಿಂದ ಉತ್ತರಪ್ರದೇಶದ ನೋಂದಣೆ ಇರುವ ಎರಡು ಕಾರು ಬರುತ್ತಿದ್ದವು, ಹರಿಹರ, ಹೊನ್ನಾಳಿ ಚೆಕ್‌ಪೋಸ್ಟ್ ಬಳಿ ವಾಹನಗಳನ್ನು ನಿಲ್ಲಿಸದೆ ನ್ಯಾಮತಿ ಕಡೆ ಸಾಗಿದ್ದಾರೆ. ಅರಬಗಟ್ಟೆ ಕ್ರಾಸ್ ಬಳಿ ರಾತ್ರಿ 1.30ರ ಸಮಯದಲ್ಲಿ ನ್ಯಾಮತಿ ಪೊಲೀಸರು ಎರಡು ಕಾರುಗಳನ್ನು ನಿಲ್ಲಿಸಿದ್ದಾರೆ. ಆಗ ಕಾರುಗಳಲ್ಲಿದ್ದ ದರೋಡೆಕೋರರು ಅಲ್ಲಿಂದ ಕಾಲ್ಕಿತ್ತಿದ್ದಾರೆ.ಬೆನ್ನಟ್ಟಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ ನ್ಯಾಮತಿ ಪೊಲೀಸ್ ಇನ್‌ನ್‌ಸ್ಪೆಕ್ಟರ್ ರವಿ ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗಾಯಾಳುವನ್ನು ದಾವಣಗೆರೆ ಆಸ್ಪತ್ರೆ ಸೇರಿಸಲಾಗಿದ್ದು ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ತಂಡದಲ್ಲಿ ಒಟ್ಟು 7 ಜನರಿರುವ ಬಗ್ಗೆ ಮಾಹಿತಿ ಇದ್ದು ಇನ್ನುಳಿದ ಮೂರು ಜನ ಆರೋಪಿಗಳು ತಪ್ಪಿಸಿಕೊಂಡಿದ್ದು ಇವರ ಪತ್ತೆಗಾಗಿ ಪೊಲೀಸರ 2 ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ಘಟನಾ ಸ್ಥಳದಲ್ಲಿದ್ದ ವಾಹನದಲ್ಲಿ ಮಾರಕಾಸ್ತ್ರಗಳು, 4 ಜೀವಂತ ಗುಂಡುಗಳು, ಅಕ್ಸಿಜನ ಸಿಲೆಂಡರ್ ರೆಗ್ಯುಲೇಟರ್, 3 ಕಬ್ಬಿನ ರಾಡ್, 5 ಪ್ಯಾಕೆಟ್ ಮೆಣಸಿನ ಪುಡಿ, 5 ಜತೆ ಹ್ಯಾಂಡ್ ಗ್ಲೌಸ್, ಒಂದು ಮಚ್ಚು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಸವಳಂಗ ಎಸ್‌ಬಿಐ ಬ್ಯಾಂಕ್ ದರೋಡೆಗೆ ಸ್ಕೆಚ್:
ಭಯಾನಕ ಕ್ರೈಂ ಇತಿಹಾಸ ಹೊಂದಿರುವ ಉತ್ತರಪ್ರದೇಶದ ದರೋಡೆಕೋರರು ನ್ಯಾಮತಿ ತಾಲೂಕಿನ ಸವಳಂಗ ಎಸ್‌ಬಿಐ ಬ್ಯಾಂಕ್ ದರೋಡೆ ಮಾಡಲು ಯೋಜನೆ ರೂಪಿಸಿದ್ದರು ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.ಭಾನುವಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಆರೋಪಿಗಳ ವಿರುದ್ಧ ಈಗಾಗಲೇ ದೇಶದ ವಿವಿಧೆಡೆಯ ಪೊಲೀಸ್‌ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ, ಜಾರ್ಖಂಡ್, ತಮಿಳುನಾಡು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ವಿಚಾರಣೆ ವೇಳೆ ಬೆಚ್ಚಿ ಬೀಳಿಸುವ ಮಾಹಿತಿ
ಬಂಧಿತ ಕುಖ್ಯಾತ ದರೋಡೆಕೋರರ ವಿಚಾರಣೆ ವೇಳೆ ಅವರು ಬೇರೆ ಬೇರೆ ರಾಜ್ಯಗಳಲ್ಲಿ, ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಬ್ಯಾಂಕ್ ದರೋಡೆ ಮಾಡಿದ್ದ ಸಂಗತಿಯು ಹೊರ ಬಿದ್ದಿದೆ.ದರೋಡೆಗೆ ಬ್ಯಾಂಕ್‌ಗಳನ್ನು ಹುಡುಕುತ್ತಿರುವಾಗ ಕಳೆದ 2 ದಿನಗಳಿಂದ ಸವಳಂಗ ಗ್ರಾಮದಲ್ಲಿರುವ ಎಸ್‌ಬಿಐ ಬ್ಯಾಂಕ್ ಬಳಿ ತಿರುಗಾಡಿ, ದರೋಡೆಕೋರರ ತಂಡವು ಮಾಹಿತಿ ತಿಳಿದುಕೊಂಡಿತ್ತು. ಶನಿವಾರ ತಡರಾತ್ರಿ ಸವಳಂಗ ಗ್ರಾಮದ ಎಸ್‌ಬಿಐ ಬ್ಯಾಂಕ್ ದರೋಡೆಗೆ ಪೂರ್ವ ತಯಾರಿ ಮಾಡಿಕೊಂಡು, ಹರಿಹರ-ಶಿವಮೊಗ್ಗ ರಸ್ತೆಯಲ್ಲಿ ಎರಡು ಕಾರುಗಳಲ್ಲಿ ಬಂದಿದ್ದಾಗಿ ಬಂಧಿತರು ಬಾಯಿ ಬಿಟ್ಟಿದ್ದಾರೆ. ಬಂಧಿತರು ಭಾಗಿಯಾದ ಸ್ವತ್ತು ಕಳವು ಪ್ರಕರಣ
-ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಳ್ಳಿ ಠಾಣೆಯ ಗುನ್ನೆ ನಂ 29/2022 ಕಲಂ:-457, 380 ಐಪಿಸಿ ರೀತ್ಯಾ ಪ್ರಕರಣದಲ್ಲಿ 3,18,96,508 ರು. ಮೌಲ್ಯದ ಚಿನ್ನಾಭರಣ , 14.86 ಲಕ್ಷದ 432 ರು. ನಗದು ಸೇರಿ ಒಟ್ಟು 3,33,82,940 ರು. ಮೌಲ್ಯದ ಸ್ವತ್ತು ಕಳ್ಳತನ ಮಾಡಿದ್ದಾರೆ.ಬಂಧಿತ ನಾಲ್ವರಿಂದ ಪತ್ತೆಯಾದ ಹೊಸ ಕೇಸ್
-ಶಿವಮೊಗ್ಗ ಜಿಲ್ಲೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ನಂ 152/2024 ಕಲಂ 331 (3),331(4),305(ಎ) ಬಿಎನ್ಎಸ್ ರೀತ್ಯಾ ದಾಖಲಾದ ಎಸ್‌ಬಿಐ ಬ್ಯಾಂಕ್ ಕಳ್ಳತನ ಪ್ರಕರಣದಲ್ಲಿ 1,25,000 ರು. ಮೌಲ್ಯದ ಕ್ಯಾಮೆರಾ, ಡಿವಿಆರ್, ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ವಸ್ತು ಕಳ್ಳತನ ಮಾಡಿದ್ದಾರೆ. ಹಲವು ಜಿಲ್ಲೆ, ರಾಜ್ಯಗಳಲ್ಲಿ ಆರೋಪಿಗಳು ದರೋಡೆ ಮಾಡಿರುವುದು ತಿಳಿದು ಬಂದಿದೆ.