ಅಂತಾರಾಜ್ಯ ಕಳ್ಳರ ಬಂಧನ: 19 ಬೈಕ್‌ ವಶ

| Published : Jan 24 2025, 12:48 AM IST

ಸಾರಾಂಶ

ಮೂವರು ಅಂತಾರಾಜ್ಯ ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿರುವ ಮಧುಗಿರಿ ಪೊಲೀಸರು ಆರೋಪಿಗಳಿಂದ ಸುಮಾರು 10 ಲಕ್ಷ ರು.ಬೆಲೆ ಬಾಳುವ 19 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಧುಗಿರಿ

ಮೂವರು ಅಂತಾರಾಜ್ಯ ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿರುವ ಮಧುಗಿರಿ ಪೊಲೀಸರು ಆರೋಪಿಗಳಿಂದ ಸುಮಾರು 10 ಲಕ್ಷ ರು.ಬೆಲೆ ಬಾಳುವ 19 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಪಟ್ಟಣದ ಬೈಪಾಸ್‌ ,ಕೊಡಿಗೇನಹಳ್ಳಿ ಜಂಕ್ಷನ್‌ ಬಳಿ ಪಿಎಸ್ಐ ಮುತ್ತುರಾಜ್‌ ಹಾಗೂ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆಂಧ್ರಪ್ರದೇಶದ ರೊದ್ಧಕಂಪಲ್ಲಿಯ ನರಸಿಂಹಮೂರ್ತಿ, ಸುರೇಶ್‌ ಹಾಗೂ ನರೇಶ್‌ ಎಂಬುವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅವರು ಕಳ್ಳರು ಎಂದು ಗೊತ್ತಾಗಿದೆ. ಬಂಧಿತರು ಪಾವಗಡ, ಗೌರಿಬಿದನೂರು, ಹಿಂದೂಪುರ, ಪೆನಗೊಂಡ, ಬತ್ತಲಪಲ್ಲಿ, ಮಡಕಸಿರಾ ಪಟ್ಟಣಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದರು ಎಂಬ ಮಾಹಿತಿ ಸಿಕ್ಕಿದೆ. ಜಿಲ್ಲಾ ಪೊಲೀಸ್‌ ಅಧೀಕ್ಷಕ ಕೆ.ವಿ. ಅಶೋಕ್‌ ಅವರ ನಿರ್ದೇಶನದಂತೆ ಹಾಗೂ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಅಬ್ದುಲ್‌ ಖಾದರ್‌, ಮರಿಯಪ್ಪ ಮಾರ್ಗದರ್ಶನದಲ್ಲಿ ಮಧುಗಿರಿ ಡಿವೈಎಸ್‌ಪಿ ಮುಂಜುನಾಥ್‌ ಉಸ್ತುವಾರಿಯಲ್ಲಿ ಸಿಪಿಐ ಹನುಮಂತರಾಯಪ್ಪ ನೇತೃತ್ವದಲ್ಲಿ ಪಿಎಸ್‌ಐ ಗಳಾದ ಕೆ.ಸಿ.ವಿಜಯಕುಮಾರ್, ಜೆ. ಮುತ್ತುರಾಜ್‌ ಹಾಗೂ ಸಿಬ್ಬಂದಿ ಶಿವಣ್ಣ, ಪಾಂಡುನಾಯ್ಕ್‌, ರಂಗರಾಜು, ರಂಜಿತ್ ಕುಮಾರ್‌, ಪ್ರಕಾಶ್‌ ಹಾಗೂ ರಮೇಶ್‌ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು, ತನಿಖೆ ಮುಂದುವರಿದಿದೆ.