ಸಾರಾಂಶ
ಬೇಲೂರು : ತಾಲೂಕಿನಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು ಅಧಿಕಾರಿಗಳು ಕೂಡಲೇ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಎಂ ಮಮತಾ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಡೆಂಘೀ ನಿಯಂತ್ರಣ ಹಾಗೂ ಮಲೇರಿಯಾ ನಿಯಂತ್ರಣಕ್ಕೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ಮಳೆಗಾಲ ಸಮೀಪಿಸುತ್ತಿರುವುದರಿಂದ ಹೆಚ್ಚಾಗಿ ಡೆಂಘೀ ಪ್ರಕರಣಗಳು ವ್ಯಾಪಕವಾಗಿ ಕಾಣಿಸುತ್ತಿವೆ. ತಾಲೂಕಿನಲ್ಲಿ ಸುಮಾರು ೧೦ ಡೆಂಘೀ ಪ್ರಕರಣಗಳು ದಾಖಲಾಗಿದೆ. ಇದರ ಜೊತೆ ಚಿಕನ್‌ಗುನ್ಯಾ ಪ್ರಕರಣವು ದಾಖಲಾಗಿದೆ. ಡೆಂಘೀ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಸುಮಾರು ೪೦ ಪ್ರಕರಣಗಳು ದಾಖಲಾಗಿದ್ದು ಅವರಿಗೆ ಹೆಚ್ಚಿನ ರೀತಿಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಜನಸಾಮಾನ್ಯರು ಹಾಗು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚತೆಗೆ ಮೊದಲ ಆದ್ಯತೆ ನೀಡಬೇಕು’ ಎಂದು ಹೇಳಿದರು.
‘ಪಟ್ಟಣದ ೨೩ ವಾರ್ಡ್ ಗಳಲ್ಲೂ ಸಹ ಕಡ್ಡಾಯವಾಗಿ ಕ್ರಿಮಿನಾಶಕವನ್ನು ಸಿಂಪಡಿಸುವ ಮೂಲಕ ಸ್ವಚ್ಛತೆ ಮಾಡಬೇಕು. ಅಲ್ಲದೆ ಪುರಸಭೆ ವ್ಯಾಪ್ತೀಯಲ್ಲಿ ಬರುವ ಕೋಳಿ ಅಂಗಡಿಗಳಿಗೆ ಸೂಕ್ತ ನಿರ್ದೇಶನ ನೀಡಿ ತ್ಯಾಜ್ಯವನ್ನು ಪುರಸಭೆ ಗಾಡಿಗಳಿಗೆ ಹಾಕಬೇಕು. ನಿಮ್ಮ ವ್ಯಾಪ್ತಿಯಲ್ಲಿ ಬರುವ ಗ್ಯಾರೇಜ್ ಹಾಗೂ ಗುಜುರಿ ವ್ಯಾಪಾರಿಗಳಿಗೆ ತಿಳುವಳಿಕೆ ನೋಟಿಸ್ ನೀಡಿ ಯಾವುದೇ ವಸ್ತುವನ್ನು ಶೇಖರಣೆ ಮಾಡದಂತೆ ಎಚ್ಚರಿಕೆ ವಹಿಸಬೇಕು .ಈಗಾಗಲೇ ಶಾಲಾ ಕಾಲೇಜುಗಳು ಪ್ರಾರಂಭವಾಗಿರುವುದರಿಂದ ರುಚಿ, ಶುಚಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಇದರ ಜೊತೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಕುಡಿಯಲು ಬಿಸಿ ನೀರು ಹಾಗೂ ಸೊಳ್ಳೆ ಪರದೆಗಳನ್ನು ವಿತರಿಸುವಂತೆ ಸೂಚಿಸಿದಲ್ಲದೆ ಎರಡು ದಿನಗಳಿಗೊಮ್ಮೆ ವಾಟರ್ ಟ್ಯಾಂಕ್ ಸ್ವಚ್ಚಗೊಳಿಸಬೇಕು. ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆ ಬಂದರೆ ನೇರವಾಗಿ ವಾರ್ಡನ್‌ಗಳ ಮೇಲೆ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.
ಶಾಲೆಗಳು ಪ್ರಾರಂಭವಾಗಿರುವುದರಿಂದ ಯಾವುದೇ ವಿದ್ಯಾರ್ಥಿಗಳಿಗೆ ಜ್ವರ, ಕೆಮ್ಮು ಇನ್ನಿತರ ತೊಂದರೆ ಇದ್ದರೆ ಅದನ್ನು ಪೊಷಕರಿಗೆ ತಿಳಿಸಿ ಶಾಲೆಗಳಿಗೆ ಕಳಿಸದಂತೆ ಎಚ್ಚರಿಕೆ ನೀಡಬೇಕು. ಗ್ರಾಪಂಯಲ್ಲಿ ಎಲ್ಲಾ ಪಿಡಿಒಗಳ ಸಹಕಾರ ಪಡೆದು ಪ್ರತಿಯೊಬ್ಬರೂ ಸಹ ಕಡ್ಡಾಯವಾಗಿ ಗ್ರಾಮಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವಂತೆ ಎಲ್ಲಾ ಅಭಿವೃದ್ಧಿ ಅಧಿಕಾರಿಗಳ ಪಾತ್ರ ಅತಿ ಮುಖ್ಯ. ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಶಿಕ್ಷಕರು ಮನೆ ಮನೆಗೆ ಕರ ಪತ್ರ ನೀಡುವ ಮೂಲಕ ಜಾಗೃತಿ ಮಾಡಿಸಬೇಕು ಎಂದು ಹೇಳಿದರು.
ಆ್ಯಂಬುಲೆನ್ಸ್ ಚಾಲಕರು ಸಾರ್ವಜನಿಕರಿಗೆ ತೊಂದರೆಕೊಡದಂತೆ ನಿಗಾ ವಹಿಸಬೇಕು. ಪ್ರತಿ ವಾಹನಗಳು ಎಲ್ಲಾ ದಾಖಲಾತಿಗಳನ್ನು ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಆರ್‌ಟಿಒ ಅಧಿಕಾರಿಗಳಿಗೆ ತಿಳಿಸಿ ವಾಹನ ಜಪ್ತಿ ಮಾಡಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಆ್ಯಂಬುಲೆನ್ಸ್‌ಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸದಂತೆ ಎಚ್ಚರಿಕೆ ನೀಡಿದರು.
ತಾಲೂಕು ವೈದ್ಯಾಧಿಕಾರಿ ಡಾ.ವಿಜಯ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಬಿಆರ್‌ಸಿ ಶಿವಮರಿಯಪ್ಪ, ಪುರಸಭೆ ಮುಖ್ಯಾಧಿಕಾರಿ ಇಂದು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಬಿಸಿಎಂ ಅಧಿಕಾರಿಗಳು ಹಾಜರಿದ್ದರು.