ಚಿಕ್ಕಂದಿನಲ್ಲೇ ಮಕ್ಕಳಿಗೆ ನಾರಿಶಕ್ತಿ ಪರಿಚಯ ಮಾಡಿಸಿ: ಗು.ರುದ್ರಯ್ಯ

| Published : Jan 14 2025, 01:02 AM IST

ಚಿಕ್ಕಂದಿನಲ್ಲೇ ಮಕ್ಕಳಿಗೆ ನಾರಿಶಕ್ತಿ ಪರಿಚಯ ಮಾಡಿಸಿ: ಗು.ರುದ್ರಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದಿದ್ದಾರೆ. ಮಹಿಳೆಯರು ಛಾಪು ಮೂಡಿಸದ ಕ್ಷೇತ್ರವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಮಹಿಳಾ ಸಬಲೀಕರಣ ಸಾಧ್ಯವಾಗಿದೆ ಎಂದು ಸಾಮರಸ್ಯ- ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ ಗು.ರುದ್ರಯ್ಯ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಅಹಲ್ಯಾಬಾಯಿ ಹೋಳ್ಕರ್ ತ್ರಿಶತಾಬ್ದಿ ಜನ್ಮದಿನ ಸಮಾರೋಪ - - - ದಾವಣಗೆರೆ: ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದಿದ್ದಾರೆ. ಮಹಿಳೆಯರು ಛಾಪು ಮೂಡಿಸದ ಕ್ಷೇತ್ರವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಮಹಿಳಾ ಸಬಲೀಕರಣ ಸಾಧ್ಯವಾಗಿದೆ ಎಂದು ಸಾಮರಸ್ಯ- ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ ಗು.ರುದ್ರಯ್ಯ ಹೇಳಿದರು.

ನಗರದ ಡಾ.ಸದ್ಯೋಜಾತ ಸ್ವಾಮಿ ಹಿರೇಮಠದಲ್ಲಿ ಭಾನುವಾರ ಸಂಜೆ ಜಿಲ್ಲಾ ಸಾಮರಸ್ಯ ವೇದಿಕೆ ಹಾಗೂ ಲೋಕಮಾತಾ ಅಹಲ್ಯಾಬಾಯಿ ಹೋಳ್ಕರ್ ಅವರ ತ್ರಿಶತಾಬ್ದಿ ಜನ್ಮ ದಿನಾಚರಣೆ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತ್ರಿಶತಾಬ್ದಿ ಜನ್ಮದಿನ ಸಮಾರೋಪ ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.

ಆದರೆ, ಪ್ರಾಚೀನ ಕಾಲದಿಂದಲೂ ಮಹಿಳೆಯರು ಭಾರತದಲ್ಲಿ ಸಬಲರಾಗಿದ್ದರು. ಕುಟುಂಬದ ಜವಾಬ್ದಾರಿ ನಿರ್ವಹಿಸುವ ಜೊತೆಗೆ ರಾಷ್ಟ್ರ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದರು. ತೊಟ್ಟಿಲು ತೂಗುವ ಕೈ ದೇಶವನ್ನೂ ಆಳಬಲ್ಲದು ಎಂಬುದನ್ನು ಅನೇಕ ವೀರವನಿತೆಯರು ತೋರಿಸಿಕೊಟ್ಟಿದ್ದಾರೆ. ಇಂತಹ ಧೀರತ್ವದ ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸಬೇಕು. ಚಿಕ್ಕಂದಿನಲ್ಲೇ ದೇಶದ ನಾರಿಶಕ್ತಿಯ ಪರಿಚಯ ಮಾಡಿಸಬೇಕು ಎಂದರು.

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಜನಿಸಿದ ಅಹಲ್ಯಾಬಾಯಿ ಹೋಳ್ಕರ್ ಇಂದೋರ್‌ನ ಸಣ್ಣ ರಾಜ್ಯದ ರಾಣಿಯಾಗಿದ್ದರೂ, ಅಖಂಡ ಭಾರತದ ದೃಷ್ಟಿಕೋನ ಹೊಂದಿದ್ದವರು. ಚಿಕ್ಕ ವಯಸ್ಸಿನಲ್ಲೇ ತನ್ನವರನ್ನೆಲ್ಲಾ ಕಳೆದುಕೊಂಡರೂ ಧೃತಿಗೆಡದೇ, ಸಮರ್ಥ ಆಡಳಿತ ನೀಡಿ ಪ್ರಜೆಗಳನ್ನು ನೋಡಿಕೊಂಡವರು. ಶೈಕ್ಷಣಿಕ, ಧಾರ್ಮಿಕ, ಔದ್ಯೋಗಿಕ ಕ್ಷೇತ್ರದಲ್ಲಿ ಅಹಲ್ಯಾ ಬಾಯಿ ಅವರಿಗೆ ಇದ್ದ ದೂರದೃಷ್ಟಿ, ಬದ್ಧತೆ, ಕಾಳಜಿ ಎಲ್ಲ ಆಡಳಿತಗಾರರಿಗೂ ಮಾದರಿಯಾಗಿದೆ ಎಂದು ಹೇಳಿದರು.

ಜಯಲಕ್ಷ್ಮೀ ಎಸ್. ಮೆಹರ್ವಾಡೆ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಲೋಕಮಾತಾ ಅಹಲ್ಯಾಬಾಯಿ ಹೋಳ್ಕರ್ ತ್ರಿಶತಾಬ್ದಿ ಜನ್ಮ ದಿನಾಚರಣೆ ಸಮಿತಿ ಜಿಲ್ಲಾ ಸಂಚಾಲಕಿ ಶೋಭಕ್ಕ, ಜಿಲ್ಲಾ ಸಂಯೋಜಕಿ ಗೀತಕ್ಕ, ಸಾಮರಸ್ಯ ವೇದಿಕೆಯ ಅನಿತಾ ಮತ್ತಿತರರು ಉಪಸ್ಥಿತರಿದ್ದರು.

ವನಿತಾ ಯೋಗ ಕೇಂದ್ರದ ಮಹಿಳೆಯರಿಂದ ಅಹಲ್ಯಾಬಾಯಿ ಹೊಳ್ಕರ್ ಕುರಿತ ಕಿರುನಾಟಕ ಪ್ರದರ್ಶನ ಹಾಗೂ ಕುಟುಂಬ ಪ್ರಬೋಧಿನಿ ಅವರಿಂದ ಭಜನಾ ಕಾರ್ಯಕ್ರಮ ನಡೆಯಿತು.

- - - -12ಕೆಡಿವಿಜಿ43:

ದಾವಣಗೆರೆಯಲ್ಲಿ ಭಾನುವಾರ ನಡೆದ ಅಹಲ್ಯಾ ಬಾಯಿ ಹೋಳ್ಕರ್ ಅವರ ತ್ರಿಶತಾಬ್ದಿ ಜನ್ಮ ದಿನಾಚರಣೆ ಸಮಾರೋಪ ಸಮಾರಂಭದಲ್ಲಿ ಗು.ರುದ್ರಯ್ಯ ಮಾತನಾಡಿದರು.