ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಸಮಾಜದಲ್ಲಿ ಕಳೆದು ಹೋಗಿರುವ ಕಲಾ ಪ್ರಕಾರಗಳನ್ನು ಗುರುತಿಸುವ ಕಾರ್ಯಕ್ರಮಗಳನ್ನು ವಿಶ್ವವಿದ್ಯಾಲಯಗಳು ರೂಪಿಸುವ ಮೂಲಕ ಇಂದಿನ ಪೀಳಿಗೆಗೆ ಪರಿಚಯಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ನಿರಂಜನ ವಾನಳ್ಳಿ ಅಭಿಪ್ರಾಯಪಟ್ಟರು.ನಗರದ ಬೆಂಗಳೂರು ಸ್ನಾತಕೋತ್ತರ ಉತ್ತರ ವಿವಿ, ಕನ್ನಡ ರಾಜ್ಯೋತ್ಸವ ಹಾಗೂ ಆಹಾರ ದೇಶಿ ಮೇಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶಿ ಸಂಸ್ಕೃತಿಯ ಕಲೆಗಳಲ್ಲಿ ಬುರ್ರಕಥೆ ಪುಸ್ತಕ ರೂಪದಲ್ಲಿ ಸಿಗುವುದು ವಿರಳವಾಗಿರುವ ಹಿನ್ನೆಲೆ ಬಹುದಿನದ ಆಶಯವಾಗಿರುವ ಜಾನಪದ ಕಾಯಕ್ರಮಗಳನ್ನು ವಿಶ್ವವಿದ್ಯಾಲಯದ ವೇದಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತಿದೆ ಎಂದು ತಿಳಿಸಿದರು.ಜೀವನದ ದೊಂಬರಾಟದಿಂದ ಎಲ್ಲಾ ರೀತಿಯ ಜಾನಪದ, ಸಂಸ್ಕೃತಿ ಕಲೆಗಳನ್ನು ಕಾಣಬಹುದಾಗಿದೆ, ಜಾನಪದ ಸಂಸ್ಕೃತಿ ಕಲೆಗಳಲ್ಲಿ ಕನ್ನಡ ಬೆಳೆದು ಬಂದ ಹಾದಿಯನ್ನು ನೆನಪಿಸಿಕೊಳ್ಳಬಹುದಾಗಿದೆ, ಕನ್ನಡ ರಾಜ್ಯೋತ್ಸವ, ಆಹಾರ ದೇಶಿ ಮೇಳ ಹಾಗೂ ಬುರ್ರಕಥೆಯ ಜಾನಪದ ಸೇರಿ ಮೂರು ಕಾರ್ಯಕ್ರಮಗಳ ಸಮಾಗಮವನ್ನು ಈ ವೇದಿಕೆಯು ಹಂಚಿಕೊಂಡಿದೆ ಎಂದರು.
ವಿಶ್ವವಿದ್ಯಾಲಯದಲ್ಲಿ ನಾನು ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ತೊಗಲು ಬೊಂಬೆಯಾಟ ಮೊದಲ ಕಾರ್ಯಕ್ರಮವಾಗಿತ್ತು, ರಾಜ್ಯದಲ್ಲಿಯೇ ೩-೪ ಜನ ಬೊಂಬೆಯಾಟದ ಕಲೆಗಾರರು ಮಾತ್ರ ಜೀವಂತವಾಗಿದ್ದಾರೆ. ಹಾಗಾಗಿ ಕಲೆಗೆ ಮರು ಜೀವ ತುಂಬುವ ದೇಶಿಯಲ್ಲಿ ಈ ಕಾರ್ಯಕ್ರಮವನ್ನು ರಾಜ್ಯ ಮಟ್ಟದಲ್ಲಿ ನಾಗಾರ್ಜುನ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು, ಜಿಲ್ಲಾಡಳಿತ ಕಚೇರಿಯಲ್ಲಿ ಜಾನಪದ ಮೇಳ ಆಯೋಜಿಸಿದ್ದು, ವಿಶ್ವವಿದ್ಯಾಲಯದ ಆವರಣದಲ್ಲಿಯೇ ಆಯೋಜಿಸಿರುವ ಬುರ್ರಕಥೆ ಜಾನಪದ ಕಾರ್ಯಕ್ರಮವು ಮೂರನೆಯದಾಗಿದೆ ಎಂದು ವಿವರಿಸಿದರು.ಇದೇ ಸಂದರ್ಭದಲ್ಲಿ ಸ್ಕಾರ್ಟ್‌ಲ್ಯಾಂಡ್ ದೇಶದ ವಿವಿಯಿಂದ ಆಗಮಿಸಿದ್ದ ಡಾ.ಲೈಡೀಯಾ ಮತ್ತು ಡಾ.ಮಾರ್ಥಡ್ ಹಾಗೂ ಬ್ರಿಟಿಷ್ ಕೌನ್ಸಿಲ್, ಶ್ರೀಲಂಕಾದ ಡಾ.ಲಲಿತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಖ್ಯಾತ ವಿಮರ್ಶಕ ಹಾಗೂ ಸಾಹಿತಿ ಚಂದ್ರಶೇಖರ್ ನಂಗಲಿ ಪ್ರಾಸ್ತಾವಿಕ ನುಡಿಗಳಾಡಿ, ದೇಶೀಯ ಆಹಾರಗಳನ್ನು ಸೇವಿಸುವುದರಿಂದ ಕಾಯಿಲೆಗಳ ಅಪಾಯದಿಂದ ಪಾರಾಗಬಹುದಾಗಿದೆ, ಆದರೆ, ಜನರು ಫಾಸ್ಟ್ ಪುಡ್‌ಗಳ ಸೇವನೆಯಿಂದ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದರು.ಕರುನಾಡಿನ ವಾಸಿಗಳಾದ ನಮ್ಮ ಭಾವನೆಗಳು ಮೇರುಮಟ್ಟದಲ್ಲಿರಬೇಕು, ಆದರೆ, ಇದನ್ನು ಅರಿಯದೆ ಕೆಲವರು ಮೂರ್ಖತನಕ್ಕೆ ಬಲಿಯಾಗಿ ತಮ್ಮ ಜೀವನದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇಂದಿನ ಜನತೆಗೆ ಕಾಲ್ನಡಿಗೆಯೇ ಗೊತ್ತಿಲ್ಲದೆ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ, ನೈಸರ್ಗಿಕದಲ್ಲಿಯೇ ಇರುವ ಪರಿಹಾರದ ವಿಧಾನಗಳನ್ನು ಸದ್ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದರು.
ಹಿಂದಿನ ದೇಶೀಯ ಆಹಾರ ಪದ್ಧತಿಗಳ ಉಪಯೋಗದ ಬಗ್ಗೆ ಇಂದಿನ ಶ್ರೀಮಂತವರ್ಗಕ್ಕೆ ಜ್ಞಾನೋದಯವಾಗಿದೆ, ಇಂದಿನ ಆಧುನಿಕ ಪದ್ಧತಿ ಆಹಾರ ಪದ್ದತಿಗಳಲ್ಲಿ ದೈಹಿಕ ಮತ್ತು ಆರೋಗ್ಯಕರ ಬೆಳವಣಿಗೆಗೆ ಪೂರಕವಾದ ಯಾವುದೇ ಅಂಶಗಳು ಇಲ್ಲ, ಹಾಗಾಗಿ ಮರಳಿ ಸಿರಿಧಾನ್ಯಗಳನ್ನು ಬಳಸುವ ಮೂಲಕ ದೇಶಿಯ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ಕೈವಾರದ ಬುರ್ರಕಥಾ ಕಲಾ ರತ್ನ ಪ್ರಶಸ್ತಿ ವಿಜೇತ ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸಿ, ತಾವು ಬುರ್ರಕಥಾ ಕಲೆಗಾರನಾದ ಜೀವನದ ಹಾದಿ ನೆನಪಿಸಿ, ಸಾಹಿತಿ ಸ. ರಘುನಾಥ್ ಹಾಗೂ ಹರಿಕಥಾ ವಿದ್ವಾನ್ ಬಾಲಕೃಷ್ಣ ಭಗವತರ ಅವರ ಮಾರ್ಗದರ್ಶನದಿಂದ ತಾವು ೨೫೦೦ ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿರುವುದಾಗಿ ತಿಳಿಸಿದರು.
ಪ್ಯಾರಾ ಒಲಂಪಿಕ್ ಚಿನ್ನದ ಪದಕ ವಿಜೇತರಾದ ರಕ್ಷಿತ ರಾಜು ಮತ್ತು ರಾಧ ವೆಂಕಟೇಶ್‌ರನ್ನು ಸನ್ಮಾನಿಸಿ, ವಿವಿಧ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು.ಬೆಂಗಳೂರು ಸ್ನಾತಕೋತ್ತರ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅಶೋಕ್ ಡಿ.ಆರ್, ಮೌಲ್ಯ ಮಾಪನ ಕುಲಸಚಿವ ಡಾ.ತಿಪ್ಪೇಸ್ವಾಮಿ, ವಿತ್ತಾಧಿಕಾರಿ ವಸಂತ ಕುಮಾರ್, ಮಂಗಸಂದ್ರ ಸ್ನಾತಕೋತ್ತರ ವಿಶ್ವ ವಿದ್ಯಾಲಯದ ಡೀನ್ ಡಾ.ಕುಮುದ ಇದ್ದರು.