ಸಾರಾಂಶ
ಪಿಎಂ ವಿಶ್ವಕರ್ಮ, ಮುದ್ರಾ ಸೇರಿದಂತೆ ಅನೇಕ ಜನಪರ ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ಮನವರಿಕೆ ಮಾಡಿಕೊಟ್ಟು, ಸವಲತ್ತು ಸಿಗುವಂತೆ ಮಾಡಬೇಕು ಎಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಮೈಸೂರು : ಪಿಎಂ ವಿಶ್ವಕರ್ಮ, ಮುದ್ರಾ ಸೇರಿದಂತೆ ಅನೇಕ ಜನಪರ ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ಮನವರಿಕೆ ಮಾಡಿಕೊಟ್ಟು, ಸವಲತ್ತು ಸಿಗುವಂತೆ ಮಾಡಬೇಕು ಎಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಆಯೋಜಿಸಿದ್ದ ದಿಶಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರವು ದೇಶದ ಪ್ರಗತಿಗೆ, ಬಡವರ ಉದ್ಧಾರಕ್ಕೆ ಪೂರಕವಾದ ಅನೇಕ ಯೋಜನೆಗಳನ್ನು ನೀಡಿದೆ. ವೈಯಕ್ತಿಕವಾಗಿ ಬಡ ಕುಟುಂಬಗಳ ಆರ್ಥಿಕ ಬೆಳವಣಿಗೆಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಅವರು ಹೇಳಿದರು.
ಕೇಂದ್ರದ ಕೆಲವು ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಗುರಿಯ ಜೊತೆಗೆ ಅರ್ಜಿ ಹಾಕಿದವರು ಅರ್ಹರಿದ್ದರೆ ಪರಿಗಣಿಸಿ. ಕ್ಲಸ್ಟರ್ ಗ್ರೂಪ್ ಗಳನ್ನು ಮಾಡಿಕೊಂಡು ಅನುದಾನ ಪಡೆಯುವಂತೆ ಮಾಡಬೇಕು. ಮುದ್ರಾ ಪಿಎಂ, ವಿಶ್ವಕರ್ಮ ಮನವರಿಕೆ ಮಾಡಿಕೊಡಬೇಕು. ಬಡ ಹೆಣ್ಣು ಮಕ್ಕಳು ಹಾಗೂ ಯುವಕರನ್ನು ಆರ್ಥಿಕವಾಗಿ ಸದೃಢವಾಗಿಸಲು ಅವಕಾಶ ಇದೆ ಎಂದು ಅವರು ತಿಳಿಸಿದರು.
ಆದಿವಾಸಿಗಳಿಗೂ ಹಲವು ಕಾರ್ಯಕ್ರಮಗಳಿವೆ. ಅವುಗಳ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಬೇಕು. ನಿತ್ಯವೂ ಕೆಲವರಿಗೆ ಒಳ್ಳೆಯದು ಮಾಡಬೇಕು ಎಂಬ ಮನೋಭಾವ ಅಧಿಕಾರಿಗಳಿಗಿರಲಿ. ಯುವಕರು ದಾರಿ ತಪ್ಪುತ್ತಿದ್ದಾರೆ. ಉದ್ಯೋಗವನ್ನು ಎಲ್ಲರಿಗೂ ಕೊಡುವುದು ಕಷ್ಟ. ಕೆಲಸ ಕೊಡುವುದೇ ದೊಡ್ಡ ಸವಾಲಾಗಿದೆ. ಆದ್ದರಿಂದ ಯುವಜನರಿಗೆ ಸ್ವಂತ ಉದ್ಯೋಗ ಮಾಡಲು ತರಬೇತಿ ನೀಡಬೇಕು. ಈನಿಟ್ಟಿನಲ್ಲಿ ಉತ್ಸಾಹದಿಂದ ಕೆಲಸ ಮಾಡಬೇಕು ಎಂದು ಅವರು ಸೂಚಿಸಿದರು.
ಕೇಂದ್ರ ಸರ್ಕಾರದ ಆರ್ಥಿಕ ನೆರವು ಬಳಕೆ ಆಗುವಂತೆ ಮಾಡಬೇಕು. ಸಮಸ್ಯೆಗಳಿದ್ದಲ್ಲಿ ನಮ್ಮ ಗಮನಕ್ಕೆ ತಂದರೆ ಪರಿಹರಿಸಲು ಸಹಕಾರ ಕೊಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಜಲ ಜೀವನ್ ಮಿಷನ್ ಯೋಜನೆಯು ಪ್ರತಿ ಮನೆಗೂ ನಲ್ಲಿಯ ಮೂಲಕ ನೀರನ್ನು ನೀಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಎಲ್ಲಾ ಹಳ್ಳಿಗಳಿಗೂ ನೀರು ಒದಗಿಸಿ. ಕುಡಿಯುವ ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷೆ ಮಾಡಬೇಕು. ಅಮೃತ್ ಯೋಜನೆಯಡಿ ನಗರ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಅನುದಾನ ಬಿಡುಗಡೆ ಆಗಿದ್ದು ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ನೀರಿನ ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಉತ್ಪಾದನೆ, ವ್ಯಾಪಾರ ಸೇವೆ ಹಾಗೂ ಕೃಷಿಗೆ 10 ಲಕ್ಷದವರೆಗೆ ಸಾಲ ನೀಡಲಾಗುತ್ತಿದೆ. ಇದರಲ್ಲಿ ಜಿಲ್ಲೆಗೆ ಈ ವರ್ಷ 2902 ಕೋಟಿ ರು. ಸಾಲ ನೀಡಿರುವ ಕುರಿತು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಂದ ಮಾಹಿತಿ ಪಡೆದ ಅವರು, ಈ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದರು.
ಚಾಮರಾಜನಗರ ಸಂಸದ ಸುನಿಲ್ ಬೋಸ್ ಮಾತನಾಡಿ, ಚಾಮರಾಜನಗರದಿಂದ ಮೈಸೂರು ರೈಲ್ವೆ ಮಾರ್ಗವನ್ನು ಮೇಲ್ದರ್ಜೆ ಗೆ ಏರಿಸಿ ವಿದ್ಯುದ್ಧೀಕರಣ ಮಾಡಲು ಅಗತ್ಯವಾದ ಎನ್ಒಸಿ ಪಡೆದು ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಎಚ್.ಡಿ. ಕೋಟೆಯಿಂದ ಬಾವಲಿ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚು ಇದ್ದು ಈಗಿರುವ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಅಗತ್ಯ ಮನವಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಮೃತ್ ಯೋಜನೆಯಡಿ ಪೈಪ್ ಲೈನ್ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಮಾಡಬೇಕು. ಕೆಲವು ಕಡೆ ಪೈಪ್ ಲೈನ್ ಮೇಲೆ ಮಾಡಿರುತ್ತಾರೆ. ಕೆಲವು ಕಡೆ ಪೈಪ್ ಲೈನ್ ಗುಂಡಿಗಳನ್ನು ಸರಿಯಾಗಿ ಮುಚ್ಚಿರುವುದಿಲ್ಲ ಎಂದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಟೆಂಡರ್ ಪಡೆದವರು 5 ವರ್ಷ ಅದರ ಮೆಂಟೇನ್ಸ್ ಮಾಡಬೇಕು, ಈ ಕುರಿತು ಅಧಿಕಾರಿಗಳು ಪರಿಶೀಲಿಸಬೇಕು ಎಂದು ಅವರು ಹೇಳಿದರು.
ಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಫಲಾನುಭವಿಗಳ ಆಯ್ಕೆ ಅನುಮೋದನೆ ಆಗಿದ್ದರೂ ಕೂಡ ಬ್ಯಾಂಕ್ ಗಳು ಸಾಲ ನೀಡುತ್ತಿಲ್ಲ. ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಈ ನಿಟ್ಟಿನಲ್ಲಿ ಪರಿಶೀಲಿಸಿ ಸಾಲ ನೀಡುವಂತೆ ಕ್ರಮವಹಿಸಬೇಕು ಎಂದರು.
ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ವಿಮಾನ ನಿಲ್ದಾಣ ಪ್ರಾಧಿಕಾರದವರು 500 ಕೋಟಿ ರೂ. ವೆಚ್ಚದಲ್ಲಿ ಏರ್ಪೋರ್ಟ್ ಬೈಪಾಸ್ ರಸ್ತೆ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿಗೆ ನೀಡುತತಿದ್ದಾರೆ. ಆದರೆ ಇದರ ವೆಚ್ಚ 800 ಕೋಟಿ ಆಗುವುದಾಗಿ ವರದಿ ನೀಡಿದ್ದಾರೆ. ವಿಮಾನ ನಿಲ್ದಾಣ ಪ್ರಾಧಿಕಾರದವರಿಗೆ ಅಗತ್ಯವಿದ್ದ ಭೂಮಿಯಲ್ಲಿ ಈಗಾಗಲೇ 150 ಎಕರೆ ಕೆಐಡಿಬಿ ವಶಕ್ಕೆ ಪಡೆದಿದ್ದು, ಉಳಿದ 40 ಎಕರೆ ಪಡೆಯಲು ಪ್ರಗತಿ ಹಂತದಲ್ಲಿ ಇದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಕೆ. ಹರೀಶ್ ಗೌಡ, ಟಿ.ಎಸ್. ಶ್ರೀವತ್ಸ, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮೊದಲಾದವರು ಇದ್ದರು.
ಬೆಳೆಹಾನಿಗೆ ಸೂಕ್ತ ಪರಿಹಾರ ಒದಗಿಸಿ:
ರೈತರು ದೇಶದ ಬೆನ್ನೆಲುಬು. ಅತಿಯಾದ ಮಳೆಯಿಂದ ಆದ ಬೆಳೆ ಹಾನಿಗೆ ಪರಿಹಾರವನ್ನು ಅರ್ಹರಿಗೆ ವಿತರಣೆ ಮಾಡಬೇಕು. ಪ್ರಧಾನ ಮಂತ್ರಿ ಪಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಲು ರೈತರಿಗೆ ಉತ್ತೇಜನ ನೀಡಬೇಕು. ಇದರಿಂದ ಬೆಳೆ ನಷ್ಟ ಉಂಟಾದರೆ ಬೆಳೆ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ. ಹತ್ತಿ ಬೆಳೆಗೆ ಉತ್ತಮ ತಳಿಯ ಬಿತ್ತನೆ ಬೀಜ ಬಂದಿದ್ದು, ರಾಯಚೂರು ಭಾಗದಲ್ಲಿ ಬಿತ್ತನೆ ಆಗುತ್ತಿದೆ. ಇದರಿಂದ ಶೇ. 50 ಉತ್ಪಾದನೆ ಹೆಚ್ಚಾಗುತ್ತದೆ. ಈ ಬಗ್ಗೆ ಅಧ್ಯಯನ ಮಾಡಿ ಎಚ್.ಡಿ. ಕೋಟೆ ಭಾಗದ ಜನರಿಗೆ ಮಾಹಿತಿ ನೀಡುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಜಾನುವಾರುಗಳಿಗೆ ನಿಗದಿತ ಅವಧಿಯಲ್ಲಿ ಕಾಲುಬಾಯಿ, ಚಪ್ಪೆ ರೋಗದ ಲಸಿಕೆ ನೀಡಬೇಕು. ಮೇವು ಕಿಟ್ ಗಳ ವಿತರಣೆ ಮಾಡುವ ಮೂಲಕ ಜಾನುವಾರು ಮೇವು. ಕೊರತೆ ಆಗದಂತೆ ನೋಡಿಕೊಳ್ಳಬೇಕು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ರಾಜ್ಯದಲ್ಲಿ ಅರಣ್ಯ ಪ್ರದೇಶ ಕಡಿಮೆ ಆಗುತ್ತಿದೆ ಎಂದು ಸರ್ವೆಗಳು ಹೇಳುತ್ತಿವೆ. ಆದರೆ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಪ್ರತಿ ವರ್ಷ 1 ಕೋಟಿಯಷ್ಟು ಗಿಡಗಳನ್ನು ನೀಡುತ್ತಾ ಇದ್ದಾರೆ. ಆದರೆ ಇವುಗಳ ಪೋಷಣೆ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.