ಸಾರಾಂಶ
ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ಹೇಳಿಕೆಕನ್ನಡಪ್ರಭ ವಾರ್ತೆ ಹೊಸದುರ್ಗ ಇನ್ನೊಬ್ಬರ ದೋಷಗಳನ್ನು ಹೇಳುವುದು ತಪ್ಪಲ್ಲ ಅದನ್ನು ಹೇಳುವ ನೈತಿಕತೆ ನನ್ನಲ್ಲಿದೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ರಾಷ್ಟ್ರೀಯ ಬಸವ ಪ್ರತಿಷ್ಠಾನದ ಆಶ್ರಯದಲ್ಲಿ ಗೋವಾದಲ್ಲಿನ ನೀಲಮ್ಸ್ ಗ್ರಾಂಡ್ ಕಾಲಂಗುಟೆ ಸಭಾಂಗಣದಲ್ಲಿ ನಡೆದ ಲಿಂಗಾಯತ ಸ್ವತಂತ್ರ ಧರ್ಮ ಅರಿವು, ಸಂಘಟನೆ, ಅನುಷ್ಠಾನ ಕುರಿತು ಎರಡನೆಯ ದಿನದ ವಿಚಾರ ಸಂಕಿರಣ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.ಇವತ್ತಿನ ಸಾಮಾಜಿಕ ಸಂದರ್ಭಗಳನ್ನು ಗಮನಿಸಿದಾಗ 12 ನೆಯ ಶತಮಾನದ ಕಡೆಗೆ ಹೋಗುತ್ತಿದ್ದೆವೆ ರಾಜಕೀಯ ಮುಖಂಡರೆನಿಸಿ ಕೊಂಡವರು ರಾಜಕೀಯ ಅವಕಾಶಗಳನ್ನು ಪಡೆದುಕೊಂಡು ಏನೆಲ್ಲಾ ಅವಾಂತರಗಳನ್ನು ಅನುಭವಿಸುತ್ತಿರುವುದನ್ನು ನೋಡುತ್ತಿದ್ದೇವೆ. ಪರಧನ-ಪರಸತಿ ಯಾರನ್ನೂ ಬಿಟ್ಟಿಲ್ಲ. ಪರಧನ ಪರಸ್ತ್ರೀಯ ಮೋಹವನ್ನು ಬಿಟ್ಟು ಏಕದೇವನಿಷ್ಠೆಯ ತತ್ವಗಳನ್ನು ಸಾಕಾರಗೊಳಿಸಿಕೊಂಡರೆ ಆಗ ಲಿಂಗಾಯತ ಧರ್ಮ ಸ್ವತಂತ್ರದ ಮಾನ್ಯತೆಗೆ ಬೇಡುವಂಥ ಅವಶ್ಯಕತೆಯಿಲ್ಲ ಎಂದರು.
ನಮ್ಮಲ್ಲಿರುವ ಅಜ್ಞಾನ ಮೂಢನಂಬಿಕೆ ಪರಂಪರೆಯ ಕತ್ತಲೆ ಯನ್ನು ತನ್ನ ಅರಿವಿನ ಮೂಲಕ ಕಳೆದುಕೊಳ್ಳಬೇಕು. ಸತ್ಯ ಎನ್ನುವುದು ಸಂಪ್ರದಾಯವಾದಿಗಳಿಗೆ ಹಿಡಿಸದು ಸತ್ಯ ಹೇಳುವುದಕ್ಕೆ ಯಾವುದಕ್ಕೂ ಅಂಜದೇ ಅಳುಕದೇ ಬಸವಣ್ಣನೆಂಬ ಆನೆಯ ಮೇಲೆ ಹೋಗುವಾಗ ನಾಯಿಗಳು ಬೊಗಳಿದರೆ ಅವುಗಳಿಗೆ ಬೆದರದೇ ಬೆಚ್ಚದೇ ಮುನ್ನಗ್ಗಬೇಕು ಎಂದರು.ಚಿಂತಕ ಬಸವರಾಜ ಸಾದರ ಮಾತನಾಡಿ ಲಿಂಗಾಯತ ಸ್ವತಂತ್ರ ಧರ್ಮ ಎನ್ನುವ ವಿಷಯ ಬಹಳ ವರ್ಷಗಳಿದ್ದರೂ ಅಂತಿಮ ತೀರ್ಮಾನ ಇನ್ನು ಆಗದೇ ಇರುವುದು ದುರದುಷ್ಟಕರ. ಪ್ರಧಾನಮಂತ್ರಿ ನರೇಂದ್ರಮೋದಿಯವರು ಲಂಡನ್‌ನಲ್ಲಿ ಬಸವಣ್ಣನ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಬಸವಣ್ಣನವರ ವಿಚಾರಗಳನ್ನು ಹೇಳಿದ್ದು ಅಷ್ಟೇ ಅಲ್ಲ ಲೋಕಸಭೆಯಲ್ಲಿ ಬಜೆಟ್ ಮಂಡಿಸುವಾಗ ಬಸವಣ್ಣನವರ ತತ್ವಗಳನ್ನು ಹೇಳಿ ಆರ್ಥಿಕ ನೀತಿಗಳನ್ನು ವಿವರಿಸಿದ್ದು ಮೆಚ್ಚುವಂತದ್ದು ಆದರೆ ಕರ್ನಾಟಕದ ಬಸವ ಪರಂಪರೆಯಲ್ಲಿ ಗೆದ್ದು ಆಯ್ಕೆಯಾದ ಲೋಕಸಭಾ ಸದಸ್ಯರು ಲಿಂಗಾಯತ ಸ್ವತಂತ್ರ ಧರ್ಮ ಇದ್ದರೂ ಮತಬ್ಯಾಂಕ್‌ಗಾಗಿ ಅದರ ಚಕಾರು ಎತ್ತದೇ ಬಾಯಿ ಮುಚ್ಚಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಶರಣರು ಸಣ್ಣವರೆಂದು ಭಾವಿಸಿದ್ದರಿಂದಲೇ ದೊಡ್ಡ ವ್ಯಕ್ತಿಗಳಾಗಿದ್ದರು ನೊಂದವರು ಬೆಂದವರು ಶೋಷಿತರನ್ನು ಅಪ್ಪಿ ಒಪ್ಪಿ ಸಮಾನತೆಯನ್ನು ಕೊಟ್ಟರು ಶರಣರು ಶ್ರಮಕ್ಕೆ ಸಮಾನವಾದ ಆದಾಯವನ್ನು ಮಾತ್ರ ನಿರೀಕ್ಷಿಸುತ್ತಿದ್ದರು. ಶರಣರು ಶರೀರವನ್ನು ಗುಡಿಯನ್ನಾಗಿ ಮಾಡಿಕೊಂಡು ಅರಿವನ್ನೇ ದೇವರನ್ನು ಮಾಡಿಕೊಂಡರು ಜಗತ್ತಿನ ಎಲ್ಲ ಧರ್ಮಗಳು ನೆತ್ತಿಯ ಬಗ್ಗೆ ಮಾತನಾಡಿವೆ. ಆದರೆ ಕಾಯಕ ಬಗ್ಗೆ ಹೇಳಿದ್ದು ಲಿಂಗಾಯತ ಧರ್ಮ. ನೆತ್ತಿಯ ಹಸಿವಿಗಿಂತ ಹೊಟ್ಟೆಯ ಹಸಿವು ಮುಖ್ಯ ಎಂದು ಅರಿತು ಕಾಯಕ ಮಾಡಬೇಕೆಂದರೆ ನೆತ್ತಿಯ ಹಸಿವಿಗಾಗಿ ಲಿಂಗ ಪೂಜೆಯ ಮಾಡಬೇಕು ಎಂದರು.ಸಾಹಿತಿ ಎಸ್ ಜಿ ಸಿದ್ಧರಾಮಯ್ಯ ಮಾತನಾಡಿ ಚರಿತ್ರೆಯನ್ನು ತಿಳಿದುಕೊಂಡರೆ ವರ್ತಮಾನ ಅರ್ಥವಾಗುತ್ತದೆ ವರ್ತಮಾನ ಅರ್ಥವಾದರೆ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಚಾತುರ್ವಣದ ಪದ್ಧತಿಯ ವಿರುದ್ಧವಾಗಿ ಹುಟ್ಟಿಕೊಂಡಿದ್ದು ಲಿಂಗಾಯತ ಧರ್ಮ ಸಮುದಾಯ ತತ್ವ ಚಿಂತನೆಗೆ ತಾತ್ವಿಕ ಗಟ್ಟಿತನವನ್ನು ಲಿಂಗಾಯತ ಧರ್ಮದಲ್ಲಿ ಕಾಣುತ್ತೇವೆ. ಕಾಯ ಇರುವವರೆಗೂ ಕಾಯಕ ಮಾಡಬೇಕು ಎನ್ನುವ ತತ್ವ ಶರಣ ಧರ್ಮದಲ್ಲಿದೆ. ಬೇರೆ ಬೇರೆ ಧರ್ಮಗಳಲ್ಲಿ ಬಿಕ್ಷೆಗಳಿವೆ ಆದರೆ ಶರಣ ಧರ್ಮದಲ್ಲಿ ಭಿಕ್ಷೆಗೆ ಅವಕಾಶವಿಲ್ಲ ಎಂದರು.
ಸಾಹಿತಿ ಬಿ ಆರ್ ಪೋಲಿಸ್ ಪಾಟೀಲ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷ ಎಸ್ ಎಂ ಸುರೇಶ್ , ಪತ್ರಕರ್ತ ಸಿದ್ಧ ಯಾಪಲರವಿ, ಅಲ್ಲಮಪ್ರಭು ನಾವದಗೇರಿ ಮುಂತಾದವರಿದ್ದರು. ಆರಂಭದಲ್ಲಿ ಶಿವಸಂಚಾರದ ನಾಗರಾಜ್ ಹೆಚ್ ಎಸ್ ನಾಗರಾಜ್ ಹಾಗೂ ರೇಖಾ ವಚನಗೀತೆಗಳನ್ನು ಹಾಡಿದರು.