ಸಾರಾಂಶ
ಕಲಬೆರಕೆ ಔಷಧಿ ಕೊಡುವುದು ಸರಿಯಲ್ಲ
ಕನ್ನಡಪ್ರಭ ವಾರ್ತೆ ಬಂಗಾರಪೇಟೆಬಳ್ಳಾರಿ ಜಿಲ್ಲಾಸ್ಪತ್ರೆಯ ಬಾಣಂತಿಯರ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು. ಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಆಳುವವರ ಮೇಲೆ ನಂಬಿಕೆ ಇಟ್ಟು ಬಡವರು ಸರ್ಕಾರಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಇಂತಹ ಕಡುಬಡ ಪ್ರಜೆಗಳಿಗೆ ಕಲಬೆರಕೆ ಔಷಧಿ ಕೊಡುವುದು ಎಂದರೆ ತಾಯಿಯೇ ಮಕ್ಕಳಿಗೆ ವಿಷ ಹಾಕಿದಂತೆ. ಅದಕ್ಕಿಂತ ಪಾಪದ ಕೆಲಸ ಮತ್ತೊಂದಿಲ್ಲ ಎಂದು ಕಂಪನಿ ಹಾಗೂ ಆರೋಗ್ಯ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೋವಿಡ್ ಸಮಯದಲ್ಲಿ ಸಾವಿರಾರು ಬಡ ಕೂಲಿಕಾರ್ಮಿಕರಿಗೆ ಸಮರ್ಪಕವಾದ ಚಿಕಿತ್ಸೆ ಸಿಗಲಿಲ್ಲ. ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಗದೆ ತನ್ನ ಜೀವವನ್ನು ಕಳೆದುಕೊಂಡರು. ಅಂತಹ ಸಮಯದಲ್ಲೂ ಪಿ.ಪಿ.ಇ ಕಿಟ್, ಮಾಸ್ಕ್ ಸೇರಿದಂತೆ ವಿವಿಧ ಉಪಕರಣಗಳ ಖರೀದಿಯಲ್ಲೂ ಕೋಟಿ ಕೋಟಿ ಲೂಟಿ ಮಾಡಿದವರಿಗೆ ಇನ್ನೆಷ್ಟು ಬಡವರ ಬಲಿಬೇಕು ಎಂದು ಪ್ರಶ್ನೆ ಮಾಡುವ ಜೊತೆಗೆ ಬಾಣಂತಿ ತಾಯಿ ಸಾವು ಪ್ರಕರಣಕ್ಕೆ ನ್ಯಾಯ ಸಿಗಲಿ ಎಂದು ಒತ್ತಾಯಿಸಿದರು. ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಭ್ರಷ್ಟ ಅಧಿಕಾರಿಗಳ ಲಂಚವತಾರ ನಿರ್ಲಕ್ಷ್ಯವಹಿಸುವ ವೈದ್ಯರು ಗಮನಹರಿಸದ ಜನಪ್ರತಿನಿದಿಗಳ ಬೇಜವಾಬ್ದಾರಿಯಿಂದ ಸರ್ಕಾರಿ ಆಸ್ಪತ್ರೆಗಳು ಕಸದ ಆಸ್ಪತ್ರೆಗಳಾಗಿ ಮಾರ್ಪಟ್ಟು, ಲಕ್ಷ ಲಕ್ಷ ಸಂಬಳ ಪಡೆದು ಸಾರ್ವಜನಿಕ ಸೇವೆ ಮಾಡದೆ ರಾಜಕೀಯ ಕ್ಷೇತ್ರದ ಗುಲಾಮರಂತೆ ವೈದ್ಯರು ಕೆಲಸ ನಿರ್ವಹಿಸುತ್ತಿದ್ದಾರೆ. ಇದನ್ನೇ ಬಂಡವಾಳ ವಾಗಿಸಿಕೊಂಡು ಇಂತಹ ಅಹಿತಕರ ಘಟನೆಗಳನ್ನು ಸೃಷ್ಠಿ ಮಾಡಿ ಸರ್ಕಾರಿ ಆಸ್ಪತ್ರೆಗಳ ಮೇಲೆ ಬಡವರಿಗೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳು ಗುಣಮಟ್ಟದ ಚಿಕಿತ್ಸೆ ಹೆಸರಿನಲ್ಲಿ ಲಕ್ಷ ಲಕ್ಷ ಲೂಟಿ ಮಾಡಲು ಸರ್ಕಾರಿ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿದರು. ಬಾಣಂತಿಯರ ಸಾವಿಗೆ ನ್ಯಾಯ ಸಿಗಬೇಕಾದರೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಿ ಗುಣಮಟ್ಟದ ಚಿಕಿತ್ಸೆ ನೀಡುವ ಜೊತೆಗೆ ಪ್ರತಿ ಜಿಲ್ಲೆಗೊಂದು ವಿಶೇಷ ಸರ್ಕಾರಿ ಆಸ್ಪತ್ರೆ ವೀಕ್ಷಣೆ ತಂಡವನ್ನು ರಚನೆ ಮಾಡಬೇಕೆಂದು ಒತ್ತಾಯಿಸಿದರು. ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್,ಶೈಲಜ, ಶ್ರೀನಿವಾಸ್, ಅಪ್ಪೋಜಿರಾವ್, ಚಾಂದ್‌ಪಾಷ, ರತ್ನಮ್ಮಇದ್ದರು.