ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ಕೂಲಂಕಷ ತನಿಖೆ ನಡೆಯುತ್ತಿದೆ. ಸ್ಫೋಟದ ಸ್ಥಳದ 100 ಮೀ. ವ್ಯಾಪ್ತಿಯಲ್ಲಿ ಪೊಲೀಸ್ ಹಾಗೂ ಅಗತ್ಯ ಅಧಿಕಾರಿಗಳನ್ನು ಹೊರತುಪಡಿಸಿ ಇತರರಿಗೆ ಪ್ರವೇಶ ನಿಷೇಧಿಸಲಾಗಿದೆ. ಸುಡುಮದ್ದು ತಯಾರಿಕಾ ಘಟಕದ ಮಾಲಕ ಸೈಯ್ಯದ್ ಬಶೀರ್ (45) ಎಂಬಾತನನ್ನು ಸುಳ್ಯದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಕುಕ್ಕೆಡಿ ಗ್ರಾಮ ಪಂಚಾಯಿತಿ ಗೋಳಿಯಂಗಡಿ ಸಮೀಪದ ಕಡ್ತ್ಯಾರು ಎಂಬಲ್ಲಿ ಸುಡುಮದ್ದು ತಯಾರಿಕೆ ಘಟಕದಲ್ಲಿ ಭಾರಿ ಸ್ಫೋಟ ಉಂಟಾಗಿ ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಈ ಬಗ್ಗೆ ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳಿಂದ ಸ್ಥಳದಲ್ಲಿ ತೀವ್ರ ರೀತಿಯಲ್ಲಿ ತನಿಖೆ ನಡೆಯುತ್ತಿದೆ.ಘಟನೆಯಲ್ಲಿ ಸುಡುಮದ್ದು ತಯಾರಿಯಲ್ಲಿ ತೊಡಗಿದ್ದ ಕೇರಳದ ಸ್ವಾಮಿ ಯಾನೆ ಕುಂಞ(60), ವರ್ಗಿಸ್(62) ಹಾಸನದ ಅರಸೀಕೆರೆಯ ಚೇತನ್(24) ಎಂಬವರು ಮೃತಪಟ್ಟಿದ್ದರು. ಇದರಲ್ಲಿ ವರ್ಗಿಸ್ ಹಾಗೂ ಚೇತನ್ ಎಂಬವರ ದೇಹಗಳು ಸ್ಥಳದಲ್ಲಿ ಛಿದ್ರಗೊಂಡಿದ್ದರೆ, ಸ್ವಾಮಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದರು. ಇವರ ಪೈಕಿ ವರ್ಗೀಸ್ ಎಂಬವರು ಸುಡುಮದ್ದು ತಯಾರಿಯಲ್ಲಿ 25 ವರ್ಷಗಳಿಗಿಂತ ಹೆಚ್ಚಿನ ಅನುಭವ ಹೊಂದಿದ್ದರು ಎಂದು ಹೇಳಲಾಗಿದೆ. ಸ್ವಾಮಿ ಮತ್ತು ಚೇತನ್ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಫಾರೆನ್ಸಿಕ್, ಅಗ್ನಿಶಾಮಕ ದಳ, ಬಿಡಿಡಿಎಸ್, ಕಂದಾಯ, ಕಾರ್ಮಿಕ ಇಲಾಖೆ ಸೇರಿದಂತೆ ಅಗತ್ಯ ಇಲಾಖೆಗಳ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.ಜಿಲ್ಲಾ ಪೊಲೀಸ್ ಅಧೀಕ್ಷಕ ರಿಶ್ಯಂತ್ ಸಿ. ತಿಳಿಸಿದಂತೆ, ಪ್ರಾಥಮಿಕ ಹಂತದ ತನಿಖೆಗಳ ಪ್ರಕಾರ ಮೈಸೂರಿನ ಓರ್ವರಿಂದ ಬಂದ ಬೇಡಿಕೆಯಂತೆ ಸುಡುಮದ್ದು ತಯಾರಿ ನಡೆಯುತ್ತಿದ್ದು, ಅವುಗಳನ್ನು ತಯಾರಿಸುವ ಕಚ್ಚಾ ವಸ್ತುಗಳ ಮಿಶ್ರಣದ ಪ್ರಮಾಣದಲ್ಲಿ ಏರುಪೇರು ಆಗಿರುವುದು ಸ್ಫೋಟಕ್ಕೆ ಕಾರಣವಾಗಿದೆ. ಇಲ್ಲಿ ಕಂಡುಬಂದಿದ್ದ ದೊಡ್ಡ ಪ್ರಮಾಣದ ಸ್ಫೋಟಕಗಳ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದು, ಇದು ಸ್ಥಳೀಯವಾಗಿ ತಯಾರಾಗುವ ಕದೋನಿ ಸುಡುಮದ್ದು ಎಂದು ಹೇಳಲಾಗಿದೆ ಎಂದು ತಿಳಿಸಿದ್ದಾರೆ.
ಘಟಕಕ್ಕೆ ಪರವಾನಗಿ ಚಾಲ್ತಯಲ್ಲಿದೆ. ಇಲ್ಲಿ ಒಟ್ಟು ಮೂರು ಶೆಡ್ಡುಗಳಿದ್ದು, ಒಂದರಲ್ಲಿ ಸುಡುಮದ್ದು ತಯಾರಿ, ಇನ್ನೊಂದು ಕಡೆ ತಯಾರಿಗೆ ಬೇಕಾದ ಕಚ್ಚಾ ವಸ್ತು ದಾಸ್ತಾನು ಹಾಗೂ ಮತ್ತೊಂದರಲ್ಲಿ ತಯಾರಾದ ಸುಡುಮದ್ದು ದಾಸ್ತಾನು ಇಡಲಾಗಿದೆ. ಇದರಲ್ಲಿ ಸುಡುಮದ್ದು ತಯಾರಿಸುತ್ತಿದ್ದ ಶೆಡ್ ಮಾತ್ರ ಸ್ಫೋಟಕ್ಕೆ ಸಂಪೂರ್ಣ ಧ್ವಂಸಗೊಂಡಿದೆ.ಸುಡುಮದ್ದು ನಿರ್ಮಾಣ ಘಟಕದ ಸುತ್ತಲೂ 8 ಅಡಿ ಎತ್ತರದಷ್ಟು ಕಾಂಪೌಂಡ್ ಇದ್ದು, ಒಳಗಿನ ಚಟುವಟಿಕೆ ಯಾರಿಗೂ ಕಾಣುತ್ತಿರಲಿಲ್ಲ. ಇದರಲ್ಲಿ ಒಂದು ಭಾಗದ ಕಂಪೌಂಡ್ ಪಕ್ಕವೇ ಟೆಂಟ್ ಹಾಕಿ ಸುಡುಮದ್ದು ತಯಾರಿ ನಡೆಸುತ್ತಿದ್ದು, ಸ್ಫೋಟದ ತೀವ್ರತೆಗೆ ಸುಮಾರು 25 ಮೀ.ಯಷ್ಟು ಕಂಪೌಂಡ್ ಧರಾಶಾಯಿಯಾಗಿದೆ. ಅಲ್ಲದೆ ಅಲ್ಲಿ ಶೆಡ್ ಇದ್ದ ಕುರುಹುಗಳು ಕಂಡು ಬರದ ಸ್ಥಿತಿ ಉಂಟಾಗಿದೆ.
ಬೆಳ್ತಂಗಡಿ-ಮೂಡುಬಿದಿರೆ ಹೆದ್ದಾರಿಯಿಂದ 1.5 ಕಿ.ಮೀ. ದೂರದಲ್ಲಿ ಘಟಕ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಕಳೆದ ಕೆಲವು ದಿನಗಳಿಂದ ಭರದಿಂದ ಪಟಾಕಿ ನಿರ್ಮಾಣ ಕೆಲಸ, ಪರೀಕ್ಷಾರ್ಥ ಸ್ಫೋಟ ನಡೆಸಲಾಗುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಪಟಾಕಿ ನಿರ್ಮಾಣ ಘಟಕದ ಬಗ್ಗೆ ಸ್ಥಳೀಯ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇನ್ನೂ ಕೆಲವರು ಈ ಬಗ್ಗೆ ಯಾವುದೇ ಆಸಕ್ತಿ ತೋರದ ಕಾರಣ ಪಂಚಾಯಿತಿಗೆ ಮನವಿ ನೀಡುವಾಗ ವಿಳಂಬವಾಗಿದೆ ಎಂದು ತಿಳಿದುಬಂದಿದೆ.* ಸುತ್ತಮುತ್ತಲ ಮನೆಗಳಿಗೆ ಹಾನಿ
ಸುಡುಮದ್ದು ತಯಾರಿ ಘಟಕದ ಸುತ್ತಲ ಹಲವು ಮನೆಗಳಿಗೆ ಸ್ಫೋಟದಿಂದ ಭಾರಿ ಹಾನಿ ಸಂಭವಿಸಿದೆ. ವೆಂಕಪ್ಪ ಮೂಲ್ಯ ಎಂಬವರ ಮನೆಯ ಶೀಟುಗಳು ಹಾರಿ ಹೋಗಿದ್ದು, ಅಡುಗೆ ಮನೆಯಲ್ಲಿ ಹಾಕಿದ್ದ ಕಡಪ ಕಲ್ಲು ತುಂಡಾಗಿ ಬಿದ್ದಿದೆ. ಮಣ್ಣಿನ ಗೋಡೆಗೂ ಹಾನಿಯಾಗಿದ್ದು ಮನೆಯೊಳಗಿನ ಸ್ಥಿತಿ ಅಸ್ತವ್ಯಸ್ತವಾಗಿದೆ. ಜೋಸೆಫ್ ಹಾಗೂ ಥಾಮಸ್ ಎಂಬವರ ಮನೆಗಳ ಗೋಡೆ ಬಿರುಕು ಬಿಟ್ಟಿದೆ. ನೀಲಯ್ಯ ಮೂಲ್ಯ, ಸುಲೈಮಾನ್, ಭರತ್ ಹಾಗೂ ವಸಂತಿ ಎಂಬವರ ಮನೆಗಳಿಗೂ ಹಾನಿ ಸಂಭವಿಸಿದೆ. ರಬ್ಬರ್ ಹಾಗೂ ಅಡಕೆ ತೋಟದ ಪಕ್ಕದಲ್ಲಿ ಶೆಡ್ ಇದ್ದು, ಇಲ್ಲಿ ಮಕ್ಕಳು ಹಾಗೂ ಕೃಷಿಕರು ಸದಾ ತಿರುಗಾಟ ನಡೆಸುತ್ತಿದ್ದರು. ಆದರೆ ಭಾನುವಾರದ ಸ್ಫೋಟದ ವೇಳೆ ಇವರೆಲ್ಲ ಬೇರೆ ಬೇರೆ ಕಡೆ ತೆರಳಿದ್ದ ಕಾರಣದಿಂದ ಅಪಾಯದಿಂದ ಪಾರಾಗಿದ್ದಾರೆ.ಸುಡುಮದ್ದು ತಯಾರಿಕೆ ಘಟಕವನ್ನು ಲೈಸೆನ್ಸ್ ಪಡೆದು ನಡೆಸಲಾಗುತ್ತಿತ್ತು. ಇಲ್ಲಿ ಬೇಡಿಕೆ ಆಧಾರದಲ್ಲಿ ತಯಾರಿ ನಡೆಯುತ್ತಿತ್ತು. ಆದರೆ ಯಾವುದೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದೆ ಕೆಲಸ ನಿರ್ವಹಿಸುತ್ತಿರುವುದು ಕಂಡುಬಂದಿದ್ದು, ಈ ಬಗ್ಗೆ ಈಗಾಗಲೇ ಕೇಸು ದಾಖಲಿಸಲಾಗಿದೆ. ಸ್ಫೋಟಕ್ಕೆ ನಿಖರವಾದ ಕಾರಣವೇನು ಎಂಬುದು ಹೆಚ್ಚಿನ ತನಿಖೆಗಳ ಬಳಿಕ ತಿಳಿದು ಬರಲಿದೆ. ಮೃತಪಟ್ಟ ಕಾರ್ಮಿಕರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಅವರು ಆಗಮಿಸಲಿದ್ದಾರೆ.। ರಿಶ್ಯಂತ್, ಪೋಲಿಸ್ ಅಧೀಕ್ಷಕರು, ದಕ.ವಿವಿಧ ಇಲಾಖೆಗಳು ನೀಡಿದ ಪೂರಕ ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಘಟಕಕ್ಕೆ ಅನುಮತಿ ನೀಡಲಾಗಿದೆ. ಅನುಮತಿ ನೀಡುವ ವೇಳೆ ತಿಳಿಸಲಾಗಿರುವ ಷರತ್ತುಗಳನ್ನು ಪಾಲಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
। ಆನಂದ್, ಸಿಇಒ, ಜಿಲ್ಲಾ ಪಂಚಾಯಿತಿ ದ.ಕ.-----------------ಸ್ಫೋಟದಿಂದ ನಮ್ಮ ಮನೆಗೆ ತೀವ್ರ ಹಾನಿಯಾಗಿದ್ದು, ಇದರಲ್ಲಿ ವಾಸಿಸುವುದು ಅಸಾಧ್ಯವಾಗಿದೆ. ಯಾರೋ ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವಂತಾಗಿರುವುದು ವಿಪರ್ಯಾಸ. ಈ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಿ ನಮಗೆ ಸೂಕ್ತ ವಾಸ್ತವ್ಯ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕು. ಸಂಸದ ನಳಿನ್ ಕುಮಾರ್, ಶಾಸಕ ಹರೀಶ್ ಪೂಂಜ ಈ ಬಗ್ಗೆ ಭರವಸೆ ನೀಡಿದ್ದಾರೆ.
। ವೆಂಕಪ್ಪ ಮೂಲ್ಯ, ಹಾನಿಗೊಳಗಾದ ಮನೆಯವರು