ಸಕಲ ಸರ್ಕಾರಿ ಗೌರವಗಳೊಂದಿಗೆ ನಾಗನಗೌಡ ಅಂತ್ಯಕ್ರಿಯೆ

| Published : Jan 30 2024, 02:04 AM IST

ಸಕಲ ಸರ್ಕಾರಿ ಗೌರವಗಳೊಂದಿಗೆ ನಾಗನಗೌಡ ಅಂತ್ಯಕ್ರಿಯೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾನುವಾರ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದ, ಜಿಲ್ಲೆಯ ಗುರುಮಠಕಲ್‌ ಮತಕ್ಷೇತ್ರದ ಮಾಜಿ ಶಾಸಕ, ಹಿರಿಯ ರಾಜಕೀಯ ಮುತ್ಸದ್ದಿ ನಾಗನಗೌಡ ಕಂದಕೂರು (78) ಅವರ ಅಂತ್ಯಕ್ರಿಯೆಯು ಸಾವಿರಾರು ಅಭಿಮಾನಿಗಳು ಕಣ್ಣೀರ ವಿದಾಯದೊಂದಿಗೆ, ಸಕಲ ಸರ್ಕಾರಿ ಗೌರವಗಳ ಮೂಲಕ ಸ್ವಗ್ರಾಮ ಕಂದಕೂರಿನ ಅವರ ಜಮೀನಿನಲ್ಲಿ ಸೋಮವಾರ ಮಧ್ಯಾಹ್ನ ಜರುಗಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಭಾನುವಾರ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದ, ಜಿಲ್ಲೆಯ ಗುರುಮಠಕಲ್‌ ಮತಕ್ಷೇತ್ರದ ಮಾಜಿ ಶಾಸಕ, ಹಿರಿಯ ರಾಜಕೀಯ ಮುತ್ಸದ್ದಿ ನಾಗನಗೌಡ ಕಂದಕೂರು (78) ಅವರ ಅಂತ್ಯಕ್ರಿಯೆಯು ಸಾವಿರಾರು ಅಭಿಮಾನಿಗಳು ಕಣ್ಣೀರ ವಿದಾಯದೊಂದಿಗೆ, ಸಕಲ ಸರ್ಕಾರಿ ಗೌರವಗಳ ಮೂಲಕ ಸ್ವಗ್ರಾಮ ಕಂದಕೂರಿನ ಅವರ ಜಮೀನಿನಲ್ಲಿ ಸೋಮವಾರ ಮಧ್ಯಾಹ್ನ ಜರುಗಿತು.

ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಪಾರ್ಥೀವ ಶರೀರವನ್ನು ಸಾರ್ವಜನಿಕರು, ಅಭಿಮಾನಿಗಳ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಾವಿರಾರು ಜನರು ಅಭಿಮಾನಿಗಳು ಗೌಡರ ಅಂತಿಮ ದರ್ಶನ ಪಡೆದರು. ವಿವಿಧ ಮಠಾಧೀಶರುಗಳು ಅಲ್ಲಿ ಉಪಸ್ಥಿತರಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಸಮರೋಪಾದಿಯಲ್ಲಿ ಹರಿದು ಬಂದ ನಾಗನಗೌಡರ ಅಭಿಮಾನಿಗಳ ನಿಯಂತ್ರಿಸಲು, ಅಂತಿಮ ದರುಶನಕ್ಕೆ ಅನುವಾಗಲೆಂದು ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಸರ್ಕಾರಿ ಗೌರವಾರ್ಥ ಅಂಗವಾಗಿ, ಪೊಲೀಸ್‌ ಪಡೆಗಳು ಗಾಳಿಯಲ್ಲಿ ಮೂರು ಸುತ್ತಿನ ಗುಂಡು ಹಾರಿಸಿದವು.

ಬೆಳಿಗ್ಗೆಯಿಂದಲೇ ಕಂದಕೂರಿನತ್ತ ಜನಸಾಗರ ಹರಿದು ಬಂದಿತ್ತು. ಮಾಜಿ ಪ್ರಧಾನಿ ದೇವೇಗೌಡರ ಪರಮಾಪ್ತರಾಗಿರುವ ಕಂದಕೂರು ಕುಟುಂಬಕ್ಕೆ ಸಾಂತ್ವನ ಹೇಳಲು ದೊಡ್ಡ ಗೌಡರ ಕುಟುಂಬದ ಪರವಾಗಿ ನಿಖಿಲ್‌ ಕುಮಾರಸ್ವಾಮಿ ಅವರು ಆಗಮಿಸಿದ್ದರು. ನಾಗನಗೌಡರ ಪುತ್ರ, ಗುರುಮಠಕಲ್‌ ಹಾಲಿ ಶಾಸಕ ಶರಣಗೌಡರ ಕಣ್ಣೀರ ಕಟ್ಟೆಯೊಡೆದಿತ್ತು.

ಸೋಲುಗಳನ್ನೇ ಸೋಲಿಸಿ ಗೆದ್ದ ಗೌಡರು:

2008 ಹಾಗೂ 2013 ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅವರನ್ನು ಜರ್ಝರಿತಗೊಳಿಸಿತ್ತು.

ಕಂದಕೂರು ಕುಟುಂಬದ ರಾಜಕೀಯವೇ ಮುಗಿಯಿತು ಎಂಬ ಕುಹಕಗಳ ಮೆಟ್ಟಿ ನಿಂತು, ಸೋಲುಗಳನ್ನೇ ಸವಾಲಾಗಿಸಿಕೊಂಡು 2018 ರ ಚುನಾವಣೆಯಲ್ಲಿ ಬಾಬುರಾವ್‌ ವಿರುದ್ಧ 24 ಸಾವಿರಕ್ಕೂ ಹೆಚ್ಚು ಮತಗಳ ಅಂತರದ ಭಾರಿ ಗೆಲುವು ಕಂಡಿದ್ದರು.

2023ರ ಚುನಾವಣೆಯಲ್ಲಿ ಪುತ್ರ ಶರಣಗೌಡಗೆ ಟಿಕೆಟ್‌ ನೀಡುವಂತೆ ಕೋರಿ, ತಮ್ಮ ಸುದೀರ್ಘ ಅವಧಿಯ ರಾಜಕೀಯ ಅನುಭವ, ಚಾಣಾಕ್ಷತನ ಧಾರೆಯೆರೆದು ಶರಣಗೌಡರ ಗೆಲುವಿನ ಹಿಂದಿನ ರೂವಾರಿ ಎಂದೆನಿಸಿದ್ದರು.

ಬದುಕಿರುವವರೆಗೂ ಜೆಡಿಎಸ್‌ನಲ್ಲೇ ಎಂದಿದ್ದ ಗೌಡರು:

ನಾಗನಗೌಡರು ತಮ್ಮ ಬದುಕಿನುದ್ದಕ್ಕೂ ಜೆಡಿಎಸ್‌ನಲ್ಲೇ ಇದ್ದವರು, ನೇರ ನಿಷ್ಠುರ ಮಾತಿನವರು. ಸಮ್ಮಿಶ್ರ ಸರ್ಕಾವಧಿಯಲ್ಲಿ "ಆಪರೇಶನ್‌ ಕಮಲ "ಕ್ಕೆ ಯತ್ನಿಸಿದ್ದ ಅಂದಿನ ಸಿಎಂ ಬಿಎಸ್ವೈ ವಿರುದ್ಧವೇ ಸೆಟೆದು, ಧ್ವನಿಸುರುಳಿ ಬಿಡುಗಡೆ ಮೂಲಕ ಎಚ್ಡಿಕೆ ಸರ್ಕಾರದ ಉಳಿವಿಗೆ ಕಾರಣರಾಗಿದ್ದರು.

ಕಂದಕೂರು ಕುಟುಂಬದ ರಾಜಕೀಯ ಶತ್ರುವೆಂದೇ ಕರೆಯಲ್ಪಡುತ್ತಿದ್ದ ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭೆ ಚುನಾವಣೆಯಲ್ಲಿ ಬೆಂಬಲ ಕೋರಿ ಕಂದಕೂರು ಅವರ ಮನೆಗೆ ಖುದ್ದು ಆಗಮಿಸಿದ್ದಾಗ, ಹಿಂದಿನ ಕಹಿಗಳ ಮರೆದು ಖರ್ಗೆ ಕೈ ಬಲಪಡಿಸಿದ್ದರು ನಾಗನಗೌಡರು.