ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಜಿಲ್ಲೆಯ ಎಲ್ಲಾ ಹಿರಿಯ ಪತ್ರಕರ್ತರ ಮಾರ್ಗದರ್ಶನದಲ್ಲಿ ಮಾರ್ಚ್ 2ರಂದು ಪತ್ರಿಕೆ ವಿತರಕರ ಜಿಲ್ಲಾ ಸಮ್ಮೇಳನವನ್ನ ಚನ್ನರಾಯಪಟ್ಟಣದಲ್ಲಿ ಆಯೋಜಿಸುತ್ತಿದ್ದು, ಸಮ್ಮೇಳನಕ್ಕೆ ಸಂಬಂಧಿಸಿದಂತೆ ಸಿದ್ಧತೆಗಳು ಕೂಡ ಭರದಿಂದ ಸಾಗಿದೆ ಎಂದು ಜಿಲ್ಲಾ ಪತ್ರಿಕೆ ವಿತರಕರ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದರು.ತಾಲೂಕು ಪತ್ರಿಕೆ ವಿತರಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಸೇರಿದಂತೆ ಸ್ಥಳೀಯ ಪತ್ರಕರ್ತರು ಹಾಗೂ ಪತ್ರಿಕೆ ವಿತರಕರನ್ನು ಒಡಗೂಡಿ ಸಮ್ಮೇಳನಕ್ಕೆ ಶಾಸಕ ಕೆ.ಎಂ ಶಿವಲಿಂಗೇಗೌಡರನ್ನು ಆಹ್ವಾನಿಸಿ ಮಾತನಾಡಿದ ಅವರು, ಸ್ಥಳೀಯ ಸುದ್ದಿಯಿಂದ ಹಿಡಿದು ರಾಜ್ಯ ದೇಶ ವಿದೇಶಗಳ ಸುದ್ದಿಯನ್ನು ಓದುಗರಿಗೆ ತಲುಪಿಸುವಲ್ಲಿ ಪತ್ರಿಕೆ ವಿತರಕರ ಸೇವಾ ಕಾರ್ಯ ಅತ್ಯಂತ ಮಹತ್ವದ್ದಾಗಿದೆ. ಜಿಲ್ಲಾ ಮಟ್ಟದ ಪತ್ರಿಕೆ ವಿತರಕರ ಸಮ್ಮೇಳನದಲ್ಲಿ ಪತ್ರಿಕೆ ವಿಚಾರಕರ ಹಿತ ಕಾಯುವ ನಿಟ್ಟಿನಲ್ಲಿ ಅನೇಕ ನಿರ್ಣಯ ಕೈಗೊಳ್ಳುವ ಜತೆಗೆ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಮಂತ್ರಿಗಳು, ಶಾಸಕರಾದಿಯಾಗಿ ಅಧಿಕಾರಿಗಳಿಗೆ ವಿತರಕರು ಎದುರಿಸುತ್ತಿರುವ ಸಮಸ್ಯೆ ಮತ್ತು ಪರಿಹಾರ ಚಳಿ, ಮಳೆ ಎನ್ನದೇ ಮುಂಜಾನೆ ಮನೆ ಮನೆ ಬಾಗಿಲಿಗೆ ಪತ್ರಿಕೆ ವಿತರಿಸುವವರ ಜೀವಕ್ಕೆ ಭದ್ರತೆ ಒದಗಿಸುವಂತೆ ಸಮ್ಮೇಳನ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸ ನಡೆಯುತ್ತಿದ್ದು, ಅರಸೀಕೆರೆ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಪತ್ರಿಕೆ ವಿತರಕರು ಮತ್ತು ವರದಿಗಾರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಪತ್ರಿಕೆ ವಿತರಕರ ಸಂಘಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಟಿ ಆನಂದ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷರಾದ ರಾಮಚಂದ್ರ, ಕಣಕಟ್ಟೆ ಕುಮಾರ್, ಪತ್ರಕರ್ತ ಆನಂದ್ ಕೌಶಿಕ್, ಕಿರಣ್, ಜಿಲ್ಲಾಧ್ಯಕ್ಷರು ಪತ್ರಿಕಾ ವಿತರಕರ ಒಕ್ಕೂಟದ ಕಾರ್ಯದರ್ಶಿ ಜಯರಾಮ್, ಸಹ ಕಾರ್ಯದರ್ಶಿ ಸಿ ವಿ ಮಂಜುನಾಥ, ಪದಾಧಿಕಾರಿಗಳಾದ ನಂದನ ಪುಟ್ಟಣ್ಣ ಹಾಗೂ ಚಂದ್ರಶೇಖರ್, ಸೇರಿದಂತೆ ಮತ್ತು ಇತರರು ಇದ್ದರು.