ಹಾಸನ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಹಾಮುಲ್) ನಿರ್ಮಿಸುತ್ತಿರುವ ಮಹತ್ವಾಕಾಂಕ್ಷೆಯ ಮೆಗಾ ಡೇರಿ ಘಟಕದ ಉದ್ಘಾಟನೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲು ಸಭೆಯಲ್ಲಿ ಎಲ್ಲರ ಸಲಹೆ, ಒಪ್ಪಿಗೆ ಪಡೆದು ತೀರ್ಮಾನಿಸಲಾಗಿದೆ. ಇದೊಂದು ಹಬ್ಬದ ರೀತಿ ಕಾರ್ಯಕ್ರಮ ಜರುಗಲಿದೆ ಎಂದು ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನಹಾಸನ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಹಾಮುಲ್) ನಿರ್ಮಿಸುತ್ತಿರುವ ಮಹತ್ವಾಕಾಂಕ್ಷೆಯ ಮೆಗಾ ಡೇರಿ ಘಟಕದ ಉದ್ಘಾಟನೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲು ಸಭೆಯಲ್ಲಿ ಎಲ್ಲರ ಸಲಹೆ, ಒಪ್ಪಿಗೆ ಪಡೆದು ತೀರ್ಮಾನಿಸಲಾಗಿದೆ. ಇದೊಂದು ಹಬ್ಬದ ರೀತಿ ಕಾರ್ಯಕ್ರಮ ಜರುಗಲಿದೆ ಎಂದು ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದರು. ನಗರದ ಹಾಸನ ಹಾಲು ಒಕ್ಕೂಟದ ಆವರಣದಲ್ಲಿ ಒಕ್ಕೂಟದ ನಿಯಮಿತ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರಮುಖವಾಗಿ ಚರ್ಚೆಗೆ ಬಂದಿದ್ದು, ಎಲ್ಲರ ಅಭಿಪ್ರಾಯ ಕೇಳಿ ನೂತನ ಮೆಗಾ ಡೇರಿ ಘಟಕವನ್ನು ಉದ್ಘಾಟಿಸುವ ಯೋಜನೆ ರೂಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಸಭೆಯಲ್ಲಿ ಮತ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎಚ್‌ ಡಿ ರೇವಣ್ಣ, ಹಾಸನ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಒಟ್ಟು ೧೫೦ ಎಕರೆ ೨೯ ಗುಂಟೆ ಆಸ್ತಿ ಇದ್ದು, ನಿರ್ಮಾಣವಾಗುತ್ತಿರುವ ಮೆಗಾ ಡೇರಿ ಯೋಜನೆಗೆ ಸುಮಾರು ೮೩೦ ಕೋಟಿ ರು. ವೆಚ್ಚವಾಗುತ್ತಿದೆ ಎಂದು ಹೇಳಿದರು. ಇದರಲ್ಲಿ ಒಕ್ಕೂಟದ ಸ್ವಂತ ನಿಧಿಯಿಂದಲೇ ಸುಮಾರು ೪೦೦ ಕೋಟಿ ರು. ವೆಚ್ಚ ಮಾಡಲಾಗಿದೆ. ಉಳಿದಂತೆ ನ್ಯಾಷನಲ್ ಡೇರಿ ಡೆವಲಪ್‌ಮೆಂಟ್ ಬೋರ್ಡ್ (ಎನ್‌ಡಿಡಿಬಿ) ಮೂಲಕ ೨೯೮ ಕೋಟಿ ರು. ಸಾಲ ಪಡೆಯಲಾಗಿದ್ದು, ಎರಡನೇ ಹಂತದಲ್ಲಿ ಇನ್ನೂ ೧೫೦ ಕೋಟಿ ರು. ಸಾಲ ಮಂಜೂರಾಗಿದೆ ಎಂದು ವಿವರಿಸಿದರು.

ಎರಡನೇ ಸ್ಥಾನ:

ಹಾಸನ ಹಾಲು ಒಕ್ಕೂಟವು ದಿನಕ್ಕೆ ಸುಮಾರು ಎರಡು ಲಕ್ಷ ಲೀಟರ್‌ ಹಾಲು ಮಾರಾಟ ಮಾಡುತ್ತಿದ್ದರೂ ಕಳೆದ ಸಾಲಿನಲ್ಲಿ ೧೭ ಕೋಟಿ ೬೯ ಲಕ್ಷ ರು. ಲಾಭ ಗಳಿಸಿದೆ. ಇದರ ಮೂಲಕ ರಾಜ್ಯದಲ್ಲಿನ ಲಾಭದಲ್ಲಿರುವ ಹಾಲು ಒಕ್ಕೂಟಗಳ ಪೈಕಿ ಎರಡನೇ ಸ್ಥಾನ ಪಡೆದಿದೆ ಎಂದು ಅವರು ತಿಳಿಸಿದರು. ಮೆಗಾ ಡೇರಿ ಕಾರ್ಯಾರಂಭವಾದ ನಂತರ ಹಾಸನ ಹಾಲು ಒಕ್ಕೂಟವು ದೇಶದಲ್ಲೇ ಪ್ರಮುಖ ಸ್ಥಾನ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಮೆಗಾ ಡೇರಿ ಉದ್ಘಾಟನೆಗೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲು ಮಾಜಿ ಪ್ರಧಾನಿ ದೇವೇಗೌಡರು ಅವರು ಖುದ್ದಾಗಿ ಭೇಟಿ ನೀಡಿ ಮನವಿ ಮಾಡಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೇಂದ್ರ ಹಾಗೂ ರಾಜ್ಯದ ವಿವಿಧ ಸಚಿವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಹಬ್ಬದಂತೆ ಆಚರಿಸಲು ನಿರ್ಧಾರ:ಒಕ್ಕೂಟದಲ್ಲಿ ಸುಮಾರು ೧.೧೦ ಲಕ್ಷ ಸದಸ್ಯರು ಇದ್ದು, ಮೆಗಾ ಡೇರಿ ಉದ್ಘಾಟನೆ ದಿನ ಎಲ್ಲ ಸದಸ್ಯರಿಗೂ ಒಂದೇ ರೀತಿಯ ಡ್ರೆಸ್‌ಕೋಡ್ ಇರಲಿದ್ದು, ಡೇರಿಯ ವತಿಯಿಂದಲೇ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಹಬ್ಬದ ವಾತಾವರಣದಲ್ಲಿ ಕಾರ್ಯಕ್ರಮವನ್ನು ಆಚರಿಸುವ ಉದ್ದೇಶ ಹೊಂದಿದ್ದೇವೆ. ಕಾರ್ಯಕ್ರಮಕ್ಕೆ ೧ ಲಕ್ಷಕ್ಕೂ ಹೆಚ್ಚು ಜನ ಸದಸ್ಯರು ಬರುವ ನಿರೀಕ್ಷೆಯಿದ್ದು, ಆಗಮಿಸುವ ಪುರುಷರು ಬಿಳಿ ಪಂಚೆ, ಬಿಳಿ ಶರ್ಟ್ ಹಾಗೂ ಮಹಿಳೆಯರು ಒಂದೇ ರೀತಿಯ ಸೀರೆ ಧರಿಸಲು ಮನವಿ ಮಾಡಿದರು. ನಾವುಗಳು ಬಹುತೇಕ ರೈತ ಕುಟುಂಬದವರಾಗಿರುವುದರಿಂದ ಈ ರೀತಿ ಬಟ್ಟೆ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟರು.ಮೆಗಾ ಡೇರಿ ಸ್ಥಾಪನೆ ಮಾಡುವುದು ತಮ್ಮ ಬಹುಕಾಲದ ಕನಸಾಗಿದ್ದು, ಹಾಸನ ಹಾಲು ಒಕ್ಕೂಟವನ್ನು ದೇಶದಲ್ಲೇ ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ಗುರಿ ಹೊಂದಿದ್ದೇನೆ ಎಂದು ಅವರು ತಿಳಿಸಿದರು. ಇದೇ ವೇಳೆ ಹಾಲು ಉತ್ಪಾದಕರಿಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್‌ಗೆ ೧೦ರಿಂದ ೧೨ ರು.ಗೆ ಹೆಚ್ಚಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಹಾಸನ ಹಾಲು ಒಕ್ಕೂಟದ ಅಭಿವೃದ್ಧಿ ಯೋಜನೆಗಳು ಹಾಸನ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಹಾಮುಲ್) ೨೦೨೫-೨೬ನೇ ಸಾಲಿನಲ್ಲಿ ಹಾಲು ಸಂಗ್ರಹಣೆ, ಉತ್ಪಾದನೆ ಹಾಗೂ ರೈತರ ಕಲ್ಯಾಣದ ದಿಕ್ಕಿನಲ್ಲಿ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಕೈಗೊಂಡಿದೆ. ಈ ಸಾಲಿನಲ್ಲಿ ಗರಿಷ್ಠವಾಗಿ ೧೫.೧೨ ಲಕ್ಷ ಲೀಟರ್‌ ಹಾಲು ಸಂಗ್ರಹವಾಗಿದ್ದು, ಪ್ರಸ್ತುತ ೧೭೩೪ ಸಂಘಗಳಿಂದ ದಿನವಹಿ ಸರಾಸರಿ ೧೩.೯೦ ಲಕ್ಷ ಲೀಟರ್‌ ಹಾಲು ಸಂಗ್ರಹಿಸಲಾಗುತ್ತಿದೆ.ಥೀಮ್ ಪಾರ್ಕ್ ನಿರ್ಮಾಣ ಯೋಜನೆ:ಒಕ್ಕೂಟವು ೨೦೨೫-೨೬ನೇ ಸಾಲಿಗೆ ರೂ.೨೭೨೫ ಕೋಟಿ ವಹಿವಾಟು ನಡೆಸುವ ಗುರಿ ಹೊಂದಿದ್ದು, ಸುಮಾರು ರು. ೫.೫೦ ಕೋಟಿ ನಿವ್ವಳ ಆದಾಯ ನಿರೀಕ್ಷಿಸಲಾಗಿದೆ. ಪ್ರಸ್ತುತ ಸಂಘಗಳಿಗೆ ಲೀಟರ್‌ಗೆ ರು.೩೬.೧೭ ಹಾಗೂ ಉತ್ಪಾದಕರಿಗೆ ₹೩೪.೫೦ ದರದಲ್ಲಿ ಹಾಲು ಖರೀದಿಸಲಾಗುತ್ತಿದೆ. ಹಾಸನದ ಕೈಗಾರಿಕಾ ವಸಾಹತುವಿನ ೬೬ ಎಕರೆ ಪ್ರದೇಶದಲ್ಲಿ ಸುಮಾರು ₹ ೭೩೫ ಕೋಟಿ ವೆಚ್ಚದಲ್ಲಿ ೧೦ ಲಕ್ಷ ಲೀಟರ್ ಸಾಮರ್ಥ್ಯದ (ಭವಿಷ್ಯದಲ್ಲಿ ೧೫ ಲಕ್ಷ ಲೀಟರ್‌ಗೆ ಹೆಚ್ಚಿಸಬಹುದಾದ) ಮೆಗಾ ಡೇರಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಯೋಜನೆಯಲ್ಲಿ ದಿನಕ್ಕೆ ೬೦ ಮೆಟ್ರಿಕ್ ಟನ್ ಸಾಮರ್ಥ್ಯದ ಹಾಲಿನ ಪುಡಿ ಘಟಕವನ್ನೂ ನಿರ್ಮಿಸಲಾಗುತ್ತಿದೆ. ಮೆಗಾ ಡೇರಿ ಘಟಕದಲ್ಲಿ ದಿನಕ್ಕೆ ೧೦ ಲಕ್ಷ ಲೀಟರ್‌ ಹಾಲು ಸಂಸ್ಕರಣೆ, ೨ ಲಕ್ಷ ಲೀಟರ್ ಪ್ಯಾಕಿಂಗ್ ವ್ಯವಸ್ಥೆ, ೪೦ ಟನ್ ಬೆಣ್ಣೆ ಉತ್ಪಾದನೆ, ೧ ಲಕ್ಷ ಲೀಟರ್ ಮೊಸರು ತಯಾರಿಕೆ ಹಾಗೂ ೧೦ ಟನ್ ತುಪ್ಪ ಉತ್ಪಾದನೆ ಮಾಡುವ ವ್ಯವಸ್ಥೆ ಇರಲಿದೆ. ಜೊತೆಗೆ ದಿನಕ್ಕೆ ೫ ಟನ್ ಪನ್ನೀರ್ ಮತ್ತು ೬೦ ಟನ್ ಎಸ್‌ಎಂಪಿ ಹಾಗೂ ಡಬ್ಲ್ಯೂಎಂಪಿ ಹಾಲಿನ ಪುಡಿ ಉತ್ಪಾದನೆ ಮಾಡಲು ಸೌಲಭ್ಯ ಕಲ್ಪಿಸಲಾಗಿದೆ. ಇದರ ಜೊತೆಗೆ ಮೆಗಾ ಡೇರಿ ಆವರಣವನ್ನು ಆಕರ್ಷಕ ಪ್ರೇಕ್ಷಣೀಯ ಸ್ಥಳವನ್ನಾಗಿ ರೂಪಿಸಲು ಸುಮಾರು ೭೦ ಕೋಟಿ ರು. ವೆಚ್ಚದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಯೋಜನೆಯನ್ನೂ ಕೈಗೊಳ್ಳಲಾಗಿದೆ. ಉದ್ಯಾನವನ, ವಾಟರ್‌ ಫೌಂಟನ್, ಕಫೆಟೇರಿಯಾ, ಮುಖ್ಯ ಪ್ರವೇಶದ್ವಾರ ಮತ್ತು ಆಂತರಿಕ ರಸ್ತೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

₹ ೨೫.೪೦ ಕೋಟಿ ಸಹಾಯಧನ:ಸಂಘಗಳ ಅಭಿವೃದ್ಧಿಗೆ ಸಹಾಯಧನ ನೀಡಲಾಗುತ್ತಿದ್ದು, ಸಂಘಗಳ ಕಟ್ಟಡ ನಿರ್ಮಾಣ, ಬಿ.ಎಂ.ಸಿ. ಘಟಕಗಳು, ಹಾಲು ಕರೆಯುವ ಯಂತ್ರಗಳು, ಮೇವು ಕತ್ತರಿಸುವ ಯಂತ್ರಗಳು, ರಬ್ಬರ್‌ ಮ್ಯಾಟ್, ಮೇವು ಅಭಿವೃದ್ಧಿ ಕಾರ್ಯಕ್ರಮಗಳು ಸೇರಿದಂತೆ ಹಲವು ಚಟುವಟಿಕೆಗಳಿಗೆ ಒಟ್ಟು ₹ ೨೫.೪೦ ಕೋಟಿ ಸಹಾಯಧನ ನೀಡಲು ಉದ್ದೇಶಿಸಲಾಗಿದೆ.

೧೫, ೦೩೫ ರಾಸುಗಳಿಗೆ ವಿಮೆ:

ಪ್ರಸ್ತುತ ಒಕ್ಕೂಟದ ವ್ಯಾಪ್ತಿಯಲ್ಲಿ ೧೬೬೫ ಸಂಘಗಳಲ್ಲಿ ಎ.ಎಂ.ಸಿ.ಯು ಘಟಕಗಳು ಮತ್ತು ೩೫೮ ಬಿ.ಎಂ.ಸಿ. ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಈ ಸಾಲಿನಲ್ಲಿ ಹೊಸದಾಗಿ ೭೫ ಸಂಘಗಳಿಗೆ ಎ.ಎಂ.ಸಿ.ಯು ಘಟಕಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ರಾಸುಗಳ ರಕ್ಷಣೆಗೆ ೬೦ ಸಾವಿರ ರಾಸುಗಳನ್ನು ವಿಮಾ ಯೋಜನೆಯಡಿ ಒಳಪಡಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ೧೫, ೦೩೫ ರಾಸುಗಳಿಗೆ ವಿಮೆ ಮಾಡಲಾಗಿದೆ. ಇದೇ ವೇಳೆ ಒಕ್ಕೂಟವು ತೆಲಂಗಾಣ ರಾಜ್ಯದ ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಲ್ಲಿ ದಿನಕ್ಕೆ ಸುಮಾರು ೨.೩೦ ಲಕ್ಷ ಲೀಟರ್‌ ಹಾಲು ಮತ್ತು ಮೊಸರು ಮಾರಾಟ ಮಾಡುತ್ತಿದ್ದು, ಇದನ್ನು ೨.೫೦ರಿಂದ ೩ ಲಕ್ಷ ಲೀಟರ್‌ಗೆ ಹೆಚ್ಚಿಸುವ ಗುರಿ ಹೊಂದಿದೆ. ಈ ಎಲ್ಲಾ ಯೋಜನೆಗಳ ಮೂಲಕ ಹಾಸನ ಹಾಲು ಒಕ್ಕೂಟವು ರೈತರ ಆರ್ಥಿಕ ಸ್ಥಿತಿ ಬಲಪಡಿಸುವುದರ ಜೊತೆಗೆ ಹೈನುಗಾರಿಕೆಯನ್ನು ಆಧುನಿಕಗೊಳಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದೆ.ಕೆಲ ಪ್ಯಾಕಿಂಗ್ ಮೆಟೀರಿಯಲ್ಸ್ ಹೊರ ದೇಶದಿಂದ ಇಲ್ಲಿಗೆ ಸರಬರಾಜು ಆಗುತ್ತಿದ್ದು, ಐಸ್ಕ್ರೀಂ ಸಂಬಂಧಪಟ್ಟಂತೆ ಎಲ್ಲಾ ಹೊರ ಭಾಗದಿಂದಲೇ ಮೆಟೀರಿಯಲ್ ಬರುತ್ತದೆ. ಈಗ ಯುದ್ಧದ ಪರಿಣಾಮ ದರ ಹೆಚ್ಚಾಗುತ್ತದೆ. ಮುಂದೆ ನೋಡೊಣ. ಈಗ ಇನ್ನೊಂದು ತಿಂಗಳಿಗೆ ಆಗುವಷ್ಟು ಸ್ಟಾಕ್ ನಮ್ಮಲ್ಲಿದೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇನ್ನೂ ಮೆಗಾ ಡೇರಿಯ ಥೀಮ್ ಪಾರ್ಕ್ ಯೋಜನೆಯಲ್ಲಿ ಇನ್ನೆರಡು ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ. ನಂತರ ಈ ಸ್ಥಳ ಪ್ರವಾಸಿಗರನ್ನ ಆಕರ್ಷಿಸಲಿದೆ. ಪ್ರೇಕ್ಷಣಿಯ ಸ್ಥಳಕ್ಕೆ ಒಟ್ಟು ೭೦ ಕೋಟಿ ಖರ್ಚಾಗಲಿದೆ. ಮೆಗ ಡೇರಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೆಸರಿಡಲು ಒತ್ತಾಯ ಮಾಡಲಾಗುತ್ತಿದೆ ಎಂದರು.ಸಭೆಯಲ್ಲಿ ಒಕ್ಕೂಟದ ಮಹೇಶ್, ನಾರಾಯಣಗೌಡ, ಹೊನ್ನವಳ್ಳಿ ಸತೀಶ್, ರಾಮಚಂದ್ರ, ಚನ್ನೇಗೌಡ, ಜಗದೀಶ್, ಹೇಮಂತ್ ಕುಮಾರ್, ಸ್ವಾಮಿಗೌಡ, ಲಿಂಗರಾಜು, ಬಸವರಾಜು, ಸೋಲಾನ್, ವಸಂತ್ ಕುಮಾರ್,ಆಶಾ ಹಾಗೂ ಬೆಂಗಳೂರು ಒಕ್ಕೂಟದ ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.