ಸಾರಾಂಶ
ರಾಜಕೀಯ ಕ್ಷೇತ್ರದಲ್ಲೂ ಒಳ ಮೀಸಲಾತಿ ಕಲ್ಪಿಸಬೇಕು. ರಾಜಕೀಯ ಮೀಸಲಾತಿಯನ್ನು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಹಿಂದುಳಿದ ಜಾತಿಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯ.
ಕನ್ನಡಪ್ರಭ ವಾರ್ತೆ ಆಳಂದ
ಜ.28ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ರಾಜ್ಯಮಟ್ಟದ ಶೋಷಿತರ ಜಾಗೃತಿ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದಲಿತ, ಹಿಂದುಳಿದ, ಆದಿವಾಸಿ ಅಲೆಮಾರಿ, ಅಲ್ಪಸಂಖ್ಯಾತ ಮತ್ತು ಜನಪರ ಸಂಘಟನೆಗಳು ಬಾಂಧವರು ಪಾಲ್ಗೊಳ್ಳಬೇಕು ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಹಿಂದುಳಿದ ಜಾತಿಗಳ ಒಕ್ಕೂಟದ ಮುಖಂಡರು ಸಾಮೂಹಿಕವಾಗಿ ಇಂದಿಲ್ಲಿ ಮನವಿ ಮಾಡಿದರು.ಈ ಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಮುದಾಯ ಮುಖಂಡರ ಸಭೆಯ ಬಳಿಕ ಸಮಾವೇಶಕ್ಕೆ ಸಮುದಾಯ ಜನರಿಗೆ ಬಹಿರಂಗವಾಗಿ ಅಹ್ವಾನಿಸಿ ಅವರು ಮಾತನಾಡಿದರು.
ಜಿಲ್ಲಾ ಮುಖಂಡ, ನ್ಯಾಯವಾದಿ ಮಹಾಂತೇಶ ಕವಲಗಿ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ರಮೇಶ ಲೋಹಾರ ಅವರು ಮಾತನಾಡಿ, ಹಿಂದುಳಿದ ಮತ್ತು ಶೋಷಿತ ಸಮುದಾಯುಗಳ ಗಣತಿಯನ್ನು ಮೇಲ್ಜಾತಿಯವರು ಕಾಂತರಾಜ ಆಯೋಗದ ವರದಿಯನ್ನು ವಿರೋಧಿಸುತ್ತಿರುವುದು ಸರಿಯಲ್ಲ. ಸರ್ಕಾರ ಈ ವರದಿಯನ್ನು ಸ್ವೀಕರಿಸಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ನಡೆಯುವ ಈ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆಂದರು.ರಾಜಕೀಯ ಕ್ಷೇತ್ರದಲ್ಲೂ ಒಳ ಮೀಸಲಾತಿ ಕಲ್ಪಿಸಬೇಕು. ರಾಜಕೀಯ ಮೀಸಲಾತಿಯನ್ನು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಹಿಂದುಳಿದ ಜಾತಿಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಶೇಕಡವಾರು ಪ್ರಮಾಣದಲ್ಲಿ ಮೀಸಲಾತಿ ಹೆಚ್ಚಿಸಬೇಕು. ಖಾಸಗಿ ಕ್ಷೇತ್ರಕ್ಕೂ ಮೀಸಲಾತಿಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಂಡಗಾರ ಸಮುದಾಯದ ಅಧ್ಯಕ್ಷ ರಾಜೇಂದ್ರ ಬಂಡಗಾರ, ಅಲ್ಪಸಂಖ್ಯಾತ ಮುಖಂಡ ಫಿರ್ದೋಸ್ ಅನ್ಸಾರಿ, ಸಿದ್ಧರಾಮ ಪೂಜಾರಿ, ಮಲ್ಲಿಕಾರ್ಜುನ, ಅರುಣಕುಮಾರ ಕಟ್ಟಿಮನಿ, ಸೋಮಶೇಖರ ಕವಲಗಾ, ಶಿವರಾಯ ಪೂಜಾರಿ ತೆಲಾಕುಣಿ ಇದ್ದರು.