ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಾರ್ವಜನಿಕರಿಗೆ ಆಹ್ವಾನ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಚಿತ್ರದುರ್ಗ ನಗರದಲ್ಲಿ ನಾಮಫಲಕ ಜಾಗೃತಿ ಆಂದೋಲನ ಮತ್ತು ಸಾರ್ವಜನಿಕರಿಗೆ ಸಮ್ಮೇಳನಕ್ಕೆ ಆಹ್ವಾನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಫೆಬ್ರವರಿ 17 ಮತ್ತು 18 ರಂದು ಚಿತ್ರದುರ್ಗ ನಗರದಲ್ಲಿ 18 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿನ ಅಂಗಡಿ,ಮುಂಗಟ್ಟುಗಳು ಸೇರಿದಂತೆ ಸಾರ್ವಜನಿಕರಿಗೆ ಸಮ್ಮೇಳನಕ್ಕೆ ಆಹ್ವಾನ ನೀಡಲಾಯಿತು. ಸಮ್ಮೇಳನ ಜರುಗುವ ನಗರದಲ್ಲಿ ಕನ್ನಡದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ.60 ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎಂದು ತಿಳಿಸಲಾಯಿತು.

ಕೆಲವು ಅಂಗಡಿ, ಮುಂಗಟ್ಟುಗಳ ಮಾಲೀಕರು ಸಂಪೂರ್ಣವಾಗಿ ಕನ್ನಡವನ್ನು ಮಾತ್ರ ಬಳಸುತ್ತೇವೆ ಎಂದು ಹೇಳಿದರು. ಸ್ಟಾರ್ ಒನ್ ಎಲೆಕ್ಟ್ರಾನಿಕ್ಸ್ ಮಾಲೀಕರು ಮಾತನಾಡಿ, ಕರ್ನಾಟದಲ್ಲಿರುವ ನಾವುಗಳು ಪೂರ್ಣಪ್ರಮಾಣದಲ್ಲಿ ಬಳಸಬೇಕೇು ಹೊರತು ಉಳಿದ ರಾಜ್ಯಗಳು ಬಳಸುವುದು ಸಾಧ್ಯವಿಲ್ಲ. ಯಾವುದೇ ರಾಜ್ಯದಿಂದ ಇಲ್ಲಿಗೆ ಬಂದಿರಲಿ, ಅವರು ಕನ್ನಡವನ್ನು ಮಾತನಾಡುವುದನ್ನು ಕಡ್ಡಾಯವಾಗಿ ಕಲಿಯಬೇಕು ಎಂದರು.

ಪೌರಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಗೃಹಿಣಿಯರು, ಅಂಗಡಿಮುಂಗಟ್ಟುಗಳ ಮಾಲೀಕರಿಗೆ ಮನವಿ ಪತ್ರ ಮತ್ತು ಗುಲಾಬಿ ನೀಡಿ ಸಮ್ಮೇಳನಕ್ಕೆ ಆಹ್ವಾನ ನೀಡಲಾಯಿತು. ನಾಮಫಲಕದ ಬಗ್ಗೆ ಜಾಗೃತಿ ನಡೆಸಲಾಯಿತು. ಕನಕ ವೃತ್ತದಿಂದ ಆರಂಭಗೊಂಡು ಪಿಬಿ ರಸ್ತೆ, ಗಾಂಧಿ ವೃತ್ತದ ವರೆಗಿನ ಅಂಗಡಿ, ಮುಂಗಟ್ಟುಗಳಿಗೆ ಮನವಿ ಪತ್ರ ನೀಡಲಾಯಿತು. ಮುಂದಿನ ದಿನಗಳಲ್ಲಿ ನಗರದ ಎಲ್ಲ ಪ್ರದೇಶಗಳಿಗೆ ಮನವಿ ಪತ್ರವನ್ನು ತಲುಪಿಸಲಾಗುವುದು ಎಂದು ತಾಲೂಕು ಕಸಾಪ ಅಧ್ಯಕ್ಷ ವಿ.ಎಲ್.ಪ್ರಶಾಂತ್ ತಿಳಿಸಿದ್ದಾರೆ.

ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ ಶಿವಸ್ವಾಮಿ, ಜಿಲ್ಲಾ ಕಾರ್ಯದರ್ಶಿ ವಿ.ಶ್ರೀನಿವಾಸ ಮಳಲಿ, ಆನಂದ್‌ಕುಮಾರ್,ಗಿರೀಶ್ ನಾಯ್ಕ ಮತ್ತಿತರರಿದ್ದರು.