ಪ್ರತ್ಯೇಕ ಸಂಘ ರಚನೆಗೆ ಬಹುತೇಕ ರೈತರು ವಿರೋಧ

| Published : Jan 12 2025, 01:17 AM IST

ಸಾರಾಂಶ

ಸಭೆಯಲ್ಲಿ ಹಾಜರಿದ್ದ ಓರ್ವ ಸದಸ್ಯ ಹಾಗೂ ಸದಸ್ಯರಲ್ಲದ ಒಬ್ಬರು ಮಾತ್ರವೇ ಪ್ರತ್ಯೇಕ ಸಂಘ ರಚನೆ ಆಗಬೇಕೆಂಬ ಅಭಿಪ್ರಾಯ ಮಂಡಿಸಿ ಸಹಿ ಹಾಕಿದರೆ, ಸಭೆಯಲ್ಲಿ ಹಾಜರಿದ್ದ 462 ಸದಸ್ಯರ ಪೈಕಿ 460 ಮಂದಿ ಸದಸ್ಯರು ಸಂಘವನ್ನು ಪ್ರತ್ಯೇಕ ಮಾಡುವುದು ಬೇಡ ಎಂಬ ನಿರ್ಣಯಕ್ಕೆ ಬದ್ದ

--------ಕನ್ನಡಪ್ರಭ ವಾರ್ತೆ ಟಿ. ನರಸೀಪುರಕಸಬಾ ಕೃಷಿ ಪತ್ತಿನ ಸಹಕಾರ ಸಂಘದಿಂದ ಪ್ರತ್ಯೇಕ ಸಂಘ ರಚನೆಗೆ ಬಹುತೇಕ ರೈತರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ಆಸಕ್ತಿ ವಹಿಸಿದ್ದ ಕೆಲ ಮುಖಂಡರು ತೀವ್ರ ಮುಖಭಂಗ ಅನುಭವಿಸಿದರು.ತಾಲೂಕಿನ ಕಿರಗಸೂರು ಗ್ರಾಪಂ ವ್ಯಾಪ್ತಿಯ ಕೆಲ ಗ್ರಾಮಗಳನ್ನು ಕಸಬಾ ಕೃಷಿ ಪತ್ತಿನ ಸಹಕಾರ ಸಂಘದಿಂದ ಬಿಡುಗಡೆಗೊಳಿಸಿ ಪ್ರತ್ಯೇಕ ಸಂಘ ರಚನೆ ಮಾಡಿಕೊಳ್ಳಲು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಶನಿವಾರ ಕರೆಯಲಾಗಿದ್ದ ಕಸಬಾ ಸಹಕಾರ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆ ಯಲ್ಲಿ ತೀವ್ರವಾದ ಪರ ವಿರೋಧದ ಚರ್ಚೆ ನಡೆಯಿತು.ತಾಲೂಕಿನ ಕಿರಗಸೂರು ಗ್ರಾಪಂ ವ್ಯಾಪ್ತಿಯ ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯ ವ್ಯಾಪ್ತಿಯ ಬಿಲಿಗೆರೆಹುಂಡಿ, ಕಿರಗಸೂರು, ಹುಣಸೂರು, ಕೂಡ್ಲೂರು, ಮನ್ನೇಹುಂಡಿ ಹಾಗೂ ಡಣಾಯಕನಪುರ ಗ್ರಾಮಗಳನ್ನು ಕಸಬಾ ಕಾರ್ಯ ಕ್ಷೇತ್ರದಿಂದ ಬಿಡುಗಡೆಗೊಳಿಸಿ ಪ್ರತ್ಯೇಕ ಸಂಘ ಸಂಘ ರಚನೆಗೆ ಸಹಕಾರ ಸಂಘಗಳ ನಿಬಂಧಕರು ಆದೇಶ ನೀಡಿದ ಬೆನ್ನಲ್ಲೆ ಕಸಬಾ ಕೃಷಿ ಪತ್ತಿನ ಸಹಕಾರ ಸಂಘವು ಸರ್ವ ಸದಸ್ಯರ ವಿಶೇಷ ಮಹಾಸಭೆ ಆಯೋಜಿಸಿ ಪ್ರತ್ಯೇಕ ಸಂಘ ಬೇಕೆ, ಬೇಡವೇ ಎಂಬ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಯಿತು.ಸಭೆಯಲ್ಲಿ ಹಾಜರಿದ್ದ ಓರ್ವ ಸದಸ್ಯ ಹಾಗೂ ಸದಸ್ಯರಲ್ಲದ ಒಬ್ಬರು ಮಾತ್ರವೇ ಪ್ರತ್ಯೇಕ ಸಂಘ ರಚನೆ ಆಗಬೇಕೆಂಬ ಅಭಿಪ್ರಾಯ ಮಂಡಿಸಿ ಸಹಿ ಹಾಕಿದರೆ, ಸಭೆಯಲ್ಲಿ ಹಾಜರಿದ್ದ 462 ಸದಸ್ಯರ ಪೈಕಿ 460 ಮಂದಿ ಸದಸ್ಯರು ಸಂಘವನ್ನು ಪ್ರತ್ಯೇಕ ಮಾಡುವುದು ಬೇಡ ಎಂಬ ನಿರ್ಣಯಕ್ಕೆ ಬದ್ದರಾಗಿ ಸಹಿ ಮಾಡಿದರು.ಹಾಗಾಗಿ ಪ್ರತ್ಯೇಕ ಸಂಘ ಆಗಿಯೇ ತೀರಬೇಕೆಂದು ಹೋರಾಟಕ್ಕೆ ಮುಂದಾಗಿದ್ದ ಕೆಲ ಮುಖಂಡರು ನಿರಾಶೆ ಅನುಭವಿಸುವಂತಾಯಿತು. ತಡೆಯಾಜ್ಞೆಗೆ ವಿರೋಧ, ವಾಗ್ವಾದ, ಮಾತಿನ ಚಕಮಕಿ..! ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸರ್ವ ಸದಸ್ಯರ ವಿಶೇಷ ಸಭೆ ಆರಂಭಗೊಳ್ಳುತ್ತಿದ್ದಂತೆ ಕಸಬಾದಿಂದ ಗ್ರಾಮಗಳ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಆಡಳಿತ ಮಂಡಳಿಯ ನಡೆಗೆ ಕೆಲ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಆಡಳಿತ ಮಂಡಳಿ ಹಾಗೂ ಕೆಲ ರೈತರ ನಡುವೆ ತೀವ್ರವಾದ ಮಾತಿನ ಚಕಮಕಿನಡೆಯಿತು. ಒಬ್ಬರನ್ಬೊಬ್ಬರು ತಳ್ಳಾಡಿ ನೂಕಾಡಿದ ಪ್ರಸಂಗ ನಡೆಯಿತು.ಪೋಲೀಸರು ಮದ್ಯ ಪ್ರವೇಶ ಮಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಸರ್ವ ಸದಸ್ಯರ ಸಭೆಗೆ ಪೋಲೀಸರ ಬಂದೋಬಸ್ತ್ ಮಾಡಿಸಿರುವ ಉದ್ದೇಶ ರೈತರಲ್ಲಿ ಭಯ ಉಂಟು ಮಾಡುವುದಾಗಿದೆ ಎಂದು ರೈತರೊಬ್ಬರು ಸಂಘದ ಅಧ್ಯಕ್ಷ ಮಲ್ಲಣ್ಣನವರ ವಿರುದ್ಧ ಕಿಡಿಕಾರಿದರು.ರೈತರ ಆರೋಪಗಳಿಗೆ ಉತ್ತರಿಸಿದ ಸಂಘದ ಅಧ್ಯಕ್ಷ ಮಲ್ಲಣ್ಣ, ಪ್ರತ್ಯೇಕ ಸಂಘ ಸ್ಥಾಪನೆಯಾದರೆ ಆಗಬಹುದಾದ ಸಮಸ್ಯೆಗಳ ಬಗ್ಗೆ ವಿವರ ನೀಡಿದರು. ಕಸಬಾ ಸಂಘದಿಂದ ಗ್ರಾಮಗಳನ್ನು ಬಿಡುಗಡೆಗೊಳಿಸಿ ಪ್ರತ್ಯೇಕ ಸಂಘ ರಚನೆ ಮಾಡಿಕೊಂಡರೆ ನಮ್ಮ ವಿರೋಧ ಇಲ್ಲ. ಆದರೆ ಸಂಘ ರಚನೆ ನಂತರ ಕೆಲ ವರ್ಷಗಳ ತನಕ ಸಂಘ ಅಸ್ತಿತ್ವ ತೋರುವ ತನಕ ರೈತರಿಗೆ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ. ಹಾಗಾಗಿ ರೈತರ ಹಿತದೃಷ್ಟಿಯಿಂದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಆದೇಶವನ್ನು ಪ್ರಶ್ನಿಸಿ ತಡೆಯಾಜ್ಞೆ ತರಲಾಗಿದೆಯೇ ಹೊರತು, ಪ್ರತ್ಯೇಕ ಸಂಘ ಮಾಡುವ ಪ್ರಕ್ರಿಯೆಗೆ ನಮ್ಮ ವಿರೋಧ ಇಲ್ಲ. ಪ್ರತ್ಯೇಕ ಸಂಘ ಮಾಡಲೇ ಬೇಕೆಂಬ ಬಯಕೆ ನಿಮ್ಮದಾಗಿದ್ದರೆ, ಸದಸ್ಯರ ಕೋರಂ ಮೂಲಕ ನಿರ್ಧಾರಕ್ಕೆ ಬರೋಣ ಎಂದರು.ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಹೇಶ್, ತಾಪಂ ಮಾಜಿ ಸದಸ್ಯ ಎಂ. ರಮೇಶ್ ಪ್ರತ್ಯೇಕ ಸಂಘಕ್ಕೆ ಒಲವು ತೋರಿದರೆ, ಕೃಷಿಕ ಸುಂದರ ಸ್ವಾಮಿ ವಿರೋಧ ವ್ಯಕ್ತಪಡಿಸಿದರು.ಸಂಘದ ಉಪಾಧ್ಯಕ್ಷೆ ನಾಗಮ್ಮ, ನಿರ್ದೇಶಕರಾದ ಎಂ. ನಾಗರತ್ನ, ಟಿ.ಸಿ. ಫಣೀಶ್ ಕುಮಾರ್, ಶೇಖರ್, ಕೆ. ನಂಜುಂಡಸ್ವಾಮಿ, ಮಹಾಲಿಂಗಪ್ಪ, ಬಿ. ಚಂದ್ರಮ್ಮ, ದೊಡ್ಡಬಸವಯ್ಯ, ಸಾವಿತ್ರಮ್ಮ, ಪರಶಿವ, ಟಿ.ಎನ್. ಗುರುಪ್ರಸಾದ್, ಪ್ರಭಾರ ಸಿಇಒ ಡಿ.ಎಂ. ಶಿವಕುಮಾರ್, ದಿವ್ಯಶ್ರೀ, ಪುರಸಭಾ ಸದಸ್ಯ ಬಾದಾಮಿ ಮಂಜು, ಗೌಡ, ಫ್ಯಾನ್ಸಿ ಮೋಹನ್, ಪಿ. ಸ್ವಾಮಿನಾಥ್ ಗೌಡ, ಈಶ್ವರ್, ಟಿ.ಎಂ. ನಾಗಣ್ಣ, ಡೇರಿ ಮಾಜಿ ಅಧ್ಯಕ್ಷ ಮಹದೇವ್, ಅಧ್ಯಕ್ಷ ಶೇಖರ್, ಸಿ. ಮಹದೇವ್, ಚಿನ್ನ ಬುದ್ಧಿ, ರಾಜ ಬುದ್ಧಿ, ಡೇರಿ ಉಪಾಧ್ಯಕ್ಷ ಏಳುಮಲೆ ಮಂಜು, ಕಿರಗಸೂರು ಮಹಾದೇವಸ್ವಾಮಿ, ಡಿ.ಎಲ್. ಮಹದೇವಪ್ಪ, ಸೋಮಣ್ಣನಾಯಕ, ಲಕ್ಷ್ಮಣ ಇದ್ದರು.