A protest was held in Kalaburagi—as part of a statewide agitation by the ABVP—demanding justice for students affected by irregularities in the police constable examination and calling for a high-level investigative agency to probe the KPSC scandal.

-ಕೆಪಿಎಸ್‌ಸಿಯಲ್ಲಿ ನಡೆದ ಹಗರಣ: ಉನ್ನತ ಮಟ್ಟದ ತನಿಖಾ ಸಂಸ್ಥೆಗೆವಹಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ

----

ಕನ್ನಡಪ್ರಭ ವಾರ್ತೆ ಕಲಬುರಗಿಪೊಲೀಸ್ ಕಾನ್ಸ್‌ಟೇಬಲ್‌ ಪರೀಕ್ಷೆಯಲ್ಲಿ ನಡೆದ ಲೋಪಗಳಿಂದ ಸಮಸ್ಯೆಗೆ ಒಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಂತೆ, ಕೆಪಿಎಸ್‌ಸಿಯಲ್ಲಿ ನಡೆದಿರುವ ಹಗರಣದ ಕುರಿತು ಉನ್ನತ ಮಟ್ಟದ ತನಿಖಾ ಸಂಸ್ಥೆ ವಹಿಸಬೇಕೆಂದು ಎಬಿವಿಪಿ ರಾಜ್ಯಾದ್ಯಂತ ನಡೆಸಿದ ಪ್ರತಿಭಟನೆ ಕಲಬುರಗಿಯಲ್ಲೂ ನಡೆಯಿತು.

ನಗರದ ನ್ಯೂ ಆರ್‌ಟಿಒ ವೃತ್ತದಲ್ಲಿ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನ ಎದುರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯ ಸಂಧರ್ಬದಲ್ಲಿ ವಿಜಯಪುರದ ತಿಕೋಟಾದಲ್ಲಿ ಆದ ಗೊಂದಲದ ಘಟನೆಯನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ. ಇತ್ತೀಚೆಗೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ಜುಲೈ 17ರಂದು ಹೊರಬಿದ್ದ ಫಲಿತಾಂಶದಲ್ಲಿ ಅಕ್ರಮ ನಡೆದಿರುವುದು ಬಯಲಾಗಿದೆ.

ಒಂದು ಹುದ್ದೆಗೆ ಬರೋಬ್ಬರಿ ₹80 ಲಕ್ಷ ರು. ವರೆಗೆ ಬೆಲೆ ಕಟ್ಟಿ ಮಾರಾಟ ಮಾಡಿರುವುದು, ಅಭ್ಯರ್ಥಿಗಳಿಗೆ ಕರೆ ಮಾಡಿ, ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ಹಾಗೂ ಓಎಂಆರ್‌ ಶೀಟ್ ಟ್ಯಾಂಪರಿಂಗ್‌ ನಂತಹ ಆರೋಪಗಳು ಕೇಳಿಬಂದಿವೆ ಎಂದು ಎಬಿವಿಪಿ ದೂರಿದೆ.

ಕೆಪಿಎಸ್‌ಸಿ ಅಧ್ಯಕ್ಷರು ಸುಳ್ಳು ದಾಖಲೆ ಹಾಗೂ ತಮ್ಮ ಪ್ರಭಾವವನ್ನು ಬಳಸಿ ತಮ್ಮ ಮಕ್ಕಳಿಗೆ ಸರ್ಕಾರಿ ಹುದ್ದೆಯು ದೊರೆಯುವಂತೆ ಮಾಡಿರುವುದು ಅವರ ಹುದ್ದೆಗೆ ಅವರು ಮಾಡಿದ ಒಂದು ಕಳಂಕವಾಗಿದೆ. ಇಂತಹ ಘಟನೆಗಳ ನಡುವೆ ರಾಜ್ಯ ಸರ್ಕಾರವು ತಮ್ಮ ಕಣ್ಣಮುಂದೆಯೇ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ವಿಫಲವಾಗಿದೆ.

ಸರ್ಕಾರ ಕೆಪಿಎಸ್ಸಿ ಪ್ರಕರಣವನ್ನು ಉನ್ನತ ಮಟ್ಟದ ತನಿಖಾ ಸಂಸ್ಥೆಗೆ ವಹಿಸುವಂತೆ ಎಬಿವಿಪಿ ಆಗ್ರಹಿಸಿದೆ.

ವಿಭಾಗ ಸಂಘಟನ ಕಾರ್ಯದರ್ಶಿ ಹೇಮಂತ ಅರಳಿ, ಕಾರ್ಯದರ್ಶಿ ಶ್ರವಣ, ರಾಜ್ಯ ಸಹ ಕಾರ್ಯದರ್ಶಿಗಳಾದ ಹನುಮಂತ ಬಗಲಿ ,ರಾಜ್ಯ ಕಾರ್ಯ ಕಾರಣಿ ಸದಸ್ಯರಾದ ಸಿದ್ದಲಿಂಗ ತಳವಾರ,ಮಂಜುನಾಥ ಕೊನ್ನೂರ ,ನಗರ ಸಹ ಕಾರ್ಯದರ್ಶಿ ಅಭಿಷೇಕ ಪಾಟೀಲ,ಹೋರಾಟ ಪ್ರಮುಖರಾದ ಅವಿನಾಶ ಗುತ್ತಿದಾರ,ರಾಚಪ್ಪ,ರೋಹಿತ್ ಹಾಗೂ ಕಾಲೇಜಿನ ವಿದ್ಯಾರ್ಥಿನಿಯರ ಇದ್ದರು.