ಕುಳಗಟ್ಟೆ ಬಳಿ ಮತ್ತೆ ಒಡೆದ ಏತ ನೀರಾವರಿ ಪೈಪ್‌ಲೈನ್‌

| Published : Sep 30 2025, 12:00 AM IST

ಸಾರಾಂಶ

ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯ ಪೈಪ್‌ ಲೈನ್‌ ಒಡೆದು, ಕಾರಂಜಿಯಂತೆ ಚಿಮ್ಮುತ್ತಿರುವ ಘಟನೆ ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದಲ್ಲಿ ವರದಿಯಾಗಿದೆ.

- ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಪೈಪ್‌ಲೈನ್ ಕಳಪೆ ಕಾಮಗಾರಿಗೆ ಜನರ ಬೇಸರ

- ಕಳೆದ ವರ್ಷವಷ್ಟೇ ಸಿಎಂ 121 ಕೆರೆಗಳಿಗೆ ನೀರು ತುಂಬಿಸುವ ಈ ಯೋಜನೆ ಉದ್ಘಾಟಿಸಿದ್ದರು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯ ಪೈಪ್‌ ಲೈನ್‌ ಒಡೆದು, ಕಾರಂಜಿಯಂತೆ ಚಿಮ್ಮುತ್ತಿರುವ ಘಟನೆ ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದಲ್ಲಿ ವರದಿಯಾಗಿದೆ.

ಕುಳಗಟ್ಟೆ ಗ್ರಾಮದ ಬಳಿ 121 ಕೆರೆಗಳಿಗೆ ನೀರು ತುಂಬಿಸುವ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಪೈಪ್‌ ಲೈನ್ ಮಾರ್ಗ ಸಾಗಿದೆ. ಕಳೆದ ಜುಲೈ ತಿಂಗಳಿನಲ್ಲಿ ಪೈಪ್‌ ಒಡೆದು ಮನೆಗಳಿಗೆ ನೀರು ನುಗ್ಗಿದ್ದಂತೆ ಮತ್ತೆ ಪೈಪ್ ಲೈನ್ ಒಡೆದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಕಾರಂಜಿಯಂತೆ ಚಿಮ್ಮಿ ಹರಿದುಹೋಗಿದೆ.

ಜುಲೈನಲ್ಲಿ ಪೈಪ್‌ ಲೈನ್ ಒಡೆದಾಗ ಅಕ್ಕಪಕ್ಕ, ಸಮೀಪದ ಮನೆಗಳಿಗೆ ನೀರಿನ ಜೊತೆಗೆ ಮಣ್ಣು, ಸಣ್ಣ ಮತ್ತು ದೊಡ್ಡ ಕಲ್ಲುಗಳೂ ಹಾರಿಹೋಗಿ ಹೆಂಚಿನ ಮನೆ, ವಾಹನಗಳ ಮೇಲೆ ಬಿದ್ದು ಹಾನಿಯಾಗಿತ್ತು. ಅದಾಗಿ 2 ತಿಂಗಳಲ್ಲೇ ಮತ್ತೆ ಪೈಪ್ ಲೈನ್ ಒಡೆದಿದೆ. ಕಳಪೆ ಪೈಪ್ ಲೈನ್ ಅಳವಡಿಕೆ ಕಾಮಗಾರಿಯಿಂದಾಗಿಯೇ ಇಷ್ಟೆಲ್ಲಾ ಆಗುತ್ತಿದೆಯೆಂದು ಗ್ರಾಮಸ್ಥರು ಆರೋಪಿಸಿ, ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ 121 ಕೆರೆಗಳಿಗೆ ನೀರು ತುಂಬಿಸುವ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಉದ್ಘಾಟಿಸಿ, ಲೋಕಾರ್ಪಣೆ ಮಾಡಿದ್ದರು. ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ 121 ಕೆರೆಗಳಿಗೆ ನೀರುಣಿಸುವ ಏತ ನೀರಾವರಿ ಯೋಜನೆ ಇದಾಗಿದೆ.

- - -

(ಫೋಟೋ ಬೇಡ.)