ಸಾರಾಂಶ
ಕನ್ನಡಪ್ರಭ ವಾರ್ತೆ ಬ್ಯಾಡಗಿ
ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಯಡಿ ತಾಲೂಕಿನ ಒಂದು ಎಕರೆಗೆ ನೀರು ಕೊಡದೇ ಯೋಜನೆ ಹಳ್ಳ ಹಿಡಿಸಿದ್ದಾಯಿತು. ಇನ್ನು ಜನಪ್ರತಿನಿಧಿಗಳ ಇಚ್ಚಾಶಕ್ತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ₹469 ಕೋಟಿ ವೆಚ್ಚದ ಆಣೂರು ಮತ್ತು ಬುಡಪನಹಳ್ಳಿ ಏತ ನೀರಾವರಿ ಯೋಜನೆಯಡಿ ಕಳೆದೊಂದು ವರ್ಷದಿಂದ ಯಾವುದೇ ಕೆರೆಯನ್ನು ತುಂಬಿಸದೇ ಅದೇ ಹಾದಿಯಲ್ಲಿ ಸಾಗುತ್ತಿದೆ ಎಂದು ಆರೋಪಿಸಿ ರೈತ ಸಂಘಟನೆಗಳ ಸದಸ್ಯರು ಯುಟಿಪಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರುರೈತರ ಬೇಡಿಕೆ ಈಡೇರಿಸದಿದ್ದರೆ ಚುನಾವಣೆ ಬಹಿಷ್ಕರಿಸುವ ಕುರಿತು ರೈತ ಸಂಘ ನಿರ್ಧರಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ತಹಸೀಲ್ದಾರ ಕಚೇರಿಯಲ್ಲಿ ಅಧಿಕಾರಿಗಳ ಹಾಗೂ ರೈತ ಸಂಘದ ಸದಸ್ಯರ ಸಭೆಯಲ್ಲಿ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ರೈತ ಸಂಘದ ಮುಖಂಡ ಗಂಗಣ್ಣ ಎಲಿ, ಜಾಕ್‌ವೆಲ್ ಗುರ್ತಿಸಿರುವ ಸ್ಥಳ ಸರಿಯಿಲ್ಲ. ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ತುಂಗಭದ್ರಾ ನದಿಯಲ್ಲಿ ನೀರಿದ್ದರೂ ಜಾಕ್‌ವೆಲ್‌ಗೆ ನೀರು ತಲುಪುತ್ತಿಲ್ಲ. ನಿಮ್ಮ ತಪ್ಪಿನಿಂದ ರೈತರು ನೀರಿಲ್ಲದೇ ಸಾಯುತ್ತಿದ್ದೇವೆ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಯುಟಿಪಿ ಎಂಜಿನೀಯರ್ ಬಸವರಾಜ ಬೆನ್ನೂರ, ಬ್ಯಾರೇಜ್ ನಿರ್ಮಾಣದಿಂದ ತಮ್ಮ ಹೊಲಗಳಿಗೆ ಸಮಸ್ಯೆಯಾಗುತ್ತಿದೆ ಎಂದು ದಾವಣಗೆರೆ ಬಳಿಯಿರುವ ಇಂಗಳಗುಂದಿ ಗ್ರಾಮಸ್ಥರು ಕಾಮಗಾರಿಗೆ ತಡೆಯೊಡ್ಡುತ್ತಿದ್ದಾರೆ, ಕಳೆದ 3 ತಿಂಗಳಿಂದ ಇಬ್ಬರು ಜಿಲ್ಲಾಧಿಕಾರಿಗಳ ಸಹಕಾರದಿಂದ ಜನರ ಮನವೊಲಿಸಿದ್ದೇವೆ. ಬ್ಯಾರೇಜ್ ಕಾಮಗಾರಿ ನಡೆಸಲಿದ್ದೇವೆ. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ನೀರು ಹರಿಸಲು ಆರಂಭಿಸುತ್ತೇವೆ. ಅಲ್ಲಿ ವರೆಗೂ ಸಹಕರಿಸುವಂತೆ ಕೋರಿದರು.
ತಾಲೂಕಾಧ್ಯಕ್ಷ ರುದ್ರಗೌಡ ಕಾಡನಗೌಡ್ರ ಮಾತನಾಡಿ, ₹115.40 ಕೋಟಿ ವೆಚ್ಚದಲ್ಲಿ ವರದಾ ನದಿಯಿಂದ 1 ಟಿಎಂಸಿ ನೀರು ಎತ್ತುವ ಮೂಲಕ ತಾಲೂಕಿನ 22 ಗ್ರಾಮಗಳ 5261 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆ ಕಳೆದ 2003ರಲ್ಲಿ ಆಂಭಿಸಲಾಗಿದೆ, ನಿಗದಿತ ಅವಧಿಯಂತೆ 2009ರಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಅಧಿಕಾರಿಗಳು ಮತ್ತು ಗುತ್ತಿಗದಾರರ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಬಹುನೀರಿಕ್ಷಿತ ಯೋಜನೆ ವಿಫಲವಾಗಿದೆ ಎಂದರುಕಿರಣ ಗಡಿಗೋಳ ಮಾತನಾಡಿ, ಗಟ್ಟಿಶಿಲೆ ಸಿಗಲಿಲ್ಲವೆಂಬ ಕಾರಣಕ್ಕೆ ಐದಾರು ವರ್ಷಗಳಷ್ಟು ವಿಳಂಬವಾಗಿ ಆರಂಭವಾದ ಕಾಮಗಾರಿ, ಕೆಲಸ ಮಾಡಲು ಸಾಧ್ಯವಾಗದೇ ಬಿಟ್ಟು ಹೋದ ಗುತ್ತಿಗೆದಾರ, ಪರಿಹಾರ ಸಿಗದೇ ಕಾಲುವೆ ಮುಚ್ಚಿದ ರೈತರು, ಹೀಗೆ ಹತ್ತು ಹಲವು ಕಾರಣಕ್ಕೆ ಯೋಜನೆ ಕುಂಟುತ್ತ ಸಾಗಿದ್ದು, ರೈತರಿಂದ ಸದಾಕಾಲ ದೂಷಿಸಿಕೊಳ್ಳುವಂತೆ ಮಾಡಿದೆ. ಕಾಲುವೆ ಮೂಲಕ ರೈತರ ಜಮೀನುಗಳಿಗೆ ನೀರು ಹರಿಸುವುದು ಇರಲಿ, ಕನಿಷ್ಟ ಒಂದಿಷ್ಟು ಕೆರೆಗಳನ್ನಾದರೂ ತುಂಬಿಸಿ ಎಂದು ಆಗ್ರಹಿಸಿದರು.
ಕೆರೆಗಳಿಗೆ ನೀರು ಹರಿಸುತ್ತೇನೆ ಅನುಮಾನ ಬೇಡ:ಇದಕ್ಕೆ ಪ್ರತಿಕ್ರಿಯಿಸಿದ ಎಂಜಿನೀಯರ್ ರುದ್ರಪ್ಪ, ರೈತರಿಗೆ ನೀರು ಕೊಡಬೇಕೆಂಬ ಕಾರಣಕ್ಕೆ ಬಹುತೇಕ ಶಾಸಕರು ಅವರವರ ಕಾಲಘಟ್ಟದಲ್ಲಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಭೂಮಿ ಕಳೆದುಕೊಂಡ ಎಲ್ಲ ರೈತರಿಗೆ ಪರಿಹಾರದ ಮೊತ್ತ ತಲುಪಿದೆ. ಪೊಲೀಸ್ ಸಹಾಯ ಪಡೆದು ಮುಚ್ಚಿರುವ 12 ಕಿಮೀ ಕಾಲುವೆ ಸ್ವಚ್ಚಗೊಳಿಸಿದ್ದು, ಕಾಲುವೆ ಮಣ್ಣು ತೆಗೆಸುತ್ತಿದ್ದೇನೆ. ಕೃಷಿಭೂಮಿಗಳಿಗೆ ನೀರು ಹರಿಸಲು ಹೊಲಗಾಲವೆ ನಿರ್ಮಾಣಕ್ಕೆ ₹5 ಕೋಟಿ ಹಣ ಮೀಸಲಿದ್ದು, ಟೆಂಡರ್ ಪ್ರಕ್ರಿಯೆ ಬಳಿಕ ಕಾಮಗಾರಿ ಆರಂಭವಾಗಲಿದೆ. ಯಾವುದೇ ಕಾರಣಕ್ಕೂ ಪ್ರಸಕ್ತ ವರ್ಷ ಕೆರೆಗಳಿಗೆ ನೀರು ಹರಿಸುವ ಭರವಸೆ ನೀಡಿದರು.
ವೇದಿಕೆಯಲ್ಲಿ ತಹಸೀಲ್ದಾರ್ ಪಟ್ಟದರಾಜು, ರೈತ ಮುಖಂಡ ಡಾ. ಕೆ.ವಿ. ದೊಡ್ಡಗೌಡ್ರ, ಜಾನಪುನೀತ್, ಮಲ್ಲೇಶ ಕೊಪ್ಪದ, ಅರಣ್ಯಾಧಿಕಾರಿ ಅಣ್ಣಪ್ಪ ಹಾಗೂ ಹೆಸ್ಕಾಂ ಅಧಿಕಾರಿಗಳಿದ್ದರು.ಅನಧಿಕೃತ ಜೋಡಣೆ ಸ್ಥಗಿತಗೊಳಿಸಿ
ಓವರ ಲೋಡ್‌ನಿಂದ ಎಲ್ಲೆಂದರಲ್ಲಿ ಟಿಸಿಗಳು ಸುಡುತ್ತಿವೆ, ಕೂಡಲೇ ಅಕ್ರಮ-ಸಕ್ರಮ ಯೋಜನೆಯಡಿ ರೈತರ ಕೊಳವೆಬಾವಿ ಸಂಪರ್ಕಗಳನ್ನು ಸಕ್ರಮಗೊಳಿಸಬೇಕು. ಟಿಸಿಗಳ ಸಂಖ್ಯೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು.ಮೌನೇಶ ಕಮ್ಮಾರ ರೈತ ಮುಖಂಡಶಾಶ್ವತ ಪರಿಹಾರ ನೀಡಿ
ಕೃಷ್ಣಮೃಗಗಳ ಸಂಖ್ಯೆ ಹೆಚ್ಚಾಗಿದ್ದು, ನಮ್ಮ ಬದುಕನ್ನೇ ದುಸ್ತರಗೊಳಿಸಿವೆ, ಅವುಗಳ ಹಾವಳಿಗೆ ರೈತ ಕುಲ ತತ್ತರಿಸಿದೆ. ಸೋಲಾರ್ ತಂತಿಬೇಲಿ, ಕಂದಕಗಳ ನಿರ್ಮಾಣದ ಮೂಲಕ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ರೈತರಿಗೆ ಶಾಶ್ವತ ಪರಿಹಾರ ನೀಡಬೇಕು.ಪ್ರಕಾಶ ಸಿದ್ದಪ್ಪನವರ ರೈತ ಮುಖಂಡ