ಕಡೂರು ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಭದ್ರಾ ಮೇಲ್ದಂಡೆ ಯೋಜನೆ ಮತ್ತು ಕೆರೆ ತುಂಬುವ ಯೋಜನೆಗಳ ಮುಖಾಂತರ ಕಡೂರು ತಾಲೂಕಿನಾದ್ಯಂತ ನೀರಾವರಿ ಕಾಮಗಾರಿ ಅತ್ಯಂತ ಯಶಸ್ವಿ ಹಾಗೂ ಚುರುಕಾಗಿ ನಡೆಯುತ್ತಿವೆ ಎಂದು ಶಾಸಕ ಕೆ.ಎಸ್. ಆನಂದ್ ತಿಳಿಸಿದರು.

ವೈʼ ಜಂಕ್ಷನ್ನಲ್ಲಿ ಗೇಟ್ ವಾಲ್ವ್‌ ತೆರೆಯುವ ಮೂಲಕ ತಾಲೂಕಿನ ಕುಕ್ಕಸಮುದ್ರ ಕೆರೆಗೆ ನೀರು ಬಿಡುಗಡೆ

ಕನ್ನಡಪ್ರಭ ವಾರ್ತೆ ಕಡೂರು

ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಭದ್ರಾ ಮೇಲ್ದಂಡೆ ಯೋಜನೆ ಮತ್ತು ಕೆರೆ ತುಂಬುವ ಯೋಜನೆಗಳ ಮುಖಾಂತರ ಕಡೂರು ತಾಲೂಕಿನಾದ್ಯಂತ ನೀರಾವರಿ ಕಾಮಗಾರಿ ಅತ್ಯಂತ ಯಶಸ್ವಿ ಹಾಗೂ ಚುರುಕಾಗಿ ನಡೆಯುತ್ತಿವೆ ಎಂದು ಶಾಸಕ ಕೆ.ಎಸ್. ಆನಂದ್ ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ಮುಖಾಂತರ ಚಿತ್ರದುರ್ಗಕ್ಕೆ ನೀರು ಕೊಂಡೊಯ್ಯುವ ಹೆಬ್ಬೂರು ಸಮೀಪದ ʼವೈʼ ಜಂಕ್ಷನ್ನಲ್ಲಿ ಗುರುವಾರ ಗೇಟ್ ನಲ್ಲೆ ಪೂಜೆ ಸಲ್ಲಿಸಿ ವಾಲ್ವ್‌ ತೆರೆಯುವ ಮೂಲಕ ತಾಲೂಕಿನ ಕುಕ್ಕಸಮುದ್ರ ಕೆರೆಗೆ ನೀರು ಬಿಡುಗಡೆ ಮಾಡಿ ಮಾತನಾಡಿದರು.

ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ಯಶಸ್ವಿಯಾಗಿ ನಡೆದಿದೆ. ಕ್ಯಾಬಿನೆಟ್ಟಲ್ಲಿ ಈ ಕಾಲುವೆಗೆ ಪ್ರಾಯೋಗಿಕವಾಗಿ 3 ಟಿಎಂಸಿ ನೀರು ಹರಿಸಲು ತೀರ್ಮಾನವಾದ ಹಿನ್ನೆಲೆಯಲ್ಲಿ ಕಳೆದ 11 ದಿನಗಳ ಹಿಂದೆ ಚಿತ್ರದುರ್ಗ ಕಾಲುವೆಗೆ ನೀರು ಹರಿಸಿದೆ. ನೀರು ಈಗಾಗಲೇ ದುರ್ಗಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಕಡೂರು ತಾಲೂಕಿನ ನಾಲ್ಕು ಕೆರೆಗಳಿಗೆ ನೀರು ಹರಿಯುವ ʼವೈʼ ಜಂಕ್ಷನ್ ಮೂಲಕ ಕುಕ್ಕಸಮುದ್ರಕೆರೆ, ಚೌಳಹಿರಿಯೂರಿನ,ಅಂತರಗಟ್ಟೆ ಮತ್ತು ಹುಲಿಹಳ್ಳಿಕೆರೆಗಳಿಗೆ ನೀರು ಅಡೆತಡೆಗಳಿಲ್ಲದೆ ಹರಿಯುತ್ತಿದೆ.

ನೀರು ಹರಿಯಲು ಆರಂಭಿಸಿದ ದಿನದಿಂದ ಇಲ್ಲಿವರೆಗೆ ಕುಕ್ಕಸಮುದ್ರ ಕೆರೆ ಈಗಾಗಲೇ ಅರ್ಧಕ್ಕಿಂತ ಹೆಚ್ಚು (ಸುಮಾರು ಶೇ. 40ರಷ್ಟು) ಭರ್ತಿಯಾಗಿದೆ. ಕಲ್ಕೆರೆ, ಚಿಕ್ಕಬಳ್ಳೇಕೆರೆ ಸೇರಿದಂತೆ ಅಂತರ್ಗಟ್ಟೆಕೆರೆ ಕೂಡ ಅರ್ಧಕ್ಕಿಂತ ಹೆಚ್ಚಾಗಿದ್ದು, ಹುಲಿ ಹಳ್ಳಿಕೆರೆಗೂ ನೀರು ತಲುಪುತ್ತಿದ್ದು, ಕುಕ್ಕಸಮುದ್ರಕೆರೆ ಸಂಪೂರ್ಣ ತುಂಬಿದ ನಂತರ ಚೌಳಹಿರಿಯೂರು ಊರಮುಂದಿನ ಕೆರೆಗೆ ನೀರು ಹರಿಯಲಿದೆ.

ಸಣ್ಣಪುಟ್ಟ ಮಷಿನರಿ ವ್ಯತ್ಯಾಸಗಳು ಅಥವಾ ನೀರು ಶೇರಿಂಗ್ ಮಾಡುವಾಗ ತಾಂತ್ರಿಕ ಕಾರಣಗಳಿಂದ ಕೆಲವೊಮ್ಮೆ 4-5 ಗಂಟೆಗಳ ಕಾಲ ನೀರು ನಿಲ್ಲುವುದು ಸಹಜ. ಇದನ್ನು ರಾಜಕೀಯವಾಗಿ ಬಳಸಿ "ನೀರೆ ನಿಲ್ಲಿಸಿ ಬಿಟ್ಟಿದ್ದಾರೆ " ಎಂದು ಜನರನ್ನು, ರೈತರನ್ನು ಗೊಂದಲಕ್ಕೀಡು ಮಾಡುವ ಪ್ರಯತ್ನಗಳು ನಡೆಯುತ್ತಿವೆ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಬೇಕು ಎಂದರು.

ಭದ್ರಾ ಮೇಲ್ದಂಡೆ ಯೋಜನೆ ಜೊತೆಗೆ ಕಡೂರು ಕ್ಷೇತ್ರದ ಕೆರೆ ತುಂಬುವ ಯೋಜನೆ (ಟ್ಯಾಂಕ್ ಫಿಲ್ಲಿಂಗ್ ಯೋಜನೆ) ಮುಖಾಂತರ ಕ್ಷೇತ್ರದ ನಾಲ್ಕು ಪ್ರಮುಖ ಕೆರೆಗಳಾದ ದೊಡ್ಡಘಟ್ಟಕೆರೆ, ಹೊರಿತಿಮ್ಮನಹಳ್ಳಿ ಬಾಕನಕೆರೆ ಮತ್ತು ಬಿ. ಕೋಡಿ ಹಳ್ಳಿ ಕೆರೆಗಳಿಗೂ ನೀರು ಹರಿಸಲಾಗುತ್ತಿದೆ. ಸಿಬಿಸಿ (CBC) ಹಂತದಲ್ಲಿ 28 ಕೆರೆಗಳು (ಚೌಳಹಿರಿಯೂರು ಸೇರಿದಂತೆ) ಹಾಗೂ ಟಿಬಿಸಿ (TBC) ಹಂತದಲ್ಲಿ ಕ್ಷೇತ್ರದ ಮತ್ತಷ್ಟು ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿವೆ. ತಾವು ಶಾಸಕನಾದ ಮೇಲೆ ಬಂದಿರುವ ಅನುದಾನದಿಂದ ಕೇವಲ ಮೂರು ತಿಂಗಳಲ್ಲಿ ಸುಮಾರು 1 ಕಿ.ಮೀ. ಚಾನಲ್ ಅನ್ನು 100 ಅಡಿ ಅಳದ ದೊಡ್ಡ ಬಂಡೆಗಳನ್ನು ಒಡೆದು ಸಿದ್ಧಪಡಿಸಿ, ಅಂತರಘಟ್ಟ ಕೆರೆಗೆ ನೀರು ತುಂಬಿಸುವಲ್ಲಿ ಯಶಸ್ವಿಯಾಗಿದ್ದೇವೆ. ಕುಕ್ಕಸಮುದ್ರ ಕೆರೆಗೂ ಕೂಡ ಸತತ 3 ವರ್ಷಗಳಿಂದ ನೀರು ತುಂಬಿಸುತ್ತಾ ಬರಲಾಗಿದೆ. ಈ ವರ್ಷ ನಿರಂತರವಾಗಿ ಮುಂದುವರಿಸಲಾಗಿದೆ.

ಸಿಬಿಸಿ ಮುಗಿದು ಈಗ ಮುಂದಿನ ಹೋರಾಟ ಟಿಬಿಸಿ (TBC) ಬಗ್ಗೆ ಯಾಗಿದೆ. ಲ್ಯಾಂಡ್ ಅಕ್ವಿಸಿಷನ್ ಸಮಸ್ಯೆ ಬಗೆಹರಿಸಿ, ಕುರುಬರಹಳ್ಳಿ, ವೈಮಲ್ಲಾಪುರ, ಅಣ್ಣಿಗೆರೆ ಸೇರಿದಂತೆ ಮೂರೂ ಗ್ರಾಮಗಳ ಭೂಸ್ವಾಧೀನ ಪ್ರಕ್ರಿಯೆಯನ್ನು ಕ್ಯಾಬಿನೆಟ್ಟಲ್ಲಿ ಬಗೆಹರಿಸಲಾಗಿದೆ. ಮುಂದಿನ ವರ್ಷದ ಜೂನ್ ವೇಳೆಗೆ ಒಟ್ಟು 72 ಕೆರೆಗಳಿಗೆ ನೀರು ತುಂಬಿಸುವ ಪೂರ್ವಸಿದ್ಧತೆ ಈಗಲೇ ಮಾಡಲಾಗುತ್ತಿದೆ.

-- ಬಾಕ್ಸ್‌---

ರಾಜಕೀಯ ಟೀಕೆಗಳಿಗೆ ತಿರುಗೇಟು

ಅಧಿಕಾರ ಇದ್ದಾಗ ನೀರಾವರಿ ಯೋಜನೆಗಳ ಬಗ್ಗೆ ಬಾಯಿ ಬಿಡದವರು ಕಳೆದ 3 ವರ್ಷಗಳಿಂದ ತಲೆಮರೆಸಿಕೊಂಡವರು ಈಗ ಹತ್ತು- ಇಪ್ಪತ್ತು ಜನರನ್ನು ಕಟ್ಟಿಕೊಂಡು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚಾರ ಮತ್ತು ಅವರ ಪಕ್ಷಗಳಲ್ಲಿ ಟಿಕೆಟ್ ಪಡೆಯುವ ಪ್ರಯತ್ನಕ್ಕೋಸ್ಕರ ಪ್ರತಿಭಟನೆ ಮಾಡುವುದರಿಂದ ಅಥವಾ ಜನರಿಗೆ ದಾರಿ ತಪ್ಪಿಸುವುದರಿಂದ ಯಾವುದೇ ಪ್ರಯೋಜನವಿಲ್ಲ.

ಕಡೂರು ಕ್ಷೇತ್ರದ 80 ವರ್ಷಗಳ ಇತಿಹಾಸದಲ್ಲಿ ಬೇರೆ ಯಾವ ಹಂತದ ನೀರಾವರಿ ಯೋಜನೆಗಳೂ ತರ ದಷ್ಟು ಹಣ ಮತ್ತು ಕಾಮಗಾರಿಗಳನ್ನು ನಮ್ಮ ಅವಧಿಯಲ್ಲಿ ತರಲಾಗಿದೆ. ಕ್ಷೇತ್ರದ ರೈತರು ಆತಂಕ ಪಡಬೇಕಾಗಿಲ್ಲ, ಎಲ್ಲ ಕೆರೆಗಳಿಗೂ ನೀರು ತಲುಪಿಸುವ ನಮ್ಮ ಪ್ರಯತ್ನ ಮುಂದುವರಿಯುತ್ತದೆ ಎಂದು ಶಾಸಕರು ಅಭಯ ನೀಡಿದರು. ನೀರಾವರಿ ವಿಷಯದ ಬಗ್ಗೆ ವಿರೋಧಿಗಳು ಚರ್ಚೆಗೆ ಬಂದರೆ ತಾವು ಸಿದ್ಧ ಎಂದು ಸವಾಲು ಹಾಕಿದರು.

ಕಡೂರು ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಆಸಂದಿ ಕಲ್ಲೇಶ್, ಚೌಳಹಿರಿಯೂರು ರೈತರಾದ ಪ್ರಕಾಶ್, ಅಜ್ಜಯ್ಯ ಒಡೆಯರ್, ಚಂದ್ರಪ್ಪ, ರೇವಣ್ಣ, ರಮೇಶ್ದಳವಾಯಿ, ಯೋಗೇಂದ್ರ, ಹಾಲಪ್ಪ,ಅಂಜಂನಪ್ಪ ಮತ್ತು ವಿಶ್ವೇಶ್ವರಯ್ಯ ಜಲ ನಿಗಮದ ಇಂಜಿನಿಯರ್ ಸಿದ್ದೇಶ್ ಇದ್ದರು.

17ಕೆಡಿಆರ್1

ಕಡೂರು ತಾಲೂಕಿನ ಕುಕ್ಕಸಮುದ್ರಕೆರೆಗೆ ಭದ್ರಾ ಯೋಜನೆಯಿಂದ ನೀರುಹರಿಯುವ ವೂ ಜಂಕ್ಷನ್ನ ಗೇಟ್‌ ವಾಲ್ವ್‌ ಗೆ ಶಾಸಕ ಕೆ.ಎಸ್.ಆನಂದ್‌ ಪೂಜೆ ಸಲ್ಲಿಸಿ ಪುಷ್ಪಾ ಸಮರ್ಪಿಸಿದರು. ಆಸಂದಿ ಕಲ್ಲೇಶ್,ಚೌಳಹಿರಿಯೂರಿನ ರೈತರು ಮತ್ತು ಇಲಾಖೆಯ ಎಂಜಿನಿಯರ್‌ ಸಿದ್ದೇಶ್‌ ಇದ್ದರು.

17ಕೆಡಿಆರ್2

ಕಡೂರು ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ಮತ್ತು ಚೌಳಹಿರಿಯೂರು ಭಾಗದ ರೈತರೊಂದಿಗೆ ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆಗೆ ನೀರು ಹಿರಿದು ತಾಲೂಕಿನ ಕುಕ್ಕಸಮುದ್ರ ಕರೆಯತ್ತ ಕಾಲುವೆಯಲ್ಲಿ ನೀರು ಹರಿಯುವುದನ್ನು ನೋಡುತ್ತಿರುವ ಶಾಸಕರು ಮತ್ತು ರೈತರು.