ಮಡಿಕೇರಿ: ಕೊಡಗಿನಲ್ಲಿ ಕಾಡಾನೆ-ಮಾನವ ಸಂಘರ್ಷ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಆನೆ ದಾಳಿಗೆ ಒಳಗಾದವರಿಗೆ ಸರ್ಕಾರ ರು. 20 ಲಕ್ಷ ಮಾತ್ರ ಪರಿಹಾರ ನೀಡುತ್ತಿದ್ದು, ಮಾನವ ಜೀವಕ್ಕೆ ಅಷ್ಟು ಮಾತ್ರ ಬೆಲೆಯೇ ಎಂದು ಸಮಾಜ ಸೇವಕ ಎಡಿಕೇರಿ ಪ್ರಸನ್ನ ಪ್ರಶ್ನಿಸಿದ್ದು, ಪರಿಹಾರ ಮೊತ್ತ ಹೆಚ್ಚಿಸುವುದರೊಂದಿಗೆ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಆಗ್ರಹಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿದ್ದಾಪುರದಲ್ಲಿ ಕಾಫಿ ಬೆಳೆಗಾರರೊಬ್ಬರು ಕಾಡಾನೆ ದಾಳಿಗೆ ಒಳಗಾಗಿ ಗುರುವಾರ ಮೃತಪಟ್ಟಿದ್ದಾರೆ. ಕೊಡಗಿನಲ್ಲಿ ಕಳೆದ ಎರಡೂ ವರೆ ತಿಂಗಳಲ್ಲಿ ಕಾಡಾನೆ ಹಾವಳಿಗೆ ಐದು ಮಂದಿ ಮೃತಪಟ್ಟಿದ್ದು, ಸರ್ಕಾರ ಯಾವುದೇ ಮಾರ್ಗೋಪಾಯ ಕಂಡುಕೊಳ್ಳದಿರುವ ಬಗ್ಗೆ ಟೀಕಿಸಿದರು.

ಆನೆ ದಾಳಿಗೆ ಒಳಗಾಗಿ ಮೃತಪಟ್ಟವರಿಗೆ ಸರ್ಕಾರ ರು.20 ಲಕ್ಷ ಮಾತ್ರ ಪರಿಹಾರ ನೀಡುತ್ತಿದೆ. ಮತ್ತೆ ಸರ್ಕಾರ ಅವರನ್ನು ಮರೆತುಬಿಡುತ್ತದೆ. ಆದರೆ ಆನೆ ದಾಳಿಗೆ ಒಳಗಾಗಿ ಮೃತಪಟ್ಟವರ ಕುಟುಂಬಸ್ಥರು ಜೀವನದುದ್ದಕ್ಕೂ ಸಂಕಷ್ಟಕ್ಕೆ ಒಳಗಾಗುತ್ತಾರೆ. ಆದ್ದರಿಂದ ಒಬ್ಬರಿಗೆ ಅವರ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಅವರಿಗೆ ಸರ್ಕಾರ ಉದ್ಯೋಗ ನೀಡುವ ಮೂಲಕ ಅವರ ಜೀವನ ಮಟ್ಟವನ್ನು ಸುಧಾರಿಸುವಂತೆ ಮಾಡಬೇಕೆಂದು ಆಗ್ರಹಿಸಿದ್ದಾರೆ.


ಆಹಾರಕ್ಕಾಗಿ ಕಾಡಾನೆಗಳು: ವಾಹನಗಳನ್ನು ಅಡ್ಡ ಕಟ್ಟುತ್ತಿರುವುದು ಸಾಮಾನ್ಯವಾಗಿದೆ. ಕಾಡಿನಲ್ಲಿ ಆನೆಗಳಿಗೆ ಮೇವು ಇಲ್ಲದೆ, ಕುಡಿಯುವ ನೀರಿಗಾಗಿ ಊರಿಗೆ ಬರುತ್ತಿವೆ. ಕಾಡಿನಲ್ಲಿ ಅವುಗಳಿಗೆ ಮೇವಿನ ಮರ, ಹಲಸು, ಬಿದಿರನ್ನು ಸಾಕಷ್ಟು ಪ್ರಮಾಣದಲ್ಲಿ ಬೆಳೆಸಿದರೆ ಅವುಗಳು ನಾಡಿಗೆ ಬರುವುದನ್ನು ತಪ್ಪಿಸಬಹುದಾಗಿದೆ. ಅಲ್ಲದೆ ರೈತರನ್ನು ಪ್ರೋತ್ಸಾಹಿಸುವುದರೊಂದಿಗೆ ಆನೆ ಹಾವಳಿ ನಿಯಂತ್ರಿಸಲು ರೈತರು ಬೆಳೆದ ಹಲಸು, ಬಾಳೆ ಹಣ್ಣನ್ನು ಅರಣ್ಯ ಇಲಾಖೆ ಖರೀದಿಸಿ ಕಾಡು ಪ್ರಾಣಿಗಳಿಗೆ ಅರಣ್ಯದಲ್ಲೇ ಆಹಾರ ದೊರಕುವಂತಹ ಪರಿಸ್ಥಿತಿಯನ್ನು ನಿರ್ಮಿಸಬೇಕೆಂದರು.

ಕಾಡಾನೆ ನಿಯಂತ್ರಣಕ್ಕೆ ಸರ್ಕಾರ ಸಾವಿರಾರು ಕೋಟಿ ವೆಚ್ಚ ಮಾಡಿ ಸೋಲಾರ್ ಬೇಲಿ, ರೈಲ್ವೇ ಬ್ಯಾರಿಕೇಡ್, ಕಂದಕ ತೆಗೆದು ವೆಚ್ಚ ಮಾಡಿದರೂ ಕೂಡ ಆನೆಗಳು ಬುದ್ಧಿವಂತಿಕೆ ಉಪಯೋಗಿಸಿ ನಾಡಿಗೆ ಬರುತ್ತಿದೆ. ಬೇಸಿಗೆಯಲ್ಲಿ ಕಾಡಿನಲ್ಲಿ ಕೆರೆಯಲ್ಲಿ ನೀರು ಹಾಗೂ ಮೇವಿನ ವ್ಯವಸ್ಥೆ ಮಾಡಿದರೆ ಅವುಗಳು ನಾಡಿಗೆ ಬಂದು ದಾಳಿ ಮಾಡುವುದನ್ನು ತಪ್ಪಿಸಬಹುದು. ಕಾಡಿನಲ್ಲಿ ಬೆಲೆ ಬಾಳು ಮರ ಮಾತ್ರ ಸಾಕಾಗುವುದಿಲ್ಲ. ಪ್ರಾಣಿಗಳು ಸರ್ಕಾರದ ಸೊತ್ತು ಎಂದಾದರೆ ಅವುಗಳ ಪೋಷಣೆ ಕೂಡಾ ಸರ್ಕಾರದ ಜವಾಬ್ದಾರಿ ಅಲ್ಲವೇ ಎಂದು ಪ್ರಸನ್ನ ಪ್ರಶ್ನಿಸಿದ್ದಾರೆ.