ಸಾರಾಂಶ
ಉಡುಪಿ : ರಾಜ್ಯ ಬಿಜೆಪಿಯವರು ತಮ್ಮದೇ ಕೇಂದ್ರ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತಿದ್ದಾರೋ ಎಂಬ ಸಂಶಯ ಬರುತ್ತಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಹೇಳಿದ್ದಾರೆ.
ಶುಕ್ರವಾರ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ನಗರದ ಬ್ರಹ್ಮಗಿರಿ ವೃತ್ತದಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ 400 ರು.ಗೆ ಸಿಗುತ್ತಿದ್ದ ಗ್ಯಾಸ್ ಈಗ ಬಿಜೆಪಿ ಅವಧಿಯಲ್ಲಿ 1000 ರು.ಗೇರಿದೆ. ಮಹಿಳೆಯರ ಚಿನ್ನದ ಬೆಲೆ 5000 ರು.ಗಳಿಂದ 9000 ರು.ಗೆ, ಮೊಬೈಲ್ ಬೆಲೆ 10,000 ರು.ಗಳಿಂದ 40,000 ರು.ಗಳಿಗೇರಿದೆ. ಡೀಸೆಲ್ - ಪೆಟ್ರೋಲ್ ಬೆಲೆ ಕೂಡ ಹೆಚ್ಚಾಗಿದೆ ಎಂದು ಬೊಟ್ಟು ಮಾಡಿದರು. ರಾಜ್ಯ ಬಿಜೆಪಿಯವರು ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಅದರೆ ಅವರು ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡುತಿದ್ದಾರೇನೋ ಎಂದವರು ಲೇವಡಿ ಮಾಡಿದರು.
ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಖಾಲಿ ಗ್ಯಾಸ್ ಸಿಲಿಂಡರ್ ಗಳನ್ನು ಹಿಡಿದುಕೊಂಡು ಕೇಂದ್ರ ಸರ್ಕಾರ, ಬಿಜೆಪಿ ಸಂಸದರ ವಿರುದ್ಧ ಘೋಷಣೆ ಕೂಗಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಗೀತಾ ವಾಗ್ಳೆ, ಪಕ್ಷದ ನಾಯಕರಾದ ಉದಯಕುಮಾರ್ ಶೆಟ್ಟಿ ಮುನಿಯಾಲು, ದಿನೇಶ್ ಹೆಗ್ಡೆ ಮೊಳಹಳ್ಳಿ, ಅಮೃತ್ ಶೆಣೈ, ರಮೇಶ್ ಕಾಂಚನ್, ಎಂ.ಎ.ಗಫೂರ್, ವೆರೋನಿಕಾ ಕರ್ನೇಲಿಯೋ, ಜ್ಯೋತಿ ಹೆಬ್ಬಾರ್, ಡಾ. ಸುನಿತಾ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.