ಓಸಿ ಇಲ್ಲದ ಕಟ್ಟಡಗಳಿಗೂ ಕರೆಂಟ್‌ ಭಾಗ್ಯ?

| N/A | Published : Sep 29 2025, 01:04 AM IST / Updated: Sep 29 2025, 08:52 AM IST

CM Siddaramaiah

ಸಾರಾಂಶ

ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಸಿಸಿ ಮತ್ತು ಓಸಿ ಇಲ್ಲದೆ ನಿರ್ಮಿಸಿರುವ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ನೀಡುವಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಮಹತ್ವದ ಸಭೆ ಹಮ್ಮಿಕೊಂಡಿದ್ದಾರೆ.

  ಬೆಂಗಳೂರು :  ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಸಿಸಿ ಮತ್ತು ಓಸಿ ಇಲ್ಲದೆ ನಿರ್ಮಿಸಿರುವ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ನೀಡುವಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಮಹತ್ವದ ಸಭೆ ಹಮ್ಮಿಕೊಂಡಿದ್ದಾರೆ.

ಸುಪ್ರೀಂಕೋರ್ಟ್‌ ಆದೇಶದ ಕಾರಣ ನೀಡಿ ಮಾರ್ಚ್‌ ತಿಂಗಳಿಂದ ಓಸಿ, ಸಿಸಿ ಇಲ್ಲದ ಕಟ್ಟಡಗಳಿಗೆ ಬೆಸ್ಕಾಂ ವಿದ್ಯುತ್‌ ಸಂಪರ್ಕ ನೀಡುತ್ತಿಲ್ಲ. ರಾಜ್ಯ ಸರ್ಕಾರವು ಈ ಸಮಸ್ಯೆ ಬಗೆಹರಿಸಲು 1,200 ಚದರಡಿ ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಾಣವಾಗುವ ಮನೆಗಳಿಗೆ ಓಸಿ ಕಡ್ಡಾಯವಲ್ಲ ಎಂಬ ಕಾಯಿದೆಯನ್ನೇ ಮಾಡಿದೆ. ಜತೆಗೆ ಬೆಂಗಳೂರಿನಲ್ಲಿ ಈಗಾಗಲೇ ನಿರ್ಮಿಸಿರುವ 1,200 ಚದರಡಿಗಿಂತ ಕಡಿಮೆ ವಿಸ್ತೀರ್ಣದ ಕಟ್ಟಡಗಳಿಗೆ ಕಟ್ಟಡವಾರು ಪರಿಶೀಲನೆ ನಡೆಸಿ ಓಸಿಯಿಂದ ಒಂದು ಬಾರಿಗೆ ಅನ್ವಯಿಸುವಂತೆ ದಂಡ ಸಂಗ್ರಹಿಸಿ ವಿನಾಯಿತಿ ನೀಡಲು ಸಹ ತೀರ್ಮಾನ ಮಾಡಿದೆ ಎಂದು ತಿಳಿದು ಬಂದಿದೆ.

ಜತೆಗೆ 1,200 ಚದರಡಿಗಿಂತ ಹೆಚ್ಚು ವಿಸ್ತೀರ್ಣದಲ್ಲಿ ನಿರ್ಮಾಣ ಆಗಿರುವ ಕಟ್ಟಡಗಳಿಗೂ ಒಂದು ಬಾರಿಗೆ ಅನ್ವಯ ಆಗುವಂತೆ ಓಸಿಯಿಂದ ವಿನಾಯಿತಿ ನೀಡಿ ವಿದ್ಯುತ್‌ ಸಂಪರ್ಕ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ತೀರ್ಮಾನ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಮುಖ್ಯಕಾರ್ಯದರ್ಶಿ ನೇತೃತ್ವದ ಅಧಿಕಾರಿಗಳ ತಂಡದೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಈ ವೇಳೆ ಹಬ್ಬದ ಉಡುಗೊರೆಯಾಗಿ ಓಸಿ ಇಲ್ಲದ ಕಟ್ಟಡಗಳಿಗೂ ವಿದ್ಯುತ್‌ ಸಂಪರ್ಕದ ಸಿಹಿ ಸುದ್ದಿ ನೀಡಲಿದ್ದಾರೆಯೇ ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ 1,200 ಚದರಡಿಗಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ ಪಡೆಯುವುದರಿಂದ ವಿನಾಯ್ತಿ ನೀಡಬೇಕೆ? ಎಂಬ ವಿಷಯದ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿತ್ತು. ಸಂಪರ್ಕ ನೀಡಲು ಪೂರಕ ತೀರ್ಮಾನವನ್ನೂ ಮಾಡಿರುವುದಾಗಿ ತಿಳಿದು ಬಂದಿದ್ದು, ಈ ಬಗ್ಗೆ ಅಧಿಕೃತ ತೀರ್ಮಾನ ಸೋಮವಾರ ಹೊರ ಬೀಳುವ ಸಾಧ್ಯತೆಯಿದೆ.

3.40 ಲಕ್ಷ ಅರ್ಜಿಗಳು ಬಾಕಿ!

ಸಿಸಿ ಮತ್ತು ಓಸಿ ಸಮಸ್ಯೆಯಿಂದಾಗಿ ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವ 3.40 ಲಕ್ಷ ಕಟ್ಟಡಗಳಿಗೆ ವಿದ್ಯುತ್‌ ನೀಡಿಲ್ಲ.

ಬೆಂಗಳೂರು ನಗರ ಒಂದರಲ್ಲೇ 53,000 ವಸತಿ ಕಟ್ಟಡಗಳ ಸೇರಿ 86,000 ಅರ್ಜಿಗಳು ವಿಲೇವಾರಿ ಆಗದೆ ಬಾಕಿ ಉಳಿದಿವೆ. ಹೀಗಾಗಿ ಸೋಮವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆ ಮಹತ್ವ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

Read more Articles on