ಈಶ್ವರಪ್ಪ ಹೊಸ ಸಂಘಟನೆಗೆ ಸಿಗುತ್ತಾ ಬೆಂಬಲ?

| Published : Oct 20 2024, 01:59 AM IST

ಸಾರಾಂಶ

ರಾಜ್ಯ ರಾಜಕಾರಣ ಹಾಗೂ ಪಕ್ಷ ರಾಜಕಾರಣದಿಂದ ನಿರ್ಲಕ್ಷ್ಯಕ್ಕೊಳಗಾಗಿ ನೇಪಥ್ಯಕ್ಕೆ ಸರಿದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮತ್ತೆ ರಾಜಕಾರಣದಲ್ಲಿ ಉಳಿಯುವ ಅನಿವಾರ್ಯತೆ ಎಂಬಂತೆ ಮತ್ತೊಂದು ಸಂಘಟನೆ ಹುಟ್ಟು ಹಾಕುವ ಪ್ರಯತ್ನದ ಭಾಗವಾಗಿ ಭಾನುವಾರ ಬಾಗಲಕೋಟೆಯಲ್ಲಿ ನಡೆಸಲು ಉದ್ದೇಶಿಸಿರುವ ಚಿಂತನ ಮಂಥನ ಸಭೆ ಇದೀಗ ಹಲವು ರೀತಿ ಚರ್ಚೆಗೆ ಗ್ರಾಸವಾಗಿದೆ. ಮತ್ತೊಮ್ಮೆ ಆರಂಭಿಸಲು ಹೊರಟಿರುವ ಬ್ರಿಗೇಡ್‌ಗೆ ನಿರೀಕ್ಷಿತ ಬೆಂಬಲ ಸಿಗಬಹುದೆ ಎಂಬ ಕೂತೂಹಲ ಕೂಡ ಮೂಡಿದೆ.

ಈಶ್ವರ ಶೆಟ್ಟರ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಜ್ಯ ರಾಜಕಾರಣ ಹಾಗೂ ಪಕ್ಷ ರಾಜಕಾರಣದಿಂದ ನಿರ್ಲಕ್ಷ್ಯಕ್ಕೊಳಗಾಗಿ ನೇಪಥ್ಯಕ್ಕೆ ಸರಿದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮತ್ತೆ ರಾಜಕಾರಣದಲ್ಲಿ ಉಳಿಯುವ ಅನಿವಾರ್ಯತೆ ಎಂಬಂತೆ ಮತ್ತೊಂದು ಸಂಘಟನೆ ಹುಟ್ಟು ಹಾಕುವ ಪ್ರಯತ್ನದ ಭಾಗವಾಗಿ ಭಾನುವಾರ ಬಾಗಲಕೋಟೆಯಲ್ಲಿ ನಡೆಸಲು ಉದ್ದೇಶಿಸಿರುವ ಚಿಂತನ ಮಂಥನ ಸಭೆ ಇದೀಗ ಹಲವು ರೀತಿ ಚರ್ಚೆಗೆ ಗ್ರಾಸವಾಗಿದೆ. ಮತ್ತೊಮ್ಮೆ ಆರಂಭಿಸಲು ಹೊರಟಿರುವ ಬ್ರಿಗೇಡ್‌ಗೆ ನಿರೀಕ್ಷಿತ ಬೆಂಬಲ ಸಿಗಬಹುದೆ ಎಂಬ ಕೂತೂಹಲ ಕೂಡ ಮೂಡಿದೆ.

ಸಂಘ ಪರಿವಾರದ ಮೂಲಕ ರಾಜಕಾರಣ ಆರಂಭಿಸಿದ್ದ ಕೆ.ಎಸ್.ಈಶ್ವರಪ್ಪ ಅವರು ಅಧಿಕಾರಯುತ ರಾಜಕಾರಣವನ್ನು ಭಾರತೀಯ ಜನತಾ ಪಕ್ಷದಲ್ಲಿ ಕಂಡುಕೊಂಡು ಹಲವು ಬಾರಿ ಶಾಸಕರು, ಸಚಿವರು, ಉಪಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದಾರೆ. ಆದರೂ ಪಕ್ಷದಲ್ಲಿ ನಿರ್ಣಾಯಕ ಸ್ಥಾನ ತುಂಬುವ ಜವಾಬ್ದಾರಿಯನ್ನು ಪಕ್ಷದ ಅಧ್ಯಕ್ಷರಾಗಿದ್ದಾಗಿದ್ದ ಸಂದರ್ಭದಲ್ಲಿಯೂ ಅವರಿಗೆ ಸಿಗಲೇ ಇಲ್ಲ. ಬದಲಾಗಿ ಪಕ್ಷದ ವರಿಷ್ಠರ ಮಾತು ಮತ್ತು ರಾಜ್ಯ ರಾಜಕಾರಣದಲ್ಲಿ ಅವರದೇ ಪಕ್ಷದ ಯಡಿಯೂರಪ್ಪ, ಅನಂತಕುಮಾರಂತಹ ನಾಯಕರ ಜೊತೆಯಲ್ಲಿ ಸುತ್ತಾಡಿದ್ದನ್ನು ಬಿಟ್ಟರೆ ಸ್ವಂತ ನಾಯಕತ್ವದ ಕೊರತೆ ಅವರ ಇಂದಿನ ರಾಜಕಾರಣದ ಹಿನ್ನಡೆಗೆ ಪ್ರಮುಖ ಕಾರಣವಾಗಿರಬಹುದು. ಪಕ್ಷದಲ್ಲಿ ನಿರ್ಲಕ್ಷ್ಯಕ್ಕೊಳಗಾದಾಗಲೆಲ್ಲಾ ವರಿಷ್ಠರನ್ನು ಬೆದರಿಸುವ ತಂತ್ರವಾಗಿ ರಾಯಣ್ಣ ಸಂಘಟನೆಯಂತಹ ಪರ್ಯಾಯ ಸಂಘಟನೆ ಹುಟ್ಟು ಹಾಕುವ ಈಶ್ವರಪ್ಪ ಅವರು, ಈ ಹಿಂದೆ ಸಂಘಟನೆ ಬಲಿಷ್ಠವಾದ ಸಂದರ್ಭದಲ್ಲಿಯೇ ಅದನ್ನು ತಡೆದು ನಿಲ್ಲಿಸಿದ ಬಿಜೆಪಿ ವರಿಷ್ಠರ ನಿರ್ಧಾರವನ್ನು ಪ್ರಶ್ನಿಸಲು ಮುಂದಾಗದ ಇವರಿಗೆ, ಇದೀಗ ಹೊಸ ಸಂಘಟನೆ ಹುಟ್ಟು ಹಾಕಿ ಬೆಳೆಸುವ ವಯಸ್ಸು ಹಾಗೂ ಬೆಂಬಲ ಸಿಗಬಹುದೆ ಎಂಬ ಪ್ರಶ್ನೆ ಸಹಜವಾಗಿದೆ. ನಿರ್ಲಕ್ಷಿತ ನಾಯಕ:

ನಾಲ್ಕು ದಶಕಗಳ ರಾಜಕಾರಣ ಮಾಡಿರುವ ಈಶ್ವರಪ್ಪ ಅವರಿಗೆ ಸದ್ಯದ ಸ್ಥಿತಿ ನಿಜಕ್ಕೂ ಇನ್ನಿಲ್ಲದ ಅವಮಾನ ತಂದಿದೆ. ವಿಧಾನಸಭೆ ಚುನಾವಣೆಗೆ ತಾವೇ ಸ್ಪರ್ಧಿಸಲು ಪಕ್ಷ ಅವಕಾಶ ನೀಡಲಿಲ್ಲ. ಮಗನಿಗೆ ಹಾವೇರಿ ಲೋಕಸಭೆ ಚುನಾವಣೆಗೆ ಟಿಕೆಟ್ ತರಲು ಸಾಧ್ಯವಾಗಲಿಲ್ಲ. ಯಡಿಯೂರಪ್ಪ ಕುಟುಂಬವನ್ನು ಎದುರಿಸಲು ಹೋಗಿ ಲೋಕಸಭಾ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡ ಈಶ್ವರಪ್ಪ ಅವರು, ಇದೀಗ ಬಿಜೆಪಿಯಿಂದ ಉಚ್ಚಾಟಿತರಾಗುವಷ್ಟರ ಮಟ್ಟಿಗೆ ನಿರ್ಲಕ್ಷಿತ ನಾಯಕನಾಗಿದ್ದು ಅವರ ರಾಜಕಾರಣದ ಇಷ್ಟೊಂದು ಅವಧಿಯಲ್ಲಿನ ದುರಂತವೆ ಸರಿ. ಅಸಮಾಧಾನಿತರ ಬೆಂಬಲ:

ಸದ್ಯ ಹೊಸ ಸಂಘಟನೆಗೆ ಮುಂದಾಗಿರುವ ಈಶ್ವರಪ್ಪ ಅವರಿಗೆ ಬಿಜೆಪಿಯಲ್ಲಿನ ಅಸಮಾಧಾನಿತರ ಗುಂಪು ಬೆಂಬಲ ನೀಡಿದೆ. ಇಂದಿನ ಚಿಂತನ-ಮಂಥನ ಸಭೆಯಲ್ಲಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ, ಮಾಜಿ ಶಾಸಕ ರಘುಪತಿ ಭಟ್, ಈ ಹಿಂದೆ ಸಂಗೋಳ್ಳಿ ರಾಯಣ್ಣ ಸಂಘಟನೆಯಲ್ಲಿ ಜೊತೆಯಾಗಿದ್ದ ಮಾಜಿ ಸಂಸದ ವಿರೂಪಾಕ್ಷಪ್ಪ, ಮುಕುಟಪ್ಪರಂತಹ ನಾಯಕರನ್ನು ಹೊರತುಪಡಿಸಿದರೆ ಮುಂಚೂಣಿ ನಾಯಕರ ಬೆಂಬಲ ಅಷ್ಟೊಂದು ಕಾಣುತ್ತಿಲ್ಲ. ಬಹುತೇಕರು ಬಿಜೆಪಿಯಿಂದ ನಿರ್ಲಕ್ಷ್ಯಕ್ಕೊಳಗಾದವರೆ ಇವರ ಜೊತೆಯಾಗಿದ್ದಾರೆ.

ಹೊಸ ಹೋರಾಟಕ್ಕೆ ಜಯ ಸಿಕ್ಕಿತೆ:

ಬಾಗಲಕೋಟೆಯಲ್ಲಿ ಭಾನುವಾರ ನಡೆಯುವ ಹೊಸ ಬ್ರಿಗೇಡ್‌ನ ಚಿಂತನಮಂಥನ ಸಭೆಗೆ ಆಯ್ದ 2000 ಬೆಂಬಲಿಗರನ್ನು ಸೇರಿಸಲಾಗುತ್ತಿದೆ. ಈ ಹಿಂದೆ ಸಂಘಟನೆ ಮಾಡಿ ಅನುಭವ ಇರುವ ಈಶ್ವರಪ್ಪ ಅವರಿಗೆ ಮತ್ತೆ ಹೊಸ ಸಂಘಟನೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಸಮುದಾಯ ಹಾಗೂ ಸಂಘಟನೆಗಳು ಎಷ್ಟರ ಮಟ್ಟಿಗೆ ಬೆಂಬಲ ನೀಡುತ್ತವೆ ಎಂಬುವುದು ಒಂದೆಡೆಯಾದರೆ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಭಾಗವಾಗಿ ನಡೆಯುವ ಹೋರಾಟಕ್ಕೆ ಬಲ ತುಂಬುವ ನಿಟ್ಟಿನಲ್ಲಿ ಅಸಮಾನಿತ ಗುಂಪಿಗೆ ಇವರ ಹೋರಾಟ ನೆರವಾಗಬಹುದೆ ಕಾಯ್ದು ನೋಡಬೇಕಿದೆ.