ರಸಗೊಬ್ಬರ ರಾಜ್ಯದ ರೈತರಿಗೆ ನೀಡದೇ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದೆಯೇ: ಕುಂಬ್ರಳ್ಳಿ ಸುಬ್ಬಣ್ಣ ಪ್ರಶ್ನೆ

| Published : Jul 30 2025, 12:45 AM IST

ರಸಗೊಬ್ಬರ ರಾಜ್ಯದ ರೈತರಿಗೆ ನೀಡದೇ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದೆಯೇ: ಕುಂಬ್ರಳ್ಳಿ ಸುಬ್ಬಣ್ಣ ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಕ್ಕೆ 6.30 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರದ ಅವಶ್ಯಕತೆ ಇದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ 8‌.73 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಅವಶ್ಯಕತೆಗಿಂತ ಹೆಚ್ಚು ಪೂರೈಸಿದೆ‌. ಆದರೆ, ರಾಜ್ಯ ಸರ್ಕಾರ ಉಳಿದ 2.43 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ರಾಜ್ಯದ ರೈತರಿಗೆ ನೀಡದೇ, ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದೆಯೇ...?

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯಕ್ಕೆ 6.30 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರದ ಅವಶ್ಯಕತೆ ಇದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ 8‌.73 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಅವಶ್ಯಕತೆಗಿಂತ ಹೆಚ್ಚು ಪೂರೈಸಿದೆ‌. ಆದರೆ, ರಾಜ್ಯ ಸರ್ಕಾರ ಉಳಿದ 2.43 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ರಾಜ್ಯದ ರೈತರಿಗೆ ನೀಡದೇ, ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದೆಯೇ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ ಪ್ರಶ್ನಿಸಿದರು.

ನಗರ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರವು ರೈತ ವಿರೋಧಿಯಾಗಿದೆ. ಕೇಂದ್ರ ಸಕಾರ ಅಗತ್ಯಕ್ಕಿಂತಲೂ ಹೆಚ್ಚಾಗಿಯೇ ಯೂರಿಯಾ ಪೂರೈಸಿದೆ. ಹೀಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಚಲುವರಾಯಸ್ವಾಮಿ ಅನಗತ್ಯವಾಗಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ಕೇಳುವಷ್ಟು ಯೂರಿಯಾ ಸರಬರಾಜು ಮಾಡುವುದಾಗಿ ನಡ್ಡಾ ಅವರು ಒಪ್ಪಿಕೊಂಡಿದ್ದಾರೆ. ಹೀಗಾಗಿ, ರಾಜ್ಯದ ರೈತರ ಪರವಾಗಿ ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದನಂತರ 3400 ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭೂ ಸಿರಿ ಯೋಜನೆಯಡಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರಿಗೆ ನೀಡುತ್ತಿದ್ದ 10 ಸಾವಿರ ಪ್ರೋತ್ಸಾಹ ಧನವನ್ನು ನಿಲ್ಲಿಸಿದ್ದಾರೆ. ರೈತರಿಗೆ ನೀಡಬೇಕಾದ ಹಾಲಿನ ಪ್ರೋತ್ಸಾಹ ಧನವನ್ನು ಬಾಕಿ ಉಳಿಸಿಕೊಂಡಿದೆ ಎಂದು ಅವರು ಆರೋಪಿಸಿದರು.

ಪ್ರತಿಭಟನೆ ಕೈಬಿಟ್ಟ ಬಿಜೆಪಿ:

ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಮಾತನಾಡಿ, ಬಿಜೆಪಿ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿತ್ತು. ಮೈಸೂರು ಜಿಲ್ಲೆಯಲ್ಲಿ ಯೂರಿಯಾಕ್ಕೆ ಸಂಬಂಧಪಟ್ಟಂತೆ ಸಮಸ್ಯೆ ಆಗಿಲ್ಲ. ಕೇಂದ್ರ ಸಚಿವರು ಯೂರಿಯಾ ಕೊರತೆ ನೀಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವುದರಿಂದ ಮೈಸೂರಿನಲ್ಲಿ ಬುಧವಾರ ನಡೆಯಬೇಕಿದ್ದ ಪ್ರತಿಭಟನೆಯನ್ನು ಕೈಬಿಡಲಾಗಿದೆ ಎಂದರು.

ಬಿಜೆಪಿ ಮುಖಂಡರಾದ ದೇವರಾಜು, ಮಡವಾಡಿ ಮಹೇಶ್, ಕಿರಣ್ ಜೈ ರಾಮೇಗೌಡ, ದಯಾನಂದ ಪಟೇಲ್, ಮಹೇಶ್ ಬಾಬು, ವೆಂಕಟೇಶ್, ರಮೇಶ್ ಕುಮಾರ್, ಮಹದೇವಸ್ವಾಮಿ, ಬಿ.ಎಂ. ಸಂತೋಷ್ ಕುಮಾರ್ ಇದ್ದರು. ಸಮಗ್ರ ತನಿಖೆಗೆ ಆಗ್ರಹ

ಟಿ. ನರಸೀಪುರ ಪುರಸಭೆಯಲ್ಲಿ ನಡೆದಿರುವ ತೆರಿಗೆ ಹಣ ವಂಚನೆ ಪ್ರಕರಣದಲ್ಲಿ ಇನ್ನಷ್ಟು ರಾಜಕಾರಣಿಗಳು ಮತ್ತು ಅಧಿಕಾರಿಗಳು ಶಾಮೀಲಾಗಿದ್ದಾರೆ. ಹೀಗಾಗಿ ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ ಆಗ್ರಹಿಸಿದರು.

ಪುರಸಭೆ ಕಾಂಗ್ರೆಸ್ ಸದಸ್ಯ ನಂಜುಂಡಸ್ವಾಮಿ ಕೋಟ್ಯಂತರ ರೂ. ವಂಚನೆ ಮಾಡಿರುವುದಾಗಿ ಖುದ್ದು ಮುಖ್ಯಾಧಿಕಾರಿಯೇ ಒಪ್ಪಿಕೊಂಡಿದ್ದಾರೆ. ಆರೋಪಿ ಮುಖ್ಯಮಂತ್ರಿಗೆ ಪರಿಚಿತ ವ್ಯಕ್ತಿ. ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಹಗರಣ ನಡೆದಿದೆ. ಬಿಜೆಪಿಗೆ ಈ ಹಗರಣವನ್ನು ಬೆಳಕಿಗೆ ತಂದ ನಂತರದಲ್ಲಿ ಕಾಂಗ್ರೆಸ್ ಸದಸ್ಯನನ್ನು ಬಂಧಿಸಲಾಗಿದೆ. ಅಧಿಕಾರಿಗಳು ಶಾಮೀಲಾಗದೆ ಇದೆಲ್ಲ ನಡೆಯಲು ಸಾಧ್ಯವಿಲ್ಲ ಎಂದರು.ಮೈಸೂರು ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಯಾವುದೇ ರೀತಿಯ ಕೊರತೆ ಇಲ್ಲ: ಕೃಷಿ ಜಂಟಿ ನಿರ್ದೇಶಕ ಸ್ಪಷ್ಟನೆ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಯಾವುದೇ ರೀತಿಯ ಕೊರತೆ ಇಲ್ಲ ಎಂದು ಜಿಲ್ಲೆ ಕೃಷಿ ಜಂಟಿ ನಿರ್ದೇಶಕ ಕೆ.ಎಚ್. ರವಿ ಸ್ಪಷ್ಟಪಡಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ರಸಗೊಬ್ಬರದ ದಾಸ್ತಾನು ಇದೆ. ರೈತಬಾಂಧವರು ಅನಗತ್ಯವಾಗಿ ಆತಂಕ ಪಡುವುದು ಬೇಡ ಎಂದರು.

ಜಿಲ್ಲೆಯಲ್ಲಿ ಕಳೆದ ಏಪ್ರಿಲ್ ‌ನಿಂದ ಜುಲೈ ಅಂತ್ಯದ ವರಗೆ ಅವಶ್ಯಕತೆ ಇದ್ದ ವಿವಿಧ ರಾಸಾಯನಿಕ ಗೊಬ್ಬರ 59,173 ಮೆಟ್ರಿಕ್ ಟನ್. 91,508 ಮೆಟ್ರಿಕ್ ಟನ್ ಮಾರಾಟವಾಗಿದೆ. ನಿರೀಕ್ಷೆಗಿಂತ ಹೆಚ್ಚು ಮಾರಾಟವಾಗಿದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಈ ಬಾರಿ ಬೇಗನೆ ಮಾನ್ಸೂನ್ ಮಳೆ ಆರಂಭದ ಜೊತೆಗೆ ಬಿತ್ತನೆಯಲ್ಲೂ ಹೆಚ್ಚಳ ಸೇರಿದಂತೆ ಬೇರೆ ಬೇರೆ ಕಾರಣಗಳಿವೆ ಎಂದರು.

ಆಗಸ್ಟ್ ಮಾಹೆಯಲ್ಲಿ ನಮಗೆ ಬೇಕಿರುವ ವಿವಿಧ ರಾಸಾಯನಿಕ ರಸಗೊಬ್ಬರ 16,550 ಮೆಟ್ರಿಕ್ ಟನ್ ಬೇಡಿಕೆ ಇದೆ. ನಮ್ಮಲ್ಲಿ ಈಗಾಗಲೇ 30450 ಮೆಟ್ರಿಕ್ ಟನ್ ಗಳಷ್ಟು ಬೇರೆ ಬೇರೆ ರಸಗೊಬ್ಬರಗಳ ದಾಸ್ತಾನು ಇದೆ. ಮುಂಬರುವ ಭತ್ತದ ನಾಟಿಗೆ ಯಾವುದೇ ಗೊಬ್ಬರದ ಅಭಾವ ಆಗುವ ಸಾಧ್ಯತೆಯಿಲ್ಲ. ಭತ್ತದ ನಾಟಿಗೆ ಯೂರಿಯಾವನ್ನು ಹೆಚ್ಚು ಬಳಸಬಾರದು‌ ಎಂದರು.

ಕೃತಕ ಅಭಾವ ಸೃಷ್ಟಿ ಮಾಡುವಂತಹ ಘಟನೆ ಕಂಡು ಬಂದಲ್ಲಿ ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ಅಂತಹವರ ಲೈಸೆನ್ಸ್ ರದ್ದು ಮಾಡುತ್ತೇವೆ. ಅನಧಿಕೃತವಾಗಿ ರಸಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುತ್ತದೆ. ಹೀಗಾಗಿ, ರೈತ ಬಾಂಧವರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ.

ಮುಂದಿನ ತಿಂಗಳು ಇನ್ನಷ್ಟು ಗೊಬ್ಬರದ ದಾಸ್ತಾನು ಬರಲಿದೆ. ಮೈಸೂರು ಜಿಲ್ಲೆಗೆ ಬೇಕಾಗಿರುವ ರಸಗೊಬ್ಬರದ ದಾಸ್ತಾನು ಈಗಾಗಲೇ ನಮ್ಮಲ್ಲಿದೆ ಎಂದರು.

4 ತಾಲೂಕುಗಳಲ್ಲಿ ಮಳೆ ಕೊರತೆ:

ಜಿಲ್ಲೆಯ 4 ತಾಲೂಕುಗಳಲ್ಲಿ ಮಳೆ ಕೊರತೆ ಆಗಿದೆ. ಜೂನ್ ನಲ್ಲಿ ಸಾಮಾನ್ಯ ಮಳೆಯಾಗಿದ್ದು, ಹೆಚ್ಚಿನ ಕೊರತೆಯಾಗಿಲ್ಲ.

ಆದರೆ, ಜುಲೈನಲ್ಲಿ ಮಳೆ ಕೊರತೆಯಾಗಿದೆ. ಕೆ.ಆರ್. ನಗರ, ಸಾಲಿಗ್ರಾಮ, ಪಿರಿಯಾಪಟ್ಟಣ ಮತ್ತು ಮೈಸೂರು ತಾಲೂಕುಗಳಲ್ಲಿ ಮಳೆ ಕೊರತೆ ಆಗಿದೆ ಎಂದರು.