ಸಾರಾಂಶ
ಸಿದ್ದಯ್ಯ ಹಿರೇಮಠ
ಕನ್ನಡಪ್ರಭ ವಾರ್ತೆ ಕಾಗವಾಡಪಟ್ಟಣದಿಂದ ಅಥಣಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಮುರಗುಂಡಿಯವರೆಗೆ ಸಂಪೂರ್ಣ ಹೆದಗೆಟ್ಟಿದೆ. ಕೆಲ ವರ್ಷಗಳಿಂದ ಈ ರಸ್ತೆ ಡಾಂಬರೀಕರಣಗೊಂಡಿಲ್ಲ. ರಸ್ತೆಯ ಅವ್ಯವಸ್ಥೆ ನೋಡಿದರೆ ರಸ್ತೆಯಲ್ಲಿ ಗುಂಡಿಗಳಿವೆಯೋ ಅಥವಾ ಗುಂಡಿಗಳಲ್ಲೇ ರಸ್ತೆ ಇದೆಯೋ ಎಂಬ ಸಂಶಯ ಕಾಡುತ್ತದೆ. ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡೇ ಪ್ರಯಾಣಿಸುವಂತಾಗಿದೆ. ಇದು ರಸ್ತೆಯೋ ಅಥವಾ ಗುಂಡಿಗಳ ತಾಣವೋ ಎಂಬ ಸಂಶಯ ಕಾಡುವಂತಾಗಿದೆ.ಈ ಮಾರ್ಗವಾಗಿ ವಿಜಯಪುರ, ಬೆಳಗಾವಿ ಸೇರಿ ಮಹಾರಾಷ್ಟ್ರದ ಪ್ರಮುಖ ನಗರಗಳಿಗೆ ಸಂಚರಿಸುವ ಸಾವಿರಾರು ಬಸ್‌ಗಳು ಸಂಚರಿಸುತ್ತವೆ. ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು, ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುತ್ತಿ, ಪ್ರತಿನಿಧಿಗಳು, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.ರಸ್ತೆಯಲ್ಲಿ ಸುಮಾರು ಒಂದು ಅಡಿಯಷ್ಟು ಗುಂಡಿಗಳು ನಿರ್ಮಾಣಗೊಂಡಿದ್ದು, ಇದರಲ್ಲಿ ಮಳೆಯ ನೀರು ನಿಂತು ಗೊತ್ತಾಗದೆ ವಾಹನ ಚಾಲಕರು ಯಾಮಾರುತ್ತಿರುವುದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ರಾತ್ರಿ ಸಮಯದಲ್ಲಿ ಈ ರಸ್ತೆಯಲ್ಲಿ ಪ್ರಯಾಣಿಸುವುದೆಂದರೆ ಬೆಟ್ಟಗುಡ್ಡಗಳಲ್ಲಿ ಟ್ರ್ಯಾಕಿಂಗ್ ಮಾಡಿದ ಅನುಭವವಾಗುತ್ತದೆ. ಸ್ವಲ್ಪ ಯಾಮಾರಿದರೂ ಅಪಘಾತ ಗ್ಯಾರಂಟಿ ಎನ್ನುವಂತಾಗಿದೆ. ಗುಂಡಿಗಳಲ್ಲಿ ಎದ್ದುಬಿದ್ದು ಸಾಗುವುದರಿಂದ ವಾಹನಗಳಿಗೂ ಹಾನಿಯಾಗುತ್ತಿದೆ. ಗರ್ಭಿಣಿಯರು, ವಯಸ್ಸಾದವರೂ ಈ ಮಾರ್ಗದಲ್ಲಿ ಸಂಚರಿವುದೇ ದುಸ್ತರವಾಗಿದೆ.7-8 ವರ್ಷ ಕಳೆದರೂ ಮುಗಿಯದ ಕಾಮಗಾರಿ:
ಕಳೆದ 7-8 ವರ್ಷಗಳ ಹಿಂದೆ ಕೇಂದ್ರದ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಕಾಗವಾಡಕ್ಕೆ ಬಂದು ಶೀಘ್ರ ಕಾಗವಾಡ-ಚಿಕ್ಕೋಡಿ,ಅಥಣಿ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಲು ಅಡಿಗಲ್ಲು ಹಾಕಿ ಹೋಗಿದ್ದರು. ಆದರೆ, ಇನ್ನೂವರೆಗೆ ಆ ಕಾರ್ಯ ಪೂರ್ಣಗೊಂಡಿಲ್ಲ. ಚುನಾವಣೆಗಳು ಸಮೀಪಿಸಿದಾಗ ಮಾತ್ರ ರಸ್ತೆ ಅರೆಬರೆ ಡಾಂಬರೀಕರಣ ಕಾಣುತ್ತದೆ. ನಂತರ ಎಲ್ಲವೂ ಮಾಯ. ಇದರಿಂದ ಬಹುಪಾಲು ರಸ್ತೆಗಳು ಹಾಳಾಗಿವೆ. ಯಾವ ದಿಕ್ಕಿನಿಂದ ಬಂದರೂ ರಸ್ತೆ ಸರಿಯಾಗಿಲ್ಲ. ಮೊಣಕಾಲುವರೆಗೆ ಗುಂಡಿಗಳು ಬಿದ್ದಿವೆ. ಗುಂಡಿಯಲ್ಲಿ ಮಳೆ ನೀರು ನಿಂತಿರುವುದರಿಂದ ವಾಹನ ಸವಾರರಿಗೆ ತೀವ್ರ ತಲೆನೋವಾಗಿದೆ. ಮಳೆಗಾಲದ ವೇಳೆ ತೆಗ್ಗಿನ ಆಳ ಅರಿವಿಲ್ಲದೆ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಇನ್ನು ನಾಲ್ಕು ಚಕ್ರದ ವಾಹನಗಳು ಈ ರಸ್ತೆಗೆ ಬಂದರೆ ನಡುವೆ ವಾಹನ ಕೈಕೊಡುವುದು ಗ್ಯಾರಂಟಿ ಎಂಬಂತಾಗಿದೆ. ನಿತ್ಯ ರಸ್ತೆಯ ಮೇಲೆ ಜೀವ ಭಯದಿಂದ ಸಂಚರಿಸುವುದು ಅನಿವಾರ್ಯವಾಗಿದೆ.ನುಣುಚಿಕೊಳ್ಳುತ್ತಿರುವ ಅಧಿಕಾರಿಗಳು:ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಂಡಿರುವ ಈ ರಸ್ತೆಯ ಉಸ್ತುವಾರಿ ಯಾವ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂಬ ಗೊಂದಲವಿದೆ. ಅದನ್ನೇ ಅಸ್ತ್ರವಾಗಿಸಿಕೊಂಡಿರುವ ಅಧಿಕಾರಿಗಳು ಮತ್ತೊಬ್ಬರ ಕಡೆ ಬೊಟ್ಟು ತೋರಿಸಿ ತಮ್ಮ ಜವಾಬ್ದಾರಿ ಕಳೆದುಕೊಳ್ಳುತ್ತಿದ್ದಾರೆ. ಪಿಡಬ್ಲ್ಯೂಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಪ್ರಶ್ನಿಸಿದರೆ ಯಾರೂ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ಸ್ಥಳೀಯರಾದ ಕಲಗೌಡಾ ಪಾಟೀಲ ಮತ್ತು ಸಿದಗೌಡಾ ಪಾಟೀಲ ದೂರಿದ್ದಾರೆ. ಜನಪ್ರತಿನಿಧಿಗಳು ಎಚ್ಚೆತ್ತು ರಸ್ತೆಗೆ ಅನುದಾನ ಬಿಡುಗಡೆ ಮಾಡಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ನಾಗರಿಕರು ಎಚ್ಚರಿಕೆ ನೀಡಿದ್ದಾರೆ.
ಕಾಗವಾಡದಿಂದ ಅಥಣಿ ಮಾರ್ಗವಾಗಿ ವಿಜಯಪುರದವರೆಗೆ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಂಡಿರುವ ಈ ರಸ್ತೆ ಕೇಂದ್ರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಡಿ ಬರುತ್ತದೆ. 2017ರಲ್ಲಿ ನಾನು ಬಿಜೆಪಿಯಿಂದ ಶಾಸಕನಾಗಿದ್ದ ವೇಳೆ ಕೇಂದ್ರದ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ ಗಡ್ಕರಿಯವರು ಕಾಮಗಾರಿಗೆ ಪೂಜೆ ಮಾಡಿದ್ದರು. ಮುರಗುಂಡಿಯಿಂದ ಅಥಣಿವರೆಗೆ ಮಾತ್ರ ಕಾಮಗಾರಿ ಆಗಿದೆ. ಕಾಗವಾಡದಿಂದ ಮುರಗುಂಡಿಯವರೆಗೆ ಇನ್ನೂ ಕಾಮಗಾರಿ ಆಗಿಲ್ಲ. ರಸ್ತೆ ತುಂಬ ಹದಗೆಟ್ಟಿರುವುದು ನನ್ನ ಗಮನಕ್ಕೂ ಬಂದಿದೆ. ಈ ಕುರಿತು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದೇನೆ.-ರಾಜು ಕಾಗೆ
ಶಾಸಕರು ಕಾಗವಾಡ ಮತಕ್ಷೇತ್ರ.