ದಶಕಗಳಿಂದಲೂ ಚಳ್ಳಕೆರೆಯಲ್ಲಿ ಕಂದಾಯ ಉಪವಿಭಾಗದ ಕಚೇರಿ ಪ್ರಾರಂಭಿಸುವ ಕುರಿತು ಇಲ್ಲಿನ ರೈತರು ಸೇರಿದಂತೆ ಜನಪರ ಸಂಘಟನೆಗಳು ದ್ವನಿ ಎತ್ತುತ್ತಲೇ ಬಂದಿವೆ. ಇಂತಹ ಕೂಗು ಒಂದೂವರೆ ದಶಕಗಳಾದರೂ ಈಡೇರಿಲ್ಲ.ಈ ಭಾಗದ ಜನತೆಗೆ ಇದರಿಂದ ಅನುಕೂಲವಾಗಲಿದೆ ಎಂಬ ಪ್ರಸ್ತಾವಕ್ಕೆ ಆಡಳಿತಾತ್ಮಕ ಮಂಜೂರಾತಿ ಇನ್ನೂ ಸಿಕ್ಕಿಲ್ಲದಿರುವುದು ಜನತೆಯಲ್ಲಿ ನಿರಾಸೆಯ ಕಾರ್ಮೋಡ ಕವಿದಂತಾಗಿದೆ.
ಜಡೇಕುಂಟೆ ಮಂಜುನಾಥ್
ಕನ್ನಡಪ್ರಭ ವಾರ್ತೆ ಚಳ್ಳಕೆರೆದಶಕಗಳಿಂದಲೂ ಚಳ್ಳಕೆರೆಯಲ್ಲಿ ಕಂದಾಯ ಉಪವಿಭಾಗದ ಕಚೇರಿ ಪ್ರಾರಂಭಿಸುವ ಕುರಿತು ಇಲ್ಲಿನ ರೈತರು ಸೇರಿದಂತೆ ಜನಪರ ಸಂಘಟನೆಗಳು ದ್ವನಿ ಎತ್ತುತ್ತಲೇ ಬಂದಿವೆ. ಇಂತಹ ಕೂಗು ಒಂದೂವರೆ ದಶಕಗಳಾದರೂ ಈಡೇರಿಲ್ಲ.ಈ ಭಾಗದ ಜನತೆಗೆ ಇದರಿಂದ ಅನುಕೂಲವಾಗಲಿದೆ ಎಂಬ ಪ್ರಸ್ತಾವಕ್ಕೆ ಆಡಳಿತಾತ್ಮಕ ಮಂಜೂರಾತಿ ಇನ್ನೂ ಸಿಕ್ಕಿಲ್ಲದಿರುವುದು ಜನತೆಯಲ್ಲಿ ನಿರಾಸೆಯ ಕಾರ್ಮೋಡ ಕವಿದಂತಾಗಿದೆ.
ಚಳ್ಳಕೆರೆಯಲ್ಲಿ ಕಂದಾಯ ಉಪ ವಿಭಾಗದ ಕಚೇರಿ ಆರಂಭವಾದಲ್ಲಿ ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು ಈ ಮೂರು ತಾಲೂಕಿಗೆ ಚಳ್ಳಕೆರೆ ಕೇಂದ್ರ ಸ್ಥಾನವಾಗಲಿದೆ. ಮೊಳಕಾಲ್ಮೂರು ಪಟ್ಟಣದಿಂದ ಚಿತ್ರದುರ್ಗದ ಎಸಿ ಕಚೇರಿಗೆ ಹೋಗಿಬರಲು ಒಂದು ದಿನ ಪೂರ್ತಿ ಬೇಕಾಗುತ್ತದೆ. ಅಲ್ಲದೇ ಪ್ರಯಾಣದ ಅವಧಿ, ಭತ್ಯೆ, ಸಮಯ ಎಲ್ಲವನ್ನೂ ತುಲನೆ ಮಾಡಿ ನೋಡಿದರೆ ಈ ಭಾಗದ ಜನರಿಗೆ ತಮ್ಮ ಜಮೀನಿನ ವ್ಯಾಜ್ಯಗಳು, ಭೂಪರಿವರ್ತನೆ, ಅತಿಕ್ರಮಣ ಇಂತಹ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಚಿತ್ರದುರ್ಗದ ಉಪವಿಭಾಗಾಧಿಕಾರಿಗಳ ಕಚೇರಿಗೆ ಹೋಗುವುದು ಅನಿವಾರ್ಯ.ಚಳ್ಳಕೆರೆಯನ್ನು ಕೇಂದ್ರ ಸ್ಥಾನ ಮಾಡಿಕೊಂಡು ಇಲ್ಲಿ ಕಂದಾಯ ಉಪವಿಭಾಗವನ್ನು ಪ್ರಾರಂಭಿಸುವ ಪ್ರಸ್ತಾವಕ್ಕೆ ಕಳೆದ ಒಂದೂವರೆ ದಶಕಗಳಿಂದಲೂ ಪ್ರಯತ್ನ ನಡೆಯುತ್ತಿದೆಯಾದರೂ ಫಲಿತಾಂಶ ಇನ್ನೂ ಲಭ್ಯವಾಗಿಲ್ಲ. ಇದಕ್ಕೆ ಕಾರಣಗಳು ಏನು ಎಂಬುದೇ ಯಕ್ಷಪ್ರಶ್ನೆಯಾಗಿದೆ.
2006ರಲ್ಲಿಯೇ ತಾಲೂಕು ಪುನರ್ ರಚನಾ ಸಮಿತಿಯ ಸಮಾಲೋಚಕರು ಭೇಟಿ ನೀಡಿ ಇಲ್ಲಿ ಕಂದಾಯ ಉಪವಿಭಾಗ ಪ್ರಾರಂಭಿಸಬೇಕು ಎಂದು ಶಿಫಾರಸ್ಸು ಮಾಡಿದ್ದರು. ಚಿತ್ರದುರ್ಗ ಉಪವಿಭಾಗಕ್ಕೆ ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ ಒಗ್ಗೂಡಿಸಬೇಕು. ಅದರಂತೆ ಚಳ್ಳಕೆರೆ ಕೇಂದ್ರವಾಗಿಟ್ಟುಕೊಂಡು ಉಪವಿಭಾಗ ಪ್ರಾರಂಭಿಸಿದರೆ, ಮೊಳಕಾಲ್ಮೂರು, ಹಿರಿಯೂರು ತಾಲೂಕುಗಳಿಗೆ ಅನುಕೂಲವಾಗುವುದರ ಜೊತೆಗೆ ಕಾರ್ಯಒತ್ತಡವೂ ಕಡಿಮೆ ಆಗಲಿದೆ ಎಂಬುದು ಅಧಿಕಾರಿ ವಲಯದ ಆಲೋಚನಾ ಕ್ರಮವಾಗಿತ್ತು.ಆದರೆ, ಇಂತಹ ಜನೋಪಯೋಗಿ ಕಾರ್ಯಕ್ಕೆ ಸರ್ಕಾರಗಳು, ಆರಿಸಿ ಹೋಗಿರುವ ಜನಪ್ರತಿನಿಧಿಗಳು ಮಾತ್ರ ಯಾಕೋ ಮುಂದಾಗುತ್ತಿಲ್ಲ. ಗಡಿಭಾಗದ ರೈತರು, ಜನಸಾಮಾನ್ಯರು ಎಸಿ ಕೋರ್ಟ್‌ಗಳಿಗೆ ಅಲೆದಾಡುವುದು ಇಂದಿಗೂ ನಿಂತಿಲ್ಲ. ಇದಲ್ಲದೇ ಮೂರು ತಾಲೂಕುಗಳಿಗೆ ಒಂದು ಕಂದಾಯ ಉಪವಿಭಾಗ ಇದ್ದಿದ್ದರೆ, ತಾಲೂಕಿನ ತಹಸೀಲ್ದಾರ್‌ಗಳ ಕಾರ್ಯವೈಖರಿ ಸೇರಿ ಕೆಲಸ-ಕಾರ್ಯಗಳ ತುರ್ತು ಕ್ರಮಕ್ಕೆ ಅನುಕೂಲವಾಗುತ್ತಿತ್ತು ಎಂಬ ಅಭಿಪ್ರಾಯಗಳು ಹಾಗೆಯೇ ಉಳಿದಿವೆ.
ಈ ಹಿಂದೆ ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿದ್ದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಚಳ್ಳಕೆರೆ ಕಂದಾಯ ಉಪವಿಭಾಗ ಪ್ರಾರಂಭಕ್ಕೆ ಚಾಲನೆ ನೀಡಿದ್ದರು. ಅದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಜಿ.ಕರುಣಾಕರ ರೆಡ್ಡಿ ಅವರು ಕಂದಾಯ ಸಚಿವರಾಗಿದ್ದರು. ಈ ಸಂದರ್ಭದಲ್ಲಿ ಚಳ್ಳಕೆರೆ ಕಂದಾಯ ಉಪವಿಭಾಗದ ಕಚೇರಿ ಆರಂಭ ಆಗಿಯೇ ಬಿಟ್ಟಿತು ಎಂದು ಇಲ್ಲಿನ ಜನರು ಉತ್ಸುಕರಾಗಿದ್ದರು. ಆದರೆ, ಈ ಭಾಗದ ಜನರ ಬೇಡಿಕೆ ಈಡೇರಲೇ ಇಲ್ಲ. ಇದೀಗ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ 2013ರಿಂದ ಸತತ ಮೂರನೇ ಬಾರಿಗೆ ಶಾಸನ ಸಭೆಗೆ ಆರಿಸಿ ಹೋಗಿರುವ ಟಿ.ರಘುಮೂರ್ತಿ ಅವರ ಅವಧಿಯಲ್ಲಾದರೂ ಇಂತಹ ಮಹತ್ತರ ಕಾರ್ಯ ಆಗುತ್ತದೆ ಎಂದು ಜನರು ಕಾದು ಕುಳಿತಿದ್ದಾರೆ.ಚಳ್ಳಕೆರೆ ನಗರ ದಿನದಿಂದ ದಿನಕ್ಕೆ ವ್ಯಾಪಕ ವಿಸ್ತಾರದೊಂದಿಗೆ ಬೆಳವಣಿಗೆ ಕಾಣುತ್ತಿದೆ. ಇಲ್ಲಿನ ಸರ್ಕಾರಿ ಕಚೇರಿಗಳು ಹೊಸ ಹೊಳಪನ್ನು ಪಡೆಯುತ್ತಿವೆ. ಇಲ್ಲಿನ ತಾಲೂಕು ಕಚೇರಿ ಮಿನಿ ವಿಧಾನ ಸೌಧದಂತೆ ಕಂಗೊಳಿಸುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ಇರಬೇಕಾದಂತಹ ಕಟ್ಟಡಗಳು ಇಲ್ಲಿ ತಲೆ ಎತ್ತಿವೆ. ಕಂದಾಯ ಉಪವಿಭಾಗದ ಕಚೇರಿಯನ್ನು ಆರಂಭಿಸಲು ಇಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳ ಕೊರತೆ ಕಾಡಲಾರದು. ಶಾಸಕ ಟಿ. ರಘುಮೂರ್ತಿ ಅವರ ಹ್ಯಾಟ್ರಿಕ್ ಗೆಲುವಿನ ಈ ಅವಧಿಯಲ್ಲಾದರೂ ಚಳ್ಳಕೆರೆಗೆ ಕಂದಾಯ ಉಪವಿಭಾಗ ಆರಂಭವಾಗುವುದೇ? ಎಂಬ ನಿರೀಕ್ಷೆಗಳು ಇನ್ನೂ ಜೀವಂತವಾಗಿವೆ.