ಸಹಜವಾಗಿ ಸಭೆ, ಸಮಾರಂಭ, ಸಮಾವೇಶಗಳಲ್ಲಿ ನಾಡು, ನುಡಿ, ಭಾಷೆ, ಅಭಿವೃದ್ಧಿ ಹಾಗೂ ರೈತರ ವಿಚಾರದಲ್ಲಿ ಯಾವುದೇ ರೀತಿಯ ರಾಜಕೀಯ ಮಾಡು ವುದಿಲ್ಲ ಎಂದು ಭಾಷಣ ಮಾಡುವ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ಆಚರಣೆ ವಿಚಾರಲ್ಲಿ ಪಾಲನೆಗೆ ಹಿಂದೇಟು ಹಾಕುತ್ತಾರೆ ಎನ್ನುವುದಕ್ಕೆ ರಾಯಚೂರು ಜಿಲ್ಲೆಯ ಬರ ಘೋಷಣೆಯಲ್ಲಿ ಮಾಡಿರುವ ತಾರತಮ್ಯವೇ ಸಾಕ್ಷಿಯಾಗಿ ನಿಲ್ಲುತ್ತದೆ ಎಂದು ಬಿಜೆಪಿಗರು ಆರೋಪಿಸುತ್ತಿದ್ದಾರೆ.
ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಸಹಜವಾಗಿ ಸಭೆ, ಸಮಾರಂಭ, ಸಮಾವೇಶಗಳಲ್ಲಿ ನಾಡು, ನುಡಿ, ಭಾಷೆ, ಅಭಿವೃದ್ಧಿ ಹಾಗೂ ರೈತರ ವಿಚಾರದಲ್ಲಿ ಯಾವುದೇ ರೀತಿಯ ರಾಜಕೀಯ ಮಾಡು ವುದಿಲ್ಲ ಎಂದು ಭಾಷಣ ಮಾಡುವ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ಆಚರಣೆ ವಿಚಾರಲ್ಲಿ ಪಾಲನೆಗೆ ಹಿಂದೇಟು ಹಾಕುತ್ತಾರೆ ಎನ್ನುವುದಕ್ಕೆ ರಾಯಚೂರು ಜಿಲ್ಲೆಯ ಬರ ಘೋಷಣೆಯಲ್ಲಿ ಮಾಡಿರುವ ತಾರತಮ್ಯವೇ ಸಾಕ್ಷಿಯಾಗಿ ನಿಲ್ಲುತ್ತದೆ ಎಂದು ಬಿಜೆಪಿಗರು ಆರೋಪಿಸುತ್ತಿದ್ದಾರೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಬರದ ಸನ್ನಿವೇಶಕ್ಕೆ ಸೃಷ್ಠಿಯಾಗಿದ್ದರಿಂದ ರಾಜ್ಯ ಸರ್ಕಾರವು ಮೂರು ಹಂತದಲ್ಲಿ ರಾಜ್ಯದ ನೂರಾರು ತಾಲೂಕುಗಳಲ್ಲಿ ಮಧ್ಯಮ,ತೀವ್ರ ಬರವೆಂದು ಘೋಷಣೆ ಮಾಡಿದೆ. ಅದೇ ರೀತಿ ರಾಯಚೂರು ಜಿಲ್ಲೆಯ 8 ತಾಲೂಕುಗಳನ್ನು ಸಹ ಬರ ಪೀಡಿತ ಪ್ರದೇಶವೆಂದು ಘೋಷಿಸಿದ್ದು, ಇದೀಗ ಬಿಜೆಪಿ ಶಾಸಕರು ತಮ್ಮ ಕ್ಷೇತ್ರಗಳನ್ನು ತೀವ್ರ ಬರ ಪ್ರದೇಶವೆಂದು ಘೋಷಣೆ ಮಾಡುವಂತೆ ರಾಜ್ಯ ಸರ್ಕಾರದ ಮುಂದೆ ಧ್ವನಿಯನ್ನು ಎತ್ತುತ್ತಿದ್ದಾರೆ.ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿರುವ ರಾಯಚೂರು ಮತ್ತು ಲಿಂಗಸುಗೂರು ತಾಲೂಕುಗಳನ್ನು ಮಧ್ಯಮ ಬರಪೀಡಿತ ಪ್ರದೇಶಗಳೆಂದು ಸರ್ಕಾರವು ಘೋಷಿಸಿದ್ದು, ಉಳಿದಂತೆ ಕಾಂಗ್ರೆಸ್ ಶಾಸಕರಿರುವ ಸಿಂಧನೂರು,ಮಸ್ಕಿ,ಮಾನ್ವಿ,ಸಿರವಾರ ಹಾಗೂ ಜೆಡಿಎಸ್ ಶಾಸಕರಿರುವ ದೇವದುರ್ಗ, ಅರಕೇರಾ ತಾಲೂಕುಗಳನ್ನು ತೀವ್ರ ಬರ ಪ್ರದೇಶವೆಂದು ಘೋಷಣೆ ಮಾಡಿರುವುದು ಇದೀಗ ರಾಜ್ಯ ಸರ್ಕಾರದ ತಾರತಮ್ಯದ ವರ್ತನೆಯು ಮೇಲ್ನೋಟಕ್ಕೆ ನಿಜವಾಗುವಂತೆ ಮಾಡಿದೆ.
ಸಹಜವಾಗಿ ಬರ ಪ್ರದೇಶ ಘೋಷಣೆಗೂ ಮುನ್ನ ಮಳೆಯ ಕೊರತೆ, ಒಣ ಹವೆಯ ಅವಧಿ, ಮಣ್ಣಿನ ತೇವಾಂಶ, ನೀರಾವರಿ ಹಾಗೂ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ, ಬೆಳೆಹಾನಿ, ಜಲಸಂಪನ್ಮೂಲಗಳ ಅವಲಂಭನೆ,ಜಂಟಿ ಸಮೀಕ್ಷೆ, ಸರ್ಕಾರಕ್ಕೆ ವರದಿ ಸಲ್ಲಿಕೆ ಸೇರಿ ಇತರೆ ಅಂಶಗಳನ್ನು ಪರಿಗಣನೆಗೆ ಪಡೆದುಕೊಂಡು ಬರ ಘೋಷಿಸುತ್ತಾರೆ. ಜಿಲ್ಲೆಯ ರಾಯಚೂರು ಮತ್ತು ಲಿಂಗಸುಗೂರು ತಾಲೂಕಿನಲ್ಲಿ ಕಡಿಮೆ ಪ್ರಮಾಣದ ಮಳೆ,ಮಣ್ಣಿನ ತೇವಾಂಶ, ಬಿತ್ತನೆ ವಿಚಾರದಲ್ಲಿ ನಿಗದಿತ ನಿಯಮಗಳ ಅಡಿಯಲ್ಲಿಯೇ ಇದ್ದರು ಸಹ ಮಧ್ಯಮ ಬರ ಪ್ರದೇಶವೆಂದು ಘೋಷಿಸಿರುವುದು ಖಂಡನೀಯ ವಿಷಯವಾಗಿದೆ ಎಂದು ಬಿಜೆಪಿ ನಗರ ಶಾಸಕ ಡಾ.ಶಿವ ರಾಜ ಪಾಟೀಲ್ ಹಾಗೂ ಲಿಂಗಸುಗೂರು ಶಾಸಕ ಮಾನಪ್ಪ ಡಿ.ವಜ್ಜಲ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬರ ಪರಿಸ್ಥಿತಿ,ಕುಡಿಯುವ ನೀರು, ಕೃಷಿ ಚಟುವಟಿಕೆಗಳು,ನೀರಾವರಿ ಸಮಸ್ಯೆಗಳ ಹಾಗೂ ಮೇವು ಲಭ್ಯತೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರಂ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ನಮ್ಮ ತಾಲೂಕುಗಳನ್ನು ಮಧ್ಯಮ ಬರದ ಪಟ್ಟಿಯಿಂದ ತೀವ್ರ ಬರದ ಪಟ್ಟಿಗೆ ಸೇರಿಸಬೇಕು ಎಂದು ಬಿಜೆಪಿಯ ಉಭಯ ಶಾಸಕರು ಆಗ್ರಹಿಸಿದರು ಅಷ್ಟೇ ಅಲ್ಲದೇ ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗದ ರೈತರಿಗೆ ನೀರು ನೀಡುವಲ್ಲಿಯೂ ಸಹ ತಾರತಮ್ಯ ಮಾಡುತ್ತಿರುವುದು ಸರಿಯಲ್ಲವೆಂದು ಬಹಿರಂಗವಾಗಿಯೇ ಅಮಸಧಾನ ತೋಡಿಕೊಂಡಿದ್ದರು,
ಡಿಸಿಎಂಗೆ ಮನವಿ ಸಲ್ಲಿಕೆ: ಲಿಂಗಸುಗೂರು ತಾಲೂಕನ್ನು ತೀವ್ರ ಬರ ಪ್ರದೇಶವೆಂದು ಘೊಷಣೆ ಮಾಡುವಂತೆ ಬಿಜೆಪಿ ಶಾಸಕ ಮಾನಪ್ಪ ಡಿ.ವಜ್ಜಲ್ ಅವರು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದ್ದಾರೆ.ಜಿಲ್ಲೆ ಸಿಂಧನೂರು ಹಾಗೂ ಲಿಂಗಸುಗೂರು ತಾಲೂಕುಗಳಲ್ಲಿ ಡಿಸಿಎಂ ಬರ ಪರಿಶೀಲನೆ ನಡೆಸಲು ಆಗಮಿಸಿದ್ದ ಸಮಯದಲ್ಲಿ ಅವರನ್ನು ಭೇಟಿಯಾದ ಶಾಸಕರು ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ, ಗ್ರಾಮಗಳಲ್ಲಿ ಜನ ಕೂಲಿ ಹರಸಿ ಗುಳೆ ಹೋಗುತ್ತಿದ್ದಾರೆ, ಬೆಳೆಗಳು ಸಂಪೂರ್ಣ ಹಾನಿ ಗೊಂಡಿವೆ, ಕುಡಿಯುವ ನೀರಿನ ಸಮಸ್ಯೆಗಳು ಹೆಚ್ಚುತ್ತಿದ್ದು, ಲಿಂಗಸುಗೂರು ತಾಲೂಕನ್ನು ಈಗಾಗಲೇ ಮಧ್ಯಮ ಬರಗಾಲ ಎಂದು ಘೋಷಿಸಲಾಗಿದ್ದು, ಮಳೆ ಕೊರತೆ ಮುಂದುವರಿದಿರುವುದರಿಂದ ರೈತರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಹೀಗಾಗಿ ಲಿಂಗಸಗೂರು ತಾಲೂಕನ್ನು ಕೂಡಲೇ ತೀವ್ರ ಬರಗಾಲ ಪೀಡಿತ ಪ್ರವೇಶವೆಂದು ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದು, ಅವರ ಮನವಿ ಆಲಿಸಿದ ಡಿಸಿಎಂ ಬರ ಪರಿಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.