ಸಾರಾಂಶ
ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಖಾಸಗಿ ಶಾಲೆಗಳು ಶುಲ್ಕದ ವಿವರವನ್ನು ಕಡ್ಡಾಯವಾಗಿ ನೋಟಿಸ್ ಬೋರ್ಡ್‌ನಲ್ಲಿ ನಮೂದಿಸಬೇಕೆಂಬ ಸರ್ಕಾರದ ಸೂಚನೆಯ ಹೊಸದುರ್ಗದ ಖಾಸಗಿ ಶಾಲೆಗಳು ಅಕ್ಕಿ, ಬೇಳೆ, ಬೆಲ್ಲದ ರೇಟು ಅಂದುಕೊಂಡಂತೆ ಕಾಣಿಸುತ್ತದೆ. ನೋಟಿಸು ಬೋರ್ಡ್‌ನಲ್ಲಿ ಕೇವಲ ಒಟ್ಟಾರೆ ಮೊತ್ತ ಮಾತ್ರ ಪ್ರಕಟಿಸಿದ್ದು ವಿವರಗಳ ಉಸಾಬರಿಗೆ ಹೋಗಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ಸಯ್ಯದ್ ಮೋಸೀನ್ ಇದೇ ಪಟ್ಟಿಗೆ ಮುದ್ರೆವೊತ್ತಿ ಬಂದಿದ್ದಾರೆ.
ಖಾಸಗಿ ಶಾಲೆಗಳಲ್ಲಿ ನೋಟಿಸ್ ಬೋರ್ಡ್ ಗಳಲ್ಲಿ ಶಾಲಾ ದಾಖಲಾತಿ ವಿವರ ಹಾಗೂ ಶುಲ್ಕದ ಬಗ್ಗೆ ಪ್ರದರ್ಶನ ಮಾಡದೇ ಇರುವುದರ ಬಗ್ಗೆ ಕನ್ನಡಪ್ರಭ ಸರಣಿ ವರದಿ ಆರಂಭಿಸಿದ ಬೆನ್ನ ಹಿಂದೆಯೇ ಸೋಮವಾರ ತಾಲೂಕಿನ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬಿಇಒ ಸಯ್ಯದ್ ಮೋಸೀನ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿತು. ನಂತರ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿರುವ ಎಲ್ಲಾ 35 ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ವರದಿ ನೀಡುವಂತೆ 6 ಇಸಿಒಗಳಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಅವರು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಭೇಟಿ ನೀಡಿ ನೋಟಿಸ್ ಬೋರ್ಡ್ ಗಮನಿಸಿದ್ದಾರೆ. ಶಾಲಾ ದಾಖಲಾತಿ ಮಾಹಿತಿಯನ್ನು ಹಾಕಿರುವ ಪೋಟೋ ಸಮೇತ ವರದಿ ಮಾಡಿದ್ದಾರೆ ಎಂಬ ಮಾಹಿತಿಯ ಕನ್ನಡಪ್ರಭಕ್ಕೆ ನೀಡಿದರು. ಸಾಲದೆಂಬಂತೆ ಗ್ಯಾರಂಟಿಗಾಗಿ ಇಂಡಿಯನ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನೋಟೀಸ್ ಬೋರ್ಡ್ ಮುಂದೆ ಸ್ವತಃ ನಿಂತುಕೊಂಡ ಪೋಟೋ ಕೂಡ ಕಳಿಸಿಕೊಟ್ಟರು.ಬಿಇಒ ಕಳಿಸಿದ ಪೋಟೋ ಸರ್ಕಾರ ಕಳಿಸಿದ ಸುತ್ತೋಲೆಗೆ ಅಪಚಾರ ಮಾಡಿದಂತಿದೆ. ಶಾಲಾ ದಾಖಲಾತಿ ವಿವರ ಹಾಗೂ ಶುಲ್ಕದ ಪ್ರಮಾಣ ಹೇಗೆ ನಮೂದಿಸಬೇಕೆಂಬ ಬಗ್ಗೆ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ನಿರ್ದಿಷ್ಟ ನಮೂನೆ ಪೂರೈಕೆ ಮಾಡಲಾಗಿದೆ. ಪ್ರತಿ ತರಗತಿಗೂ ಪ್ರತ್ಯೇಕವಾಗಿ ಅದೇ ಮಾದರಿಯಲ್ಲಿ ವಿವರ ಪ್ರಕಟಿಸಬೇಕು. ಇಂಡಿಯನ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನೋಟೀಸ್ ಬೋರ್ಡ್ ನಲ್ಲಿ ಎಲ್‌ಕೆಜಿಗೆ 25 ಸಾವಿರ, ಯುಕೆಜಿಗೆ 30 ಸಾವಿರ, ಮೊದಲನೇ ತರಗತಿಗೆ 40 ಸಾವಿರವೆಂದು 10ನೇ ತರಗತಿ ತನಕ ಶುಲ್ಕದ ಪ್ರಮಾಣ ನಮೂದಿಸಿ ಹಾಕಲಾಗಿದೆ. ನಿರ್ಧಿಷ್ಟ ನಮೂನೆಯಲ್ಲಿ ಇಲ್ಲ. ದಿನಸಿ ಅಂಗಡಿಯಲ್ಲಿನ ದರ ಪಟ್ಟಿಯಂತಿದೆ.
ಶಿಕ್ಷಣ ಇಲಾಖೆ ಪೂರೈಕೆ ಮಾಡಿರುವ ಪ್ರಕಟಣಾ ನಮೂನೆಯಲ್ಲಿ ಒಟ್ಟು 9 ಕಾಲಂಗಳಿವೆ. ಕ್ರಮ ಸಂಖ್ಯೆ, ತರಗತಿ, ಲಭ್ಯವಿರುವ ಸೀಟುಗಳು, ಪಠ್ಯಕ್ರಮ, ಬೋಧನಾ ಮಾಧ್ಯಮ, ಬೋಧನಾ ಶುಲ್ಕ, ವಿಶೇಷ ಅಭಿವೃದ್ದಿ ಶುಲ್ಕ, ಅವಧಿ ಶುಲ್ಕ ಎಲ್ಲವನ್ನು ನಮೂದಿಸಬೇಕು. ಹೊಸದುರ್ಗದ ಖಾಸಗಿ ಶಾಲೆಗಳು ಇಂತಹ ಮಾಹಿತಿ ಪ್ರಚುರ ಪಡಿಸುವ ಉಸಾಬರಿಗೆ ಹೋಗದೆ ಒಟ್ಟು ಶುಲ್ಕವನ್ನು ನಮೂದಿಸಿ ಕೈ ತೊಳೆದುಕೊಂಡಿದ್ದಾರೆ. ತಾವೇ ಪೂರೈಕೆ ಮಾಡಿದ ಪ್ರಕಟಣಾ ನಮೂನೆಗೆ ತದ್ವಿರುದ್ಧವಾಗಿರುವ ಕ್ರಮಕ್ಕೆ ಬಿಇಒ ಒಪ್ಪಿಗೆ ಮುದ್ರೆ ಒತ್ತಿರುವುದು ಅಚ್ಚರಿ ತಂದಿದೆ.