ಲಿಂಗರಾಜು ಕೋರಾ
ಕನ್ನಡಪ್ರಭ ವಾರ್ತೆ, ಬೆಂಗಳೂರುರಾಜ್ಯದಲ್ಲಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ದಾಖಲೆ ಫಲಿತಾಂಶ ಹಾಗೂ ಸರಾಸರಿ ಫಲಿತಾಂಶದಲ್ಲಿ ಆಗಿರುವ ಭಾರೀ ಪ್ರಮಾಣದ ಹೆಚ್ಚಳ ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಕುಸಿಯುತ್ತಿರುವ ಸರ್ಕಾರಿ ಪದವಿಪೂರ್ವ ಕಾಲೇಜುಗಳ ದಾಖಲಾತಿಯನ್ನೂ ಹೆಚ್ಚಿಸುವ ನಿರೀಕ್ಷೆ ಮೂಡಿಸಿದೆ.
ಕಳೆದ ವರ್ಷಕ್ಕಿಂತ ಈ ವರ್ಷ 2.35 ಲಕ್ಷಕ್ಕೂ ಹೆಚ್ಚು ಮಕ್ಕಳು ಪಿಯು ಪ್ರವೇಶಕ್ಕೆ ಅರ್ಹತೆ ಪಡೆದಿದ್ದು, ಇದು ಖಾಸಗಿ ಕಾಲೇಜುಗಳ ಜೊತೆಗೆ ಸರ್ಕಾರಿ ಪಿಯು ಕಾಲೇಜುಗಳಲ್ಲೂ ಪ್ರವೇಶಕ್ಕೆ ಬೇಡಿಕೆ ಹೆಚ್ಚುವಂತೆ ಮಾಡಿದೆ. ಅದರಲ್ಲೂ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಓದಿದ ಬಡ ಕುಟುಂಬದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಿದ್ದಾರೆ. ಅವರಲ್ಲಿ ಬಹುತೇಕರು ಪಿಯು ಶಿಕ್ಷಣಕ್ಕೂ ಸರ್ಕಾರಿ ಪಿಯು ಕಾಲೇಜುಗಳನ್ನೇ ಆಯ್ಕೆ ಮಾಡಿಕೊಳ್ಳಬಹುದಾದ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಪಿಯು ಕಾಲೇಜು ಆವರಣಗಳು ವಿದ್ಯಾರ್ಥಿಗಳಿಂದ ಕಳೆಗಟ್ಟಿರುವುದು ರಾಜ್ಯದೆಲ್ಲೆಡೆ ಕಂಡುಬರುತ್ತಿದೆ.ಕಳೆದ ಬಾರಿಗಿಂತ ಈ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.25ರಷ್ಟು ಏರಿಕೆಯಾಗಿದ್ದರೆ, ಕಳೆದ ಹತ್ತು ವರ್ಷಗಳ ಸರಾಸರಿಗೆ ಹೋಲಿಸಿದರೆ ಶೇ.20ರಷ್ಟು ಹೆಚ್ಚಳವಾಗಿದೆ. 2024-25ನೇ ಸಾಲಿನಲ್ಲಿ ಒಟ್ಟಾರೆ 8.42 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ -1 ಬರೆದಿದ್ದರಾದರೂ ಪಾಸಾದವರು ಮಾತ್ರ 5.24 ಲಕ್ಷ(ಶೇ.62.34) ಮಕ್ಕಳು. ಅಂದರೆ ಬರೋಬ್ಬರಿ 3.17 ಲಕ್ಷ ಮಕ್ಕಳು ಫೇಲಾಗಿದ್ದರು. ಆದರೆ, ಈ ಬಾರಿ(2025-26) ಪರೀಕ್ಷೆ ಬರೆದ 8.56 ಲಕ್ಷಕ್ಕೂ ಹೆಚ್ಚು ಮಕ್ಕಳಲ್ಲಿ 7.60 ಲಕ್ಷಕ್ಕೂ (ಶೇ.88.73) ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಪದವಿ ಪೂರ್ವ ಶಿಕ್ಷಣ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ಕೇವಲ 95 ಸಾವಿರ ಮಕ್ಕಳು ಮಾತ್ರ ಅನುತ್ತೀರ್ಣರಾಗಿದ್ದಾರೆ. ಅದರಲ್ಲೂ ಒಂದಷ್ಟು ಮಕ್ಕಳು ಶೀಘ್ರ ಆರಂಭವಾಗಲಿರುವ ಪರೀಕ್ಷೆ 2ರಲ್ಲಿ ಉತ್ತೀರ್ಣರಾಗುತ್ತಾರೆ. ಇದರಿಂದ ರಾಜ್ಯದ ಪಿಯು ಕಾಲೇಜುಗಳಿಗೆ ಕಳೆದ ಬಾರಿಗಿಂತ ಈ ಬಾರಿ 2.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿಯಾಗುವ ಸಾಧ್ಯತೆ ಇದೆ.
ಬಾಕ್ಸ್
ಸರ್ಕಾರಿ ಕಾಲೇಜುಗಳಲ್ಲಿನ ದಾಖಲಾತಿ ನಿರಂತರ ಕುಸಿತ
ಸರ್ಕಾರಿ ಪಿಯು ಕಾಲೇಜುಗಳಿಗೆ ಕೆಲ ವರ್ಷಗಳಿಂದ ವಿದ್ಯಾರ್ಥಿಗಳ ದಾಖಲಾತಿ ಗಣನೀಯವಾಗಿ ಇಳಿಕೆಯಾಗುತ್ತಿದೆ. ಶಿಕ್ಷಣ ಇಲಾಖೆಯ ಅಂಕಿ- ಅಂಶಗಳ ಪ್ರಕಾರ, ಸರ್ಕಾರಿ ಪಿಯು ಕಾಲೇಜುಗಳಲ್ಲಿ 2023ರಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಮಕ್ಕಳ ಸಂಖ್ಯೆ 2.29 ಲಕ್ಷ ಇದ್ದರೆ, 2024ರಲ್ಲಿ ಅದು ಏಕಾಏಕಿ 1.55 ಲಕ್ಷಕ್ಕೆ ಇಳಿದಿದೆ, 2025ರಲ್ಲಿ ಮತ್ತೆ 1.44 ಲಕ್ಷಕ್ಕೆ, 2026ರಲ್ಲಿ 1.32 ಲಕ್ಷಕ್ಕೆ ಇಳಿಕೆಯಾಗಿದೆ. ಇನ್ನು, ಕಳೆದ ವರ್ಷ ಪ್ರಥಮ ಪಿಯುಸಿಗೆ ದಾಖಲಾದ ಮಕ್ಕಳ ಸಂಖ್ಯೆ ಇನ್ನಷ್ಟು ಕುಸಿದಿದ್ದು 1 ಲಕ್ಷ ಕೂಡ ದಾಟಿಲ್ಲ ಎನ್ನಲಾಗುತ್ತಿದೆ. ಒಂದೇ ವರ್ಷದಲ್ಲಿ ಸುಮಾರು 65 ಸಾವಿರದಷ್ಟು ಮಕ್ಕಳ ದಾಖಲಾತಿ ಕುಸಿದಿದೆ ಎಂದು ತಿಳಿದು ಬಂದಿದೆ.ಬಾಕ್ಸ್
5000 ಉಪನ್ಯಾಸಕ ಹುದ್ದೆ ಖಾಲಿ, 550ಕಾಲೇಜಿಗೆ ಕಾಯಂ ಪ್ರಾಂಶುಪಾಲರಿಲ್ಲ
ರಾಜ್ಯದಲ್ಲಿ ಒಟ್ಟು 6000 ಪಿಯು ಕಾಲೇಜುಗಳಿದ್ದರೆ, ಈ ಪೈಕಿ 1320ಕ್ಕೂ ಹೆಚ್ಚು ಸರ್ಕಾರಿ ಪಿಯು ಕಾಲೇಜುಗಳಿವೆ. ಇವುಗಳಲ್ಲಿ 12,922 ಮಂಜೂರಾದ ಉಪನ್ಯಾಸಕ ಹುದ್ದೆಗಳಿದ್ದರೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಾಯಂ ಉಪನ್ಯಾಸಕರ ಸಂಖ್ಯೆ ಸುಮಾರು 7440. ಇನ್ನೂ 5000 ಕಾಯಂ ಉಪನ್ಯಾಸಕರ ಕೊರತೆ ಇದೆ. ಆ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ಪ್ರತೀ ವರ್ಷ ತರಗತಿ ಚಟುವಟಿಕೆ ನಡೆಸಲಾಗುತ್ತಿದೆ. ಇನ್ನು, 550ಕ್ಕೂ ಹೆಚ್ಚು ಕಾಲೇಜುಗಳಿಗೆ ಕಾಯಂ ಪ್ರಾಂಶುಪಾಲರೇ ಇಲ್ಲ. ಇನ್ನು ಮೂಲಸೌಕರ್ಯ ಕೊರತೆ ಸಾಕಷ್ಟಿದೆ. ಈ ಎಲ್ಲ ನ್ಯೂನತೆ ಸರಿಪಡಿಸಿದರೆ ಮಕ್ಕಳು ತಾನಾಗೇ ಬರುತ್ತಾರೆ ಎನ್ನುವುದು ಬೋಧಕರ ಹೇಳಿಕೆ.------
ಕೋಟ್ಉಪನ್ಯಾಸಕರ ಹುದ್ದೆ ಭರ್ತಿ ಮಾಡಿ
ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶದ ಹಿನ್ನೆಲೆಯಲ್ಲಿ ಸರ್ಕಾರಿ ಪಿಯು ಕಾಲೇಜುಗಳಿಗೆ ದಾಖಲಾತಿ ಹೆಚ್ಚುವ ನಿರೀಕ್ಷೆ ಸಹಜ. ಆದರೆ, ಬಹುತೇಕ ಉಪನ್ಯಾಸಕರನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸಿರುವುದು ದಾಖಲಾತಿ ಪ್ರಕ್ರಿಯೆಗೆ ಸಮಸ್ಯೆಯಾಗುತ್ತಿದೆ. ನಮ್ಮ ಕಾಲೇಜುಗಳಲ್ಲಿ ಇರುವ ಮೂಲಸೌಲಭ್ಯ ಕೊರತೆ ನಿವಾರಿಸಲು, ಖಾಲಿ ಇರುವ ಕಾಯಂ ಉಪನ್ಯಾಸಕ ಹುದ್ದೆಗಳ ಭರ್ತಿಗೆ ಸರ್ಕಾರ ಮೊದಲು ಕ್ರಮ ವಹಿಸಬೇಕು. ಇಲ್ಲದಿದ್ದರೆ ಮಕ್ಕಳಿಗೆ ನ್ಯಾಯ ಒದಗಿಸಲು ಆಗುವುದಿಲ್ಲ.- ನಿಂಗೇಗೌಡ, ಪಿಯು ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ