ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕೈಗೊಂಡ ನಿರ್ಧಾರಕ್ಕೂ ಅಧಿಕಾರಿಗಳ ಮಟ್ಟದಲ್ಲಿ ಕಿಮ್ಮತ್ತಿಲ್ಲವೇ ಎಂಬ ಪ್ರಶ್ನೆ ಇದೀಗ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ!

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕೈಗೊಂಡ ನಿರ್ಧಾರಕ್ಕೂ ಅಧಿಕಾರಿಗಳ ಮಟ್ಟದಲ್ಲಿ ಕಿಮ್ಮತ್ತಿಲ್ಲವೇ ಎಂಬ ಪ್ರಶ್ನೆ ಇದೀಗ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ!

ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಸಭೆಯಲ್ಲಿ ಅರಣ್ಯ ಇಲಾಖೆಯ ಕಾಮಗಾರಿಗಳ ಜಂಟಿ ಸ್ಥಳ ಪರಿಶೀಲನೆಗೆ ಸೂಚನೆ ನೀಡಿದ್ದರೂ, ಅದನ್ನೇ ಅರಣ್ಯ ಇಲಾಖೆಯ ಡಿಸಿಎಫ್ ಪ್ರಶ್ನಿಸಿ ಆದೇಶ ಹಿಂಪಡೆಯುವಂತೆ ಜಿಲ್ಲಾ ಪಂಚಾಯಿತಿ ಸಿಇಒಗೆ ಪತ್ರ ಬರೆದಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

2025-26ನೇ ಸಾಲಿನಲ್ಲಿ ಅರಣ್ಯ ಇಲಾಖೆಯಿಂದ ರಸ್ತೆ ಬದಿ ಹಾಗೂ ಬ್ಲಾಕ್‌ಗಳಲ್ಲಿ ಕೈಗೊಂಡಿರುವ ಸಸಿ ನೆಡುವಿಕೆ ಮತ್ತು ನಿರ್ವಹಣೆ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ಏ.10ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆ ನಡೆದಿತ್ತು. ರಸ್ತೆ ಬದಿ ಹಾಗೂ ಬ್ಲಾಕ್‌ಗಳಲ್ಲಿ ನೆಟ್ಟಿರುವ ಸಸಿಗಳ ಕುರಿತು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಆಯಾ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿತ್ತು.

ಆದರೆ, ಈ ನಿರ್ಧಾರವನ್ನು ಅರಣ್ಯ ಇಲಾಖೆ ಒಪ್ಪಿಕೊಂಡಿಲ್ಲ. ಅರಣ್ಯ ಇಲಾಖೆಯ ಕಾಮಗಾರಿಗಳನ್ನು ಇತರೆ ಇಲಾಖೆಯ ಅಧಿಕಾರಿಗಳು ಪರಿಶೀಲಿಸಲು ಅಧಿಕಾರ ವ್ಯಾಪ್ತಿ ಇಲ್ಲ ಎಂದು ಹಾವೇರಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಜಿಲ್ಲಾ ಪಂಚಾಯಿತಿ ಸಿಇಒಗೆ ಪತ್ರ ಬರೆದು, ಜಂಟಿ ಸ್ಥಳ ಪರಿಶೀಲನೆಗೆ ಸಂಬಂಧಿಸಿದ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ಸಭೆಯ ನಿರ್ಧಾರಕ್ಕೆ ಆಕ್ಷೇಪ?

ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆಗಾಗಿ ನಡೆಯುವ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷತೆ ವಹಿಸುತ್ತಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ, ಕಾಮಗಾರಿಗಳ ಪ್ರಗತಿ ಹಾಗೂ ಲೋಪದೋಷಗಳ ಕುರಿತು ಚರ್ಚಿಸುತ್ತಾರೆ. ಇಂತಹ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳನ್ನು ಸಂಬಂಧಿಸಿದ ಅಧಿಕಾರಿಗಳು ಅನುಷ್ಠಾನಗೊಳಿಸುವುದು ಸಾಮಾನ್ಯ.

ಆದರೆ, ಕೆಡಿಪಿ ಸಭೆಯಲ್ಲೇ ಜಂಟಿ ಪರಿಶೀಲನೆಗೆ ನಿರ್ಧಾರವಾಗಿದ್ದರೂ, ಅದನ್ನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಪ್ರಶ್ನಿಸಿರುವುದು ಆಡಳಿತಾತ್ಮಕವಾಗಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಚಿವರ ಅಧ್ಯಕ್ಷತೆಯ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಇಲಾಖೆಯ ಅಧಿಕಾರಿಯೊಬ್ಬರು ಹಿಂಪಡೆಯುವಂತೆ ಹೇಳಬಹುದೇ? ಕೆಡಿಪಿ ಸಭೆಯ ನಿರ್ಧಾರಗಳಿಗೆ ಇಲಾಖೆಗಳು ಬದ್ಧವಾಗಬೇಕಿಲ್ಲವೇ? ಎಂಬ ಚರ್ಚೆ ಇದೀಗ ಆರಂಭವಾಗಿದೆ.

ಅರಣ್ಯ ಸಂಹಿತೆಯ ಉಲ್ಲೇಖ: ತಮ್ಮ ಪತ್ರದಲ್ಲಿ ಕರ್ನಾಟಕ ಅರಣ್ಯ ಸಂಹಿತೆ-1976 ಹಾಗೂ ಅರಣ್ಯ ಇಲಾಖೆಯ ನಿಯಮಗಳನ್ನು ಉಲ್ಲೇಖಿಸಿರುವ ಡಿಸಿಎಫ್, ಅರಣ್ಯ ಇಲಾಖೆಯ ಕಾಮಗಾರಿಗಳನ್ನು ಪರಿಶೀಲಿಸುವ ಅವಕಾಶ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮಾತ್ರ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆ. 5ರಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆಯುವಂತೆ ಈಗಾಗಲೇ ಕೋರಲಾಗಿತ್ತು. ಆದರೆ ಈವರೆಗೂ ಆದೇಶ ರದ್ದಾಗದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಗೌರವಪೂರ್ವಕವಾಗಿ ಆದೇಶ ಹಿಂಪಡೆಯುವಂತೆ ಡಿಸಿಎಫ್ ಮನವಿ ಮಾಡಿದ್ದಾರೆ.

ಆದರೆ, ಕೆಡಿಪಿ ಸಭೆಯ ನಿರ್ಧಾರ ಮತ್ತು ಇಲಾಖೆಯ ಅಧಿಕಾರ ವ್ಯಾಪ್ತಿ ನಡುವಿನ ಈ ಸಂಘರ್ಷ ಜಿಲ್ಲಾಡಳಿತದ ಮಟ್ಟದಲ್ಲಿ ಕುತೂಹಲ ಮೂಡಿಸಿದೆ. ಉಸ್ತುವಾರಿ ಸಚಿವರ ಸಭೆಯ ನಿರ್ಧಾರವನ್ನೇ ಅಧಿಕಾರಿಯೊಬ್ಬರು ಪ್ರಶ್ನಿಸಿರುವುದು ಆಡಳಿತ ವ್ಯವಸ್ಥೆಯಲ್ಲಿ ಸಚಿವರ ಮೇಲ್ವಿಚಾರಣೆಯ ಪಾತ್ರದ ಬಗ್ಗೆಯೂ ಚರ್ಚೆ ಹುಟ್ಟುಹಾಕಿದೆ.

ಏನಿದು ಪ್ರಕರಣ?

ಜಿಲ್ಲೆಯಲ್ಲಿ ರಸ್ತೆ ಬದಿ ಸಸಿ ನೆಡುವ ಕಾಮಗಾರಿಗೆ ರಾಷ್ಟ್ರೀಯ ಗ್ರಾಮೀಣ ರಸ್ತೆ ಬದಿ ಸಸಿ ನೆಡುವ ಯೋಜನೆ ಹಾಗೂ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿಯಡಿ ಮಂಜೂರಾದ ₹2 ಕೋಟಿಗೂ ಅಧಿಕ ಅನುದಾನ ದುರ್ಬಳಕೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಹಾವೇರಿ ಹಾಗೂ ಬ್ಯಾಡಗಿ ತಾಲೂಕುಗಳಲ್ಲಿ ಕಾಮಗಾರಿ ಆರಂಭಿಸದೇ ಹಣ ಪಡೆಯಲಾಗಿದೆ ಎಂಬ ಆಕ್ಷೇಪ ವ್ಯಕ್ತವಾದ ಬಳಿಕ ಕೆಲವೆಡೆ ತರಾತುರಿಯಲ್ಲಿ ಸಸಿ ನೆಡಲಾಗಿದೆ ಎಂದು ಸ್ಥಳೀಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದರು. ಅರಣ್ಯ ಇಲಾಖೆಯ ನಿಯಮದಂತೆ ಸಸಿಗಳು ಕನಿಷ್ಠ 5 ಅಡಿ ಎತ್ತರ, ಒಂದು ಇಂಚು ಕಾಂಡದ ವ್ಯಾಸ ಹೊಂದಿರಬೇಕು. 3x3 ಅಡಿ ಗುಂಡಿಯಲ್ಲಿ ಹಾಗೂ ರಸ್ತೆಯಿಂದ ಕನಿಷ್ಠ 3 ಮೀಟರ್ ಅಂತರದಲ್ಲಿ ನೆಡಬೇಕು. ಆದರೆ, ಹಲವು ಕಡೆ ಸಣ್ಣ ಸಸಿಗಳನ್ನು ರಸ್ತೆ ಮತ್ತು ವಿದ್ಯುತ್‌ ಕಂಬಗಳ ಪಕ್ಕದಲ್ಲೇ ನೆಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಪರಿಶೀಲಿಸಿ ವರದಿ ಸಲ್ಲಿಸುವಂತೆ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವರು ಸೂಚಿಸಿದ್ದರು.