ಡಿ.ಸುಧಾಕರ್ ರವರು ಮೊದಲ ಬಾರಿಗೆ ತಾಲೂಕಿನಲ್ಲಿ ಗೆದ್ದಾಗ ಮಾಡಿದ ರಸ್ತೆ ಮತ್ತು ಚರಂಡಿಗಳು ಗತ ಕಾಲದ ಪಳೆಯುಳಿಕೆಯಂತಾಗಿವೆ. ಸ್ಥಳೀಯ ನಿವಾಸಿ ರಂಗಸ್ವಾಮಿ ಮಾತನಾಡಿ, ಈಗಾಗಲೇ ಗ್ರಾಮ ಪಂಚಾಯ್ತಿಯವರಿಗೆ, ಆರೋಗ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದೇವೆ. ಇದುವರೆಗೂ ಯಾವ ಪ್ರಯೋಜನವಾಗಿಲ್ಲ. ಸೊಳ್ಳೆಗಳ ದಾಳಿಗೆ ಮಕ್ಕಳು ಕಾಯಿಲೆ ಬೀಳುತ್ತಿವೆ. ನಮ್ಮನ್ನು ಮನುಷ್ಯರಂತೆ ನೋಡಿ ಚರಂಡಿ ಸಮಸ್ಯೆ ಬಗೆಹರಿಸಿ ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ಮನೆ ಬಾಗಿಲು ತೆಗೆದರೆ ಗುಯ್ ಗುಡುವ ಸೊಳ್ಳೆಗಳು, ಮೂಗಿಗೆ ರಾಚುವ ಕೊಳಚೆ ನೀರಿನ ವಾಸನೆ, ಮಳೆ ಬಂದರೆ ಕೊಚ್ಚೆ ಗುಂಡಿಯಂತಾಗುವ ರಸ್ತೆ, ತುಂಬಿ ತುಳುಕುವ ಚರಂಡಿಯಲ್ಲಿ ಪುಟ್ಟ ಮಕ್ಕಳು ಎಲ್ಲಿ ಬೀಳುತ್ತಾವೋ ಎಂಬ ಭೀತಿ.

ತಾಲೂಕಿನ ಪಿಡಿ ಕೋಟೆ ಗ್ರಾಮ ಪಂಚಾಯ್ತಿಯ ಹಲಗಲದ್ದಿ ಗ್ರಾಮದ ಜನತಾ ಕಾಲೋನಿಯ ವಾಸ್ತವ ಪರಿಸ್ಥಿತಿ ಇದು. ಇಲ್ಲಿನ ಜನರನ್ನು ಅಧಿಕಾರಿಗಳು ಮನುಷ್ಯರು ಅಂದುಕೊಂಡಿದ್ದಾರಾ ಇಲ್ಲವಾ ಎಂಬ ಅನುಮಾನ ಕಾಡುತ್ತಿದೆ. ಅಂತಹ ನಿಕೃಷ್ಟ ಬದುಕಿನ ಕೂಪಕ್ಕೆ ಆಡಳಿತಶಾಹಿ ವ್ಯವಸ್ಥೆ ನೂಕಿದೆ.

ಜನತಾ ಕಾಲೋನಿಯಲ್ಲಿ ಸುಮಾರು 30 ರಷ್ಟು ಮನೆಗಳಿದ್ದು ಎಲ್ಲರೂ ದಲಿತರೇ ಆಗಿದ್ದಾರೆ. ಇರುವ ಮೂವತ್ತು ಮನೆಗಳಲ್ಲಿ ಕಡಿಮೆಯೆoದರೂ ಹತ್ತರಿಂದ ಹದಿನೈದು ಮನೆಗಳ ಮುಂದಿನ ಚರಂಡಿಯಲ್ಲಿ ಕೊಳಚೆ ನೀರು ನಿಂತು ವರ್ಷವಾಗುತ್ತಾ ಬಂದಿದೆ. ನೀರು ಮುಂದೆ ಹೋಗುವ ಹಾದಿ ಬಂದ್ ಮಾಡಲಾಗಿದೆ. ಬೀದಿಯ ಕೊನೆಯಲ್ಲಿ ನಾಗರಾಜ್ ಎನ್ನುವವರ ಮನೆಯೊಳಕ್ಕೆ ಹೋಗಲು ಆಗದಂತೆ ಚರಂಡಿ ನೀರು ನಿಂತಿದೆ. ಬಾಗಿಲು ತೆಗೆದು ಹೊರಬಂದರೆ ಚರಂಡಿ ನೀರಿಗೆ ಹೆಜ್ಜೆ ಇಡಬೇಕು. ಹಾಗಾಗಿ ಬೇಸತ್ತು ಹೋದ ನಾಗರಾಜ್ ಕುಟುಂಬ ವಾಸದ ಮನೆಯನ್ನೇ ಬಿಟ್ಟು ಜಮೀನಿನಲ್ಲಿ ಶೆಡ್ ಹಾಕಿಕೊಂಡು ಅಲ್ಲಿಯೇ ಕಾಲ ನೂಕುತ್ತಿದ್ದಾರೆ.

ಚರಂಡಿ ನೀರು ರಸ್ತೆಗೆ ಹರಿಯುವಷ್ಟು ತುಂಬಿದ್ದು ಅದಕ್ಕಾಗಿಯೇ ಅಲ್ಲಿನ ಅಕ್ಕಪಕ್ಕದ ನಿವಾಸಿಗಳು ಸಾಕಷ್ಟು ಸಲ ಜಗಳವಾಡಿದ್ದಾರೆ. ಒಂದೊಂದು ಮನೆಯ ಅಂತರಕ್ಕೆ ಸರಿಯಾಗಿ ಚರಂಡಿ ನೀರು ಮುಂದೆ ಹೋಗದಂತೆ ಅಡ್ಡ ಮಣ್ಣು ಸುರಿದು ಕೊಂಡಿದ್ದಾರೆ. ಇದೀಗ ಅವರ ಮನೆಯ ಕೊಳಚೆ ನೀರು ಅವರ ಮನೆಯ ಮುಂದೆಯೇ ನಿಲ್ಲುವoತಾಗಿದೆ.

ಸುಮಾರು 50 ವರ್ಷದ ಹಿಂದೆ ಇಲ್ಲಿ ದಲಿತ ಕಾಲೋನಿಗೆಂದೇ ಒಂದು ಎಕರೆಯಷ್ಟು ಜಾಗವನ್ನು ಪಕ್ಕದ ಮದ್ದಿಹಳ್ಳಿಯವರೊಬ್ಬರು ಉಚಿತವಾಗಿ ನೀಡಿದ್ದರು. ಆನಂತರ ಅವರು ಅದರ ಪಕ್ಕದ ಜಮೀನನ್ನು ಮಾರಾಟ ಮಾಡಿದ್ದು ಇದೀಗ ಆ ಜಮೀನಿನವರು ಅದು ನಮ್ಮ ಜಾಗ ಎಂದು ಕಾಲುವೆ ಮುಚ್ಚಿದ್ದು ಚರಂಡಿ ನೀರು ಹೊರ ಹೋಗದಂತೆ ಅಡ್ಡ ಮಣ್ಣು ಸುರಿದಿದ್ದಾರೆ. ಬೀದಿಯ ಎರಡೂ ಬದಿಯ ಚರಂಡಿಗಳಲ್ಲಿ ವರ್ಷದಿಂದ ನೀರು ನಿಂತಿದ್ದು ಸೊಳ್ಳೆಗಳ ಕಾಟಕ್ಕೆ ಚಿಕ್ಕ ಮಕ್ಕಳು ಸೇರಿದಂತೆ ಬಹಳಷ್ಟು ಜನರು ವಿವಿಧ ರೀತಿಯ ಜ್ವರಗಳಿಗೆ ತುತ್ತಾಗಿದ್ದಾರೆ. ದುರಂತ ಎಂದರೆ ಒಂದು ಮನೆಯಲ್ಲಿ ಎರಡು ತಿಂಗಳು ಮಗುವಿನ ಬಾಣoತಿ ಇದ್ದು ಇಲ್ಲಿನ ಅವ್ಯವಸ್ಥೆಗೆ ಹೆದರಿ ಅವರು ಸಂಬಂಧಿಕರ ಮನೆಗೆ ಕಳಿಸಿದ್ದಾರೆ.ಇನ್ನು ಚರಂಡಿ ನೀರಿನೊಳಗಿನ ಕಸ ಕಡ್ಡಿ ಕೊಳಚೆಯನ್ನು ಯುಗಾದಿ ಹಬ್ಬದಲ್ಲಿ ತೆಗೆದು ರಸ್ತೆ ಮೇಲೆ ಹಾಕಿರುವುದು ಮೂರು ತಿಂಗಳಾದರೂ ಅಲ್ಲೇ ಇದೆ. ಹೆಚ್ಚಾದ ಚರಂಡಿ ನೀರು ರಸ್ತೆ ಮೇಲೆ ಬಂದು ರಸ್ತೆಯು ಸಹ ಪಾಚಿ ಕಟ್ಟಿದಂತಾಗಿದೆ.

ಡಿ.ಸುಧಾಕರ್ ರವರು ಮೊದಲ ಬಾರಿಗೆ ತಾಲೂಕಿನಲ್ಲಿ ಗೆದ್ದಾಗ ಮಾಡಿದ ರಸ್ತೆ ಮತ್ತು ಚರಂಡಿಗಳು ಗತ ಕಾಲದ ಪಳೆಯುಳಿಕೆಯಂತಾಗಿವೆ. ಸ್ಥಳೀಯ ನಿವಾಸಿ ರಂಗಸ್ವಾಮಿ ಮಾತನಾಡಿ, ಈಗಾಗಲೇ ಗ್ರಾಮ ಪಂಚಾಯ್ತಿಯವರಿಗೆ, ಆರೋಗ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದೇವೆ. ಇದುವರೆಗೂ ಯಾವ ಪ್ರಯೋಜನವಾಗಿಲ್ಲ. ಸೊಳ್ಳೆಗಳ ದಾಳಿಗೆ ಮಕ್ಕಳು ಕಾಯಿಲೆ ಬೀಳುತ್ತಿವೆ. ನಮ್ಮನ್ನು ಮನುಷ್ಯರಂತೆ ನೋಡಿ ಚರಂಡಿ ಸಮಸ್ಯೆ ಬಗೆಹರಿಸಿ ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.

ಪಿಡಿ ಕೋಟೆ ಗ್ರಾಮ ಪಂಚಾಯ್ತಿ ಪಿಡಿಒ ಮಹಮ್ಮದ್ ಅಲಿಯವರು ಪ್ರತಿಕ್ರಿಯಿಸಿ, ನಾನು ಈ ಪಂಚಾಯ್ತಿಗೆ ಬಂದು ಒಂದೂವರೆ ತಿಂಗಳಾಗಿದೆ. ಚರಂಡಿ ನೀರಿನ ಸಮಸ್ಯೆ ನನ್ನ ಗಮನಕ್ಕೆ ಬಂದ ತಕ್ಷಣ ನಾನೇ ಖುದ್ದು ಹೋಗಿ ಬಂದೆ. ಅಲ್ಲಿ ಅವರು ಇಷ್ಟು ದಿನದಿಂದ ಹೇಗೆ ವಾಸಿಸುತ್ತಿದ್ದಾರೋ ಅನಿಸಿತು. ಕೂಡಲೇ ಮೇಲಧಿಕಾರಿಗಳಿಗೆ ಅಲ್ಲಿನ ಪರಿಸ್ಥಿತಿ ವಿವರಿಸಿದೆ. ಅವರು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇಯವರಿಗೆ ಗಮನಕ್ಕೆ ತಂದು ಚರಂಡಿಯ ಮುಂದುವರೆದ ಭಾಗಕ್ಕೆ ಕ್ರಮ ಕೈಗೊಳ್ಳಿ ಎಂದಿದ್ದಾರೆ. ಹಣದ ಲಭ್ಯತೆ ನೋಡಿ ಎಸ್ಟಿಮೇಟ್ ತಯಾರಿಸುತ್ತಾರೆ. ನಾನು ಸಹ ಪಂಚಾಯ್ತಿ ವ್ಯಾಪ್ತಿಯಲ್ಲಿ ಐದು ಲಕ್ಷದ ಮೂರು ಚರಂಡಿ ಕಾಮಗಾರಿ ಮಾಡಲು ಕ್ರಮ ಕೈಗೊಂಡಿದ್ದೇನೆ. ಯಾರ ಕಡೆಯಿಂದ ಆದರೂ ಆಗಲಿ ಬೇಗ ಆ ಕಾಲೋನಿ ಜನರು ಚರಂಡಿ ನೀರಿನ ಕಾಟದಿಂದ ಮುಕ್ತಿ ಪಡೆಯಲಿ ಎಂದು ಪ್ರಾಮಾಣಿಕ ಹೋರಾಟ ನಡೆಸುತ್ತಿದ್ದೇವೆ ಎಂದರು.