ಡಾಕ್ಯುಮೆಂಟ್ ಮಾಡದೇ ಅಗಲೀಕರಣ ಸಾಧ್ಯವಾ?

| Published : Dec 27 2024, 12:46 AM IST

ಡಾಕ್ಯುಮೆಂಟ್ ಮಾಡದೇ ಅಗಲೀಕರಣ ಸಾಧ್ಯವಾ?
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆ ಅಗಲೀಕರಣ ಎಂದರೆ ನಾಲ್ಕು ಮಂದಿ ಕುಳಿತು ಮೀಟಿಂಗ್ ಮಾಡಿ ರಸ್ತೆ ಮಧ್ಯೆ ರೇಖೆಯಿಂದ ಎರಡೂ ಕಡೆ 21 ಮೀಟರ್ ಗೆ ಕಟ್ಟಡ ತೆರವುಗೊಳಿಸಬೇಕೆಂದು ತೀರ್ಮಾನ ಕೈಗೊಂಡಾಕ್ಷಣ ಸಾಧ್ಯವಾಗುವುದಿಲ್ಲ. ಅದಕ್ಕೊಂದು ಪೂರ್ವ ಸಿದ್ಧತೆ ಬೇಕು. ಸಾಕಷ್ಟು ಹೋಂ ವರ್ಕ್ ಮಾಡಿಕೊಳ್ಳಬೇಕು. ನಂತರವೇ ತೆರವು ಕಾರ್ಯಾಚರಣೆಗೊಂದು ಸ್ಪಷ್ಟ ದಾರಿಗಳು ಗೋಚರಿಸುತ್ತವೆ. ಕಟ್ಟಡದ ಮಾಲೀಕರಿಗೆ ಡಾಕ್ಯುಮೆಂಟ್ ಕಾಲ್ ಮಾಡದೆ ಅಗಲೀಕರಣ ಸಾಧ್ಯವಾ ಎಂಬ ಪ್ರಶ್ನೆ ಎದುರಾಗಿದೆ.

ರಸ್ತೆ ತೆರವು ಅಂದ್ರೆ ನಾಲ್ಕು ಮಂದಿ ಮೀಟಿಂಗ್ ಮಾಡಿ ನಿರ್ಣಯ ಕೈಗೊಳ್ಳೋದಲ್ಲ । ಚಿತ್ರದುರ್ಗದ ನೆಲದಲ್ಲಿ ದಾಖಲಾಗಿವೆ ಕಹಿ ಘಟನೆಗಳು

ಚಿಕ್ಕಪ್ಪನಹಳ್ಳಿ ಷಣ್ಮುಖಕನ್ನಡಪ್ರಭವಾರ್ತೆ ಚಿತ್ರದುರ್ಗರಸ್ತೆ ಅಗಲೀಕರಣ ಎಂದರೆ ನಾಲ್ಕು ಮಂದಿ ಕುಳಿತು ಮೀಟಿಂಗ್ ಮಾಡಿ ರಸ್ತೆ ಮಧ್ಯೆ ರೇಖೆಯಿಂದ ಎರಡೂ ಕಡೆ 21 ಮೀಟರ್ ಗೆ ಕಟ್ಟಡ ತೆರವುಗೊಳಿಸಬೇಕೆಂದು ತೀರ್ಮಾನ ಕೈಗೊಂಡಾಕ್ಷಣ ಸಾಧ್ಯವಾಗುವುದಿಲ್ಲ. ಅದಕ್ಕೊಂದು ಪೂರ್ವ ಸಿದ್ಧತೆ ಬೇಕು. ಸಾಕಷ್ಟು ಹೋಂ ವರ್ಕ್ ಮಾಡಿಕೊಳ್ಳಬೇಕು. ನಂತರವೇ ತೆರವು ಕಾರ್ಯಾಚರಣೆಗೊಂದು ಸ್ಪಷ್ಟ ದಾರಿಗಳು ಗೋಚರಿಸುತ್ತವೆ. ಕಟ್ಟಡದ ಮಾಲೀಕರಿಗೆ ಡಾಕ್ಯುಮೆಂಟ್ ಕಾಲ್ ಮಾಡದೆ ಅಗಲೀಕರಣ ಸಾಧ್ಯವಾ ಎಂಬ ಪ್ರಶ್ನೆ ಎದುರಾಗಿದೆ.ಐವತ್ತು ವರ್ಷಗಳ ಹಿಂದೆ ಚಿತ್ರದುರ್ಗ ನಗರವನ್ನು ಪಿಡಬ್ಲ್ಯುಡಿ ರಸ್ತೆ ಸೀಳಿ ಹೋಗಿತ್ತು. ಬೆಂಗಳೂರು ಧಾರವಾಡಕ್ಕೆ ಹೋಗುವ ಬಸ್ಸುಗಳು ಮತ್ತು ಸಣ್ಣ ಪ್ರಮಾಣದ ಲಾರಿಗಳು ಮಾತ್ರ ಈ ದಾರಿ ಬಳಸಿ ಹೋಗುತ್ತಿದ್ದವು. ನಂತರ ಹೊರವಲಯದಲ್ಲಿದ್ದ ರಾಷ್ಟ್ರೀಯ ಹೆದ್ದಾರಿ (ಮಿಲ್ಟ್ರಿ ರೋಡ್)ಯಲ್ಲಿ ದೊಡ್ಡ ಪ್ರಮಾಣದ ಲಾರಿಗಳು, ಮಿಲಿಟರಿ ವಾಹನಗಳು ಓಡಾಡುತ್ತಿದ್ದವು. ಈ ಮಿಲ್ಟ್ರಿ ರಸ್ತೆಯೇ ನಂತರ ಎನ್ ಎಚ್- 4 ಆಗಿ ರುಪಾಂತರಗೊಂಡಾಗ ಊರ ಮಧ್ಯ ಭಾಗದಲ್ಲಿದ್ದ ಪಿಡಬ್ಟ್ಯುಡಿ ರಸ್ತೆ ಮೇಲಿನ ಒತ್ತಡ ಕಡಿಮೆಯಾಯಿತು. ಬಳಿಕ ಈ ರಸ್ತೆಯನ್ನು ನಗರಸಭೆಗೆ ಹಸ್ತಾಂತರಿಸಲಾಯಿತು.ರಸ್ತೆ ಅಗಲೀಕರಣಕ್ಕೆ ನಗರಸಭೆ ಅಧಿಕಾರಿಗಳು ಮುಂದಾದಲ್ಲಿ ಕಠಿಣ ಹಾದಿ ಕ್ರಮಿಸಿದಂತಾಗುತ್ತದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಐವತ್ತು ವರ್ಷದ ಹಿಂದಿನ ದಾಖಲಾತಿ ಹುಡುಕಿ ಆಗ ನಮ್ಮ ರಸ್ತೆ ಎಷ್ಟಿತ್ತು ಎಂಬುದನ್ನು ಸಾಬೀತು ಪಡಿಸಬೇಕು. ನಂತರ ಈ ರಸ್ತೆಯಲ್ಲಿ ಆಗಿರುವ ಒತ್ತುವರಿ ಪ್ರಮಾಣ ಪರಿಶೀಲಿಸಬೇಕು. ಎಲ್ಲದಕ್ಕಿಂತ ಮೊದಲು ವರ್ತಕರಿಗೆ ಡಾಕ್ಯುಮೆಂಟ್ ಕಾಲ್ ಮಾಡಬೇಕು.ಏನಿದು ಡಾಕ್ಯುಮೆಂಟ್

ಹಾಲಿ ಬಿ.ಡಿ ರಸ್ತೆಯಲ್ಲಿರುವ ವರ್ತಕರು ತಮ್ಮ ಕಟ್ಟಡ ಅಳತೆ ಮಾಡಿಸಿ ಉದ್ದ, ಅಗಲ ಲೆಕ್ಕಾಚಾರ ಮಾಡಿ ಕಂದಾಯ ಕಟ್ಟಿದಾಕ್ಷಣ ಅದು ಅಧೀಕೃತ ಕಟ್ಟಡ ಎನಿಸಿಕೊಳ್ಳುವುದಿಲ್ಲ. ಇದಕ್ಕಾಗಿ ಅವರುಗಳು ಮೂಲ ದಾಖಲಾತಿ ಒದಗಿಸಬೇಕು. ಅವರಿಗೆ ಕಟ್ಟಡ ಹೇಗೆ ಬಂತು, ಹಾಲಿ ಇರುವ ಕಟ್ಟಡದ ವಿಸ್ತೀರ್ಣ, ಮೂಲದಾಖಲಾತಿಯಲ್ಲಿ ಎಷ್ಟಿದೆ ಎಂಬ ನಿಖರ ಮಾಹಿತಿ ನೀಡಬೇಕು.

ನಗರಸಭೆ ಅಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೊಳ್ಳುವ ಮುನ್ನ ಕಟ್ಟಡದ ಮಾಲೀಕರಿಗೆ ನೋಟೀಸು ಜಾರಿ ಮಾಡಿ ಮೂಲ ದಾಖಲಾತಿಗಳ ಒದಗಿಸಲು ಸೂಚಿಸಬೇಕು. ಇದಕ್ಕಾಗಿ ಒಂದಿಷ್ಟು ಕಾಲಾವಕಾಶ ಕೊಡಬೇಕು. ಕಟ್ಟಡ ಮಾಲೀಕರು ನೀಡುವ ದಾಖಲೆಗಳು ಹಾಗೂ ನಗರಸಭೆ ಖಾತೆ ಪುಸ್ತಕದಲ್ಲಿ ನಮೂದಾಗಿರುವ ಕಟ್ಟಡ ವಿಸ್ತೀರ್ಣ ಪರಿಶೀಲಿಸಬೇಕು. ಹಾಗೊಂದು ವೇಳೆ ವ್ಯತ್ಯಾಸಗಳು ಕಂಡು ಬಂದರೆ ಒತ್ತುವರಿ ಆಗಿದೆ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ.

ಭೂ ಸ್ವಾಧೀನ ಅಧಿಕಾರಿ ಬೇಕು

ಜಿಲ್ಲಾಡಳಿತ ಓರ್ವ ಭೂ ಸ್ವಾಧೀನ ಅಧಿಕಾರಿಯ ಕೊಡದಿದ್ದರೆ ನಗರಸಭೆಯಿಂದ ತೆರವು ಕಾರ್ಯಾಚರಣೆ ಕಷ್ಟವಾಗುತ್ತದೆ. ಕಾರ್ಯಾಚರಣೆ ವ್ಯಾಪ್ತಿಗೆ ನೂರಾರು ಕಟ್ಟಡಗಳು ಬರುವುದರಿಂದ ವಿಶೇಷ ಸಂದರ್ಭವೆಂದು ಪರಿಗಣಿಸುವುದು ಅನಿವಾರ್ಯ. ಸ್ವಾಧೀನ ಅಧಿಕಾರಿ ನೇಮಕಗೊಂಡರೆ ನಗರಸಭೆಗೆ ಒಂದಿಷ್ಟು ಬಲ ಬಂದಂತಾಗುತ್ತದೆ.

ಇಪ್ಪತ್ತೈದು ವರ್ಷದ ಕೇಸು ಹಾಗೆಯೇ ಇದೆ

ಇಪ್ಪತ್ತೈದು ವರ್ಷದ ಹಿಂದೆ ಒಬ್ಬಂಟಿಯಾಗಿ ರಸ್ತೆ ಒತ್ತುವರಿ ಕಾರ್ಯಾಚರಣೆಗೆ ಮುಂದಾಗಿದ್ದ ನಗರಸಭೆ ನಂತರ ಬಹಳ ಸಂಕಷ್ಟಗಳ ಅನುಭವಿಸಬೇಕಾಯಿತು. ಕಹಿ ಘಟನೆಗಲು ದಾಖಲಾಗಿದ್ದವು. ಯೂನಿಯನ್ ಚಿತ್ರಮಂದಿರದ ಮುಂಭಾಗದ ವಾಣಿಜ್ಯ ಮಳಿಗೆಗಳು ಒತ್ತುವರಿಯೆಂದು ಭಾವಿಸಿ ನಗರಸಭೆ ಅಧಿಕಾರಿಗಳು ತೆರವುಗೊಳಿಸಲು ಮುಂದಾಗಿದ್ದರು. ಕಟ್ಟಡಗಳ ಅರ್ಧ ನೆಲಸಮ ಮಾಡಿದಾಗ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.

ಇದರಿಂದಾಗಿ ಕಟ್ಟಡದ ಅವಶೇಷಗಳು ಹತ್ತು ವರ್ಷಗಳಿಗೂ ಹೆಚ್ಚು ಕಾಲ ನಗರ ಸೌಂದರ್ಯ ಹಾಳುಗೆಡವಿತ್ತು. ಇಂದಿಗೂ ಕೂಡಾ ಕಟ್ಟಡದ ವ್ಯಾಜ್ಯ ನ್ಯಾಯಾಲಯದಲ್ಲಿದ್ದು ಬಗೆ ಹರಿದಿಲ್ಲ. ರಸ್ತೆ ಒತ್ತುವರಿ ತೆರವು ಕೈಗೊಳ್ಳುವ ಮುನ್ನ ಯೂನಿಯನ್ ಚಿತ್ರಮಂದಿರದ ಕಾರ್ಯಾಚರಣೆ ನಗರಸಭೆಗೆ ಪಾಠವಾಗಬೇಕು. ರಸ್ತೆ ತೆರವು ಕಾರ್ಯಾಚರಣೆಗೆ ನಾಲ್ಕಾರು ಕಟ್ಟಡದ ಮಾಲೀಕರು ಏನಾದರೂ ತಡೆಯಾಜ್ಞೆ ತಂದಲ್ಲಿ ಇಡೀ ಯೋಜನಯೇ ಹಾಳಾಗುತ್ತದೆ.

ಹೈಕೋರ್ಟ್ ನಲ್ಲಿ ಕೇವಿಯಟ್ ಸಲ್ಲಿಕೆಯಾಗಿಲ್ಲನಗರಸಭೆಯವರು ಕಟ್ಟಡ ತೆರವುಗೊಳಿಸಲು ಮುಂದಾದಲ್ಲಿ ಮಾಲೀಕ ಹೈಕೋರ್ಟ್ ಗೆ ಹೋಗಿ ತಡೆಯಾಜ್ಞೆ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ನಗರಸಭೆಯಿಂದ ಮೊದಲು ಹೈಕೋರ್ಟ್ ನಲ್ಲಿ ಕೇವಿಯಟ್ ಸಲ್ಲಿಕೆಯಾಗಬೇಕು. ಹಾಗಾದಲ್ಲಿ ತಡೆಯಾಜ್ಞೆ ನೀಡುವ ಮೊದಲು ಕೋರ್ಟ್ ಕೇವಿಯೇಟರ್ (ನಗರಸಭೆ)ನ ಕೇಳುತ್ತದೆ. ನಗರಸಭೆಯಿಂದ ಇದುವರವೆಗೂ ಅಂತಹ ಪ್ರಯತ್ನಗಳಾಗಿಲ್ಲ. ಇವರು ಗೋಡೆಗಳ ಮೇಲೆ ಮಾರ್ಕ್ ಮಾಡಲು ಮುಂದಾದರೆ ಯಾರಾದರೂ ಹೈಕೋರ್ಟ್ ಗೆ ಹೋಗಿ ತಡೆಯಾಜ್ಞೆ ತರುವ ಸಾಧ್ಯತೆಗಳಿರುತ್ತವೆ.

ಚಿತ್ರದುರ್ಗ ಯೂನಿಯನ್ ಚಿತ್ರಮಂದಿರದ ಮುಂಭಾಗದಲ್ಲಿದ್ದ ವಾಣಿಜ್ಯ ಮಳಿಗೆಗಳು ನೆಲಸಮ ಮಾಡಿದ ನಂತರ ಅಲ್ಲಿ ಮೇಲೆದ್ದಿರುವ ಗೂಡಂಗಡಿಗಳು. ಈ ಕಟ್ಟಡದ ವ್ಯಾಜ್ಯಕ್ಕೆ ಇಪ್ಪತ್ತೈದು ವರ್ಷಗಳಾಗಿದ್ದರೂ ಬಗೆಹರಿದಿಲ್ಲ.