ಶ್ರೀಶೈಲ ಜಗದ್ಗುರುಗಳಿಂದ ಇಷ್ಟಲಿಂಗ ಪೂಜೆ

| Published : Mar 21 2025, 12:32 AM IST

ಸಾರಾಂಶ

ಆದಿ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ ಮತ್ತು ಷ.ಬ್ರ. ಡಾ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಷಷ್ಟಿ ಸಂಭ್ರಮದ ಕಾರ್ಯಕ್ರಮಗಳು ಗುರುವಾರ ಬೆಳಗ್ಗೆ ಕೊಟ್ಟೂರಿನಲ್ಲಿ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಇಷ್ಟಲಿಂಗ ಪೂಜೆಯೊಂದಿಗೆ ಆರಂಭವಾಯಿತು.

ಕೊಟ್ಟೂರು: ಆದಿ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ ಮತ್ತು ಷ.ಬ್ರ.ಡಾ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಷಷ್ಟಿ ಸಂಭ್ರಮದ ಕಾರ್ಯಕ್ರಮಗಳು ಗುರುವಾರ ಬೆಳಗ್ಗೆ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಇಷ್ಟಲಿಂಗ ಪೂಜೆಯೊಂದಿಗೆ ಆರಂಭವಾಯಿತು.

ಇಷ್ಟಲಿಂಗ ಪೂಜೆಗಿಂತ ಮುಂಚೆ ಚಾನುಕೋಟಿ ಮಠದ ಆವರಣದಲ್ಲಿ ಮೊದಲಿಗೆ ಗಣಪತಿ ಹೋಮ ನಡೆಯಿತು. ಒಂದು ಮತ್ತು ಎರಡನೇ ವಾರ್ಡ್‌ನ ಸುಮಂಗಲಿಯರಿಂದ ಗಂಗೋಧಕವನ್ನು ಧಾರ್ಮಿಕ ಪದ್ಧತಿಯಂತೆ ಮೆರವಣಿಗೆ ಮೂಲಕ ತರಲಾಯಿತು. ಆನಂತರ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಬಹಿರಂಗ ಇಷ್ಟಲಿಂಗ ಪೂಜೆಯನ್ನು ಚಾನುಕೋಟಿ ಮಠದ ಭವ್ಯ ಸಭಾಂಗಣದಲ್ಲಿ ನಡೆಸಿದರು.

ಚಾನುಕೋಟಿ ಮಠಾಧ್ಯಕ್ಷ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿ, ಜತೆಗೆ ಹುಕ್ಕೇರಿ ವಿಭೂತಿ ಪುರ, ಶಿವಗಂಗ, ಬೆಣ್ಣಿಹಳ್ಳಿ, ಕೂಡ್ಲಿಗಿ, ಪುರ್ತಿಗೇರಿ, ಶಿವಾಚಾರ್ಯ ಸ್ವಾಮೀಜಿಗಳು ಜಗದ್ಗುರುಗಳ ಪೂಜೆಯಲ್ಲಿ ಪಾಲ್ಗೊಂಡು ಅವರಿಂದ ಕರುಣ ಪ್ರಸಾದ ಸ್ವೀಕರಿಸಿದರು.

ಆನಂತರ ಭಕ್ತರು ಒಬ್ಬರಾಗಿ ತಮ್ಮ ಶಿವಲಿಂಗಕ್ಕೆ ಅಭಿಷೇಕದ ಪೂಜೆಯ ಪವಿತ್ರ ನೀರನ್ನು ಸ್ವೀಕರಿಸಿ, ಪ್ರಸಾದ ಸ್ವೀಕರಿಸಿದರು.

ಇಂದು ಉಡಿ ತುಂಬುವ ಕಾರ್ಯಕ್ರಮ: ಯುಗಮಾನೋತ್ಸವ ಮತ್ತು ಷಷ್ಟಿ ಸಂಭ್ರಮ ಕಾರ್ಯಕ್ರಮದ ಎರಡನೇ ದಿನವಾದ ಮಾ. 22ರಂದು ಬೆಳಗ್ಗೆ 10 ಗಂಟೆಗೆ ಚಾನುಕೋಟಿ ಮಠದ ಸಭಾಂಗಣದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಸಂಡೂರು ಶಾಸಕಿ ಅನ್ನಪೂರ್ಣಾ ತುಕಾರಾಂ ಮತ್ತು ಕೂಡ್ಲಿಗಿ ತಹಸೀಲ್ದಾರ್‌ ವಿ.ಕೆ. ನೇತ್ರಾವತಿ ಪಾಲ್ಗೊಳ್ಳಲಿದ್ದು, ಶ್ರೀಶೈಲ ಜಗದ್ಗುರುಗಳು ಸಾನ್ನಿಧ್ಯ ವಹಿಸಲಿದ್ದಾರೆ.