ಆಳ್ವಾಸ್ ಸಮಾಜ ಕಾರ್ಯ ವಿಭಾಗಕ್ಕೆ ಈಶ್ವರ್‌ ಮಲ್ಪೆ ಅಂಬಾಸಿಡರ್‌

| Published : Oct 29 2025, 11:15 PM IST

ಸಾರಾಂಶ

ಆಪದ್ಬಾಂಧವ ಈಶ್ವರ ಮಲ್ಪೆ ಅವರನ್ನು ಇಲ್ಲಿನ ಆಳ್ವಾಸ್ ಶಿಕ್ಷಣ ಸಂಸ್ಥೆ ತನ್ನ ಅಂಬಾಸಿಡರ್ ಆಗಿ ನೇಮಕ ಮಾಡಿದೆ. ಒಂದು ವರ್ಷ ಕಾಲ ಆಳ್ವಾಸ್ ಮತ್ತು ಸುತ್ತಮುತ್ತಲಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ಹಮ್ಮಿಕೊಂಡಿದೆ.

ಮೂಡುಬಿದಿರೆ: ಉಡುಪಿಯ ಆಪದ್ಬಾಂಧವ ಈಶ್ವರ ಮಲ್ಪೆ ಅವರನ್ನು ಇಲ್ಲಿನ ಆಳ್ವಾಸ್ ಶಿಕ್ಷಣ ಸಂಸ್ಥೆ ತನ್ನ ಅಂಬಾಸಿಡರ್ ಆಗಿ ನೇಮಕ ಮಾಡಿದೆ. ಒಂದು ವರ್ಷ ಕಾಲ ಆಳ್ವಾಸ್ ಮತ್ತು ಸುತ್ತಮುತ್ತಲಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ಹಮ್ಮಿಕೊಂಡಿದೆ. ಮುಖ್ಯವಾಗಿ ಯುವಜನರಲ್ಲಿ ಮೊಬೈಲ್ ಬಳಕೆ ಬಗ್ಗೆ ತಿಳಿ ಹೇಳುವುದು, ತಮ್ಮ ಸುರಕ್ಷತೆ ಬಗ್ಗೆ, ಭವಿಷ್ಯದ ಬಗ್ಗೆ ಅದರಲ್ಲೂ ಮುಖ್ಯವಾಗಿ ಮಕ್ಕಳು ಕ್ಷುಲ್ಲಕ ಕಾರಣಗಳಿಗಾಗಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿರುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಮಧುಮಾಲ ಕೆ. ಮಾಹಿತಿ ನೀಡಿದ್ದಾರೆ.ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಜೊತೆಗೆ ಆಸುಪಾಸಿನ 15 ಕಾಲೇಜುಗಳಲ್ಲಿ ಈ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವರ್ಷದ ಕೊನೆಗೆ ಮಲ್ಪೆ ಬೀಚಿನಲ್ಲೂ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಲ್ಪೆ ಬೀಚ್‌ನ ಕಾರ್ಯಕ್ರಮದಲ್ಲಿ ವಿವಿಧ ಜಾಗೃತಿ ಮೂಡಿಸುವ ಸ್ಪರ್ಧೆಗಳನ್ನು ಆಯೋಜನೆ ಮಾಡಿ ಮಕ್ಕಳಿಗೆ ಬಹುಮಾನ ಕೂಡ ನೀಡಲಾಗುತ್ತದೆ ಎಂದವರು ತಿಳಿಸಿದ್ದಾರೆ.

ಇದರ ಮೊದಲ ಕಾರ್ಯಕ್ರಮದಲ್ಲಿ ಈಗಾಗಲೇ ಈಶ್ವರ ಮಲ್ಪೆ ಅವರು ಆಳ್ವಾಸ್‌ನಲ್ಲಿ ಜಾಗೃತಿ ಉಪನ್ಯಾಸ ನೀಡಿದ್ದಾರೆ. ಮುಂದೆ ಅವರು ಅಥವಾ ಅವರ ತಂಡದ ಸದಸ್ಯರು ಈ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದು ಡಾ. ಮಧುಮಾಲ ಕೆ. ಹೇಳಿದರು.ಈಶ್ವರ್ ಮಲ್ಪೆ ಅವರು ರಾಜ್ಯಾದ್ಯಂತ ಆಕಸ್ಮಿಕವಾಗಿ ಅಥವಾ ಆತ್ಮಹತ್ಯೆಗಾಗಿ ಸಮುದ್ರ, ನದಿ, ಕೆರೆಗಳಿಗೆ ಬಿದ್ದ ಸಾಕಷ್ಟು ಮಂದಿಯನ್ನು ರಕ್ಷಿಸಿದ್ದಾರೆ. ತಮ್ಮ ಪ್ರಾಣವನ್ನು ಒತ್ತೆ ಇಟ್ಟು ನೀರಿನಾಳದಲ್ಲಿದ್ದ ನೂರಾರು ಶವಗಳನ್ನು ಮೇಲಕ್ಕೆ ಎತ್ತಿದ್ದಾರೆ. ಮಾತ್ರವಲ್ಲ ಯುವಜತೆಯಲ್ಲಿ ದೈರ್ಯ ಸ್ಥೈರ್ಯ ತುಂಬಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.