ರಾಯಾಪುರದ ನೂತನ ಇಸ್ಕಾನ್ ಮಂದಿರದಲ್ಲಿ ಜೂ. 18ರಿಂದ 22ರ ವರೆಗೆ ಶ್ರೀರಾಧಾ ಗೋವಿಂದ ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಅದ್ಧೂರಿಯಾಗಿ ನಡೆಯಲಿದೆ.
ಹುಬ್ಬಳ್ಳಿ:
ಇಲ್ಲಿನ ರಾಯಾಪುರದ ನೂತನ ಇಸ್ಕಾನ್ ಮಂದಿರದಲ್ಲಿ ಜೂ. 18ರಿಂದ 22ರ ವರೆಗೆ ಶ್ರೀರಾಧಾ ಗೋವಿಂದ ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಅದ್ಧೂರಿಯಾಗಿ ನಡೆಯಲಿದೆ ಎಂದು ಹು-ಧಾ ಇಸ್ಕಾನ್ ಸಂಸ್ಥೆ ಅಧ್ಯಕ್ಷ ರಾಜೀವ ಲೋಚನದಾಸ್ ಹೇಳಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂದಿರದ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ವಿಧಿ-ವಿಧಾನಗಳ ಮೂಲಕ ಉದ್ಘಾಟನೆ ನೆರವೇರಲಿದೆ. ಆ. 10ರಿಂದ ಸಾರ್ವಜನಿಕ ದರ್ಶನಕ್ಕೆ ಅಧಿಕೃತವಾಗಿ ತೆರೆದುಕೊಳ್ಳಲಿದೆ ಎಂದರು.ಶ್ರೀರಾಧಾ ಗೋವಿಂದ ದೇವಜಿಯವರ ಪ್ರಾಣ ಪ್ರತಿಷ್ಠಾ ಮಹೋತ್ಸವ ಜೂ. 22ರಂದು ನೆರವೇರಲಿದ್ದು ಇದಕ್ಕೂ ಮುನ್ನ ಜೂ. 18ರಿಂದ ಆಗಮ ಶಾಸ್ತ್ರ ಹಾಗೂ ವೇದ ಸಂಪ್ರದಾಯಗಳ ಅನುಸಾರ ವಿವಿಧ ಧಾರ್ಮಿಕ ವಿಧಿ-ವಿಧಾನ ನಡೆಯಲಿವೆ. ಪ್ರತಿಷ್ಠಾಪನೆ ಬಳಿಕ ಜೂ. 23ರಿಂದ ಆ. 9ರ ವರೆಗೆ 48 ದಿನ ಮಂಡಲ ಪೂಜೆ ನಡೆಯಲಿದೆ. ಈ ವೇಳೆ ಹೊಸ ದೇವಾಲಯದ ಒಳಗೆ ಸಾರ್ವಜನಿಕರ ಪ್ರವೇಶ ಇರುವುದಿಲ್ಲ. ಮಂಡಲ ಪೂಜೆ ಪೂರ್ಣಗೊಂಡ ಬಳಿಕ ಶ್ರೀಕೃಷ್ಣ- ಬಲರಾಮರ ವಿಗ್ರಹಗಳನ್ನು ಹೊಸ ದೇವಾಲಯದ ಗರ್ಭಗುಡಿಗೆ ಪ್ರತಿಷ್ಠಾಪಿಸಿ, ಆ. 10ರಿಂದ ಸಾರ್ವಜನಿಕ ದರ್ಶನ ಹಾಗೂ ನಿಯಮಿತ ಪೂಜಾ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.200 ಅಡಿ ಎತ್ತರದ ದೇವಾಲಯ:
ಪ್ರಸ್ತುತ ದೇವಾಲಯವು ನೆಲ ಮಟ್ಟದಿಂದ 110 ಅಡಿ ಎತ್ತರದಲ್ಲಿದ್ದು, 90 ಅಡಿ ಎತ್ತರದ ಗೋಪುರ ನಿರ್ಮಾಣ ಪೂರ್ಣಗೊಂಡ ಬಳಿಕ ಒಟ್ಟು ಎತ್ತರವು 200 ಅಡಿಗಳಾಗಲಿದೆ. 4 ಮಹಡಿ ಹಾಗೂ ಚಾವಣಿ ಒಳಗೊಂಡಿರುವ ದೇವಾಲಯವು ಉತ್ತರ ಭಾರತದ ನಾಗರ ಶೈಲಿ ಮತ್ತು ದಕ್ಷಿಣ ಭಾರತದ ದ್ರಾವಿಡ್ ಶೈಲಿಯ ಸಮನ್ವಯವಾದ ವೇಸರ ವಾಸ್ತುಶಿಲ್ಪದಲ್ಲಿ ನಿರ್ಮಾಣಗೊಂಡಿದೆ ಎಂದು ಮಾಹಿತಿ ನೀಡಿದರು.ಮೊದಲ ಹಂತದ ಕಾಮಗಾರಿಗೆ ₹ 30 ಕೋಟಿ ವೆಚ್ಚವಾಗಿದ್ದು, 2 ಮತ್ತು 3ನೇ ಹಂತ ಸೇರಿ ಒಟ್ಟು ₹ 60 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನಂತರ ದೇವಾಲಯ ಸಂಕೀರ್ಣವು 2 ಲಕ್ಷ ಚದರ ಅಡಿ ವಿಸ್ತೀರ್ಣಕ್ಕೆ ವಿಸ್ತರಿಸಲಿದೆ. ಈ ಯೋಜನೆ ಇಸ್ಕಾನ್ ಬೆಂಗಳೂರಿನ ದೇವಾಲಯ ಸಂಕೀರ್ಣದ ಮಾದರಿಯ ಭವ್ಯ ಕೇಂದ್ರವಾಗಿ ರೂಪುಗೊಳ್ಳುವ ಗುರಿ ಹೊಂದಿದೆ ಎಂದರು.ದೇವಾಲಯ ಸಂಕೀರ್ಣದಲ್ಲಿ ಮಕ್ಕಳು, ಯುವಕರು, ಮಹಿಳೆಯರು ಹಾಗೂ ಪುರುಷರಿಗಾಗಿ ವೈದಿಕ ಶಿಕ್ಷಣ ತರಗತಿ, ಆಧ್ಯಾತ್ಮಿಕ ಗ್ರಂಥಾಲಯ, ಉಪನ್ಯಾಸ ಸಭಾಂಗಣ, ಸಮುದಾಯ ಕಾರ್ಯಕ್ರಮಗಳಿಗೆ ಬಹು ಉದ್ದೇಶ ಸಭಾಂಗಣ, ಅನ್ನದಾನ ಮಂಟಪ, ದೇವರ ಮೂರ್ತಿಯ ಆಭರಣಗಳ ಕೊಠಡಿ, ವಸ್ತುಗಳ ಮಳಿಗೆ ಹಾಗೂ ಉತ್ಸವಗಳ ಸಿದ್ಧತೆಗಾಗಿ ವಿಶೇಷ ಕೊಠಡಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.ಸಂಸ್ಥೆಯ ಉಪಾಧ್ಯಕ್ಷ ರಘೋತ್ತವದಾಸ್ ಮಾತನಾಡಿ, ದೇವಾಲಯವನ್ನು ವಿಶೇಷ ಮಾರ್ಬಲ್ಸ್, ಪಂಚಲೋಹದಿಂದ ನಿರ್ಮಿಸಲಾಗಿದೆ. ಭಕ್ತರಿಗೆ ಸೇವಾರ್ತಿಗಳಿಗೆ ಒಟ್ಟು 40 ಕೊಠಡಿಯ ಯಾತ್ರಿನಿವಾಸ ನಿರ್ಮಿಸುವ ಚಿಂತನೆ ಇದೆ. ಪ್ರಾಣ ಪ್ರತಿಷ್ಠಾಪನೆಗೆ ಬೆಂಗಳೂರಿನ ಇಸ್ಕಾನ್ ಸಂಸ್ಥೆಯ ಚೇರ್‌ಮನ್ ಮಧುಪಂಡಿತ್ ದಾಸ್ ಆಗಮಿಸಲಿದ್ದಾರೆ. ಒಟ್ಟು 14 ಜನ ವೈದಿಕರು ಈ 5 ದಿನದ ಪ್ರಾಣ ಪ್ರತಿಷ್ಠಾಪನೆ ಮಾಡಲಿದ್ದಾರೆ. ಮುಂದಿನ ಮೂರು ವರ್ಷದೊಳಗೆ ಎಲ್ಲ ಮೂರು ಹಂತದ ದೇವಸ್ಥಾನ ಪೂರ್ಣಗೊಳ್ಳಲಿದೆ ಎಂದರು.