ಇಸ್ಲಾಂ ಆಶಯ ಶಾಂತಿಯೇ ಹೊರತು, ರಕ್ತವಲ್ಲ

| Published : Nov 20 2023, 12:45 AM IST

ಸಾರಾಂಶ

ಏಸುಕ್ರಿಸ್ತ, ಪೈಗಂಬರ್, ಬುದ್ಧ, ಅಂಬೇಡ್ಕರ್‌, ಗಾಂಧೀಜಿ ಅವರ ಚಿಂತನೆಗಳು ಇಂದು ನಮಗೆ ಅತ್ಯವಶ್ಯವಾಗಿವೆ. ಎಲ್ಲರೂ ಒಗ್ಗೂಡಿ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ವೇದಗಳು ಹಾಗೂ ಪೈಗಂಬರ್, ಮಹಮದ್ ನಡುವಿನ ಸಾಮ್ಯತೆಗಳ ಬಗ್ಗೆ ಪುಸ್ತಕವೊಂದು ಪ್ರಕಟವಾಗಿವೆ. ಇದು ಎಲ್ಲ ಧರ್ಮಗಳ ನಡುವೆ ಇರುವ ಸಾಮಾನ್ಯ ಸಾಮರಸ್ಯಕ್ಕೆ ನಿದರ್ಶನವಾಗಿದೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಯಾವ ಧರ್ಮವೂ ಕೆಟ್ಟ ವಿಚಾರವನ್ನು ಹೇಳಲು ಸಾಧ್ಯವಿಲ್ಲ. ಎಲ್ಲವೂ ಒಳ್ಳೆಯ ವಿಷಯವನ್ನೇ ಸಾರುತ್ತವೆ. ಆದರೆ, ನಾವು ಅದನ್ನು ತಪ್ಪಾಗಿ ಅರ್ಥೈಸಿಕೊಂಡಾಗ, ತಪ್ಪಾಗಿ ಆಚರಣೆಗೆ ತಂದಾಗ ಮಾತ್ರ ಅಪಾಯ ತಪ್ಪಿದ್ದಲ್ಲ ಎಂದು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕಿ ಡಾ.ಶುಭಾ ಮರವಂತೆ ಹೇಳಿದರು.

ನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಜಮಾತೆ ಇಸ್ಲಾಂ ಹಿಂದ್‌ ಶಿವಮೊಗ್ಗ ಘಟಕದಿಂದ ಶನಿವಾರ ಆಯೋಜಿಸಿದ್ದ ಸೀರತ್‌ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ದೇಶ ಮುನ್ನಡೆಸಲು ಧರ್ಮ ಹಾಗೂ ಜಾತಿಯನ್ನು ಹೊರತುಪಡಿಸಿದ ಚಿಂತನೆ ಅವಶ್ಯ. ಈಗಿನ ಸನ್ನಿವೇಶದಲ್ಲಿ ಸ್ವಾರ್ಥ, ದುರಾಸೆ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಪ್ರಕೃತಿ, ಸಂಸ್ಕೃತಿ ಹಾಗೂ ಧರ್ಮಕ್ಕೆ ಅಪಾಯ ಎದುರಾಗಿದೆ. ಪ್ರತಿ ಹಂತದಲ್ಲೂ ರಾಜಕೀಯ ಮೇಲಾಟಗಳು ಹೆಚ್ಚುತ್ತಿವೆ ಎಂದರು.

ವಿಶ್ವದಲ್ಲಿ ಮೌಢ್ಯದ ಬಗ್ಗೆ ಮೊದಲು ದನಿ ಎತ್ತಿದ್ದೇ ಮಹಮದ್ ಪೈಗಂಬರರು. ಇಸ್ಲಾಂನ ಆಶಯ ಶಾಂತಿಯೇ ಹೊರತು, ರಕ್ತವಲ್ಲ. ಇಂದು ಮನಸ್ಸುಗಳ ನಡುವೆ ಕಂದಕ ಸೃಷ್ಟಿಸಿಕೊಂಡಿದ್ದೇವೆ. ಧರ್ಮ, ತತ್ವ, ಸಂಸ್ಕಾರಗಳನ್ನು ಸರಿಯಾಗಿ ಅರ್ಥೈಸಿಕೊಳ್ಳುತ್ತಿಲ್ಲ. ಮುಖದ ಮೇಲಿನ ಧೂಳನ್ನು ಸ್ವಚ್ಛ ಮಾಡಿಕೊಳ್ಳುವ ಬದಲು ಎದುರಿಗಿರುವ ಕನ್ನಡಿಯನ್ನು ಸ್ವಚ್ಛಗೊಳಿಸುತ್ತಿದ್ದೇವೆ ಎಂದು ಮಾರ್ಮಿಕವಾಗಿ ಹೇಳಿದರು.

ಏಸುಕ್ರಿಸ್ತ, ಪೈಗಂಬರ್, ಬುದ್ಧ, ಅಂಬೇಡ್ಕರ್‌, ಗಾಂಧೀಜಿ ಅವರ ಚಿಂತನೆಗಳು ಇಂದು ನಮಗೆ ಅತ್ಯವಶ್ಯವಾಗಿವೆ. ಎಲ್ಲರೂ ಒಗ್ಗೂಡಿ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ವೇದಗಳು ಹಾಗೂ ಪೈಗಂಬರ್, ಮಹಮದ್ ನಡುವಿನ ಸಾಮ್ಯತೆಗಳ ಬಗ್ಗೆ ಪುಸ್ತಕವೊಂದು ಪ್ರಕಟವಾಗಿವೆ. ಇದು ಎಲ್ಲ ಧರ್ಮಗಳ ನಡುವೆ ಇರುವ ಸಾಮಾನ್ಯ ಸಾಮರಸ್ಯಕ್ಕೆ ನಿದರ್ಶನವಾಗಿದೆ ಎಂದರು.

ಸಾಹಿತಿ ಯೋಗೇಶ್ ಮಾಸ್ಟ‌ರ್ ಮಾತನಾಡಿ, ಇಂದಿನ ಸನ್ನಿವೇಶದಲ್ಲಿ ಎಲ್ಲ ಸಾವು, ನೋವುಗಳಿಗೂ ಧರ್ಮ ಹಾಗೂ ರಾಷ್ಟ್ರೀಯತೆ ಲೇಬಲ್ ಹಚ್ಚಲಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಕೆಟ್ಟ ಘಟನೆಗಳನ್ನು ಧರ್ಮ, ರಾಷ್ಟ್ರೀಯತೆಯ ಲೇಬಲ್ ತೆಗೆದು ವಿಶ್ಲೇಷಣೆ ಮಾಡಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ಮೂಡಲು ಸಾಧ್ಯ ಎಂದರು.

ಬಾಳಿ ಬದುಕಬೇಕಾದ ಕಂದಮ್ಮಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಯುದ್ಧ ಎಂಬುದು ದಂಧೆಯಾಗಿ ಮಾರ್ಪಟ್ಟಿದೆ. ಯುದ್ಧ ಸಾಮಗ್ರಿಗಳ ಮಾರುಕಟ್ಟೆಯಲ್ಲಿ ಲಾಭ, ನಷ್ಟದ ಲೆಕ್ಕಾಚಾರ ಆಗುತ್ತಿದೆ. ಅಸೂಯೆ, ಅಸಹಿಷ್ಣುತೆ ತೊಡೆದು ಬದುಕಿದಲ್ಲಿ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಜಗತ್ತಿನಲ್ಲಿ ಎಲ್ಲವೂ ಇದೆ. ಬುದ್ಧಿವಂತನಾದವನು ಉತ್ತಮ ಮೌಲ್ಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಪ್ರವಾದಿ ಮಹಮ್ಮದರು ಜಗತ್ತಿನಲ್ಲಿರುವ ಉತ್ತಮ ವಿಚಾರಗಳಲ್ಲಿ ಒಂದೊಂದು ಅಂಶವನ್ನೂ ಹುಡುಕಿ ಮನುಕುಲಕ್ಕೆ ನೀಡಿದ್ದಾರೆ. ವಿಶ್ವದ ಯಾವುದೇ ಮೂಲೆಯಲ್ಲಿ ಅರಿವಿನ ಸಣ್ಣ ವಿಚಾರವಿದ್ದರೂ ಅದನ್ನು ಅಳವಡಿಸಿಕೊಳ್ಳಬೇಕೆಂಬುದು ಪ್ರವಾದಿ ಆಶಯವಾಗಿತ್ತು ಎಂದರು.

ಯಾರೂ ಶ್ರೇಷ್ಠರಲ್ಲ, ಅದೇ ರೀತಿ ಯಾರಿಗೆ ಯಾರೂ ಕನಿಷ್ಠರೂ ಅಲ್ಲ ಎಂಬುದು ಪ್ರವಾದಿಯವರ ನಿಲುವಾಗಿತ್ತು. ಅವರ ವಿದಾಯ ಭಾಷಣವನ್ನು ಸರಿಯಾಗಿ ಅರ್ಥೈಸಿಕೊಂಡರೆ ಅವರಲ್ಲಿನ ಕರುಣೆ ಎಲ್ಲರಿಗೂ ಮನದಟ್ಟಾಗುತ್ತದೆ ಎಂದು ಹೇಳಿದರು.

ವಕೀಲ ಕೆ.ಪಿ.ಶ್ರೀಪಾಲ್, ಜಮಾತೆ ಇಸ್ಲಾಂ ಹಿಂದ್ ಶಿವಮೊಗ್ಗ ಘಟಕದ ಅಧ್ಯಕ್ಷ ಅಬ್ದುಲ್‌ ವಹಾಬ್‌, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮದ್‌ ಕುಂಜ, ಸಾಮಾಜಿಕ ಕಾರ್ಯಕರ್ತ ಎಸ್.ಬಿ.ಅಶೋಕ ಕುಮಾರ್, ಫರ್ವಿಜ್ ಅಹಮದ್ ಮುಂತಾದವರಿದರು.

- - - -19ಎಸ್‌ಎಂಜಿಕೆಪಿ06:

ಶಿವಮೊಗ್ಗ ಡಾ.ಬಿ,ಆರ್‌.ಅಂಬೇಡ್ಕರ್‌ ಭವನದಲ್ಲಿ ಶನಿವಾರ ಜಮಾತೆ ಇಸ್ಲಾಂ ಹಿಂದ್‌ ಶಿವಮೊಗ್ಗ ಘಟಕದಿಂದ ಶನಿವಾರ ಆಯೋಜಿಸಿದ್ದ ಸೀರತ್‌ ಪ್ರವಚನ ಕಾರ್ಯಕ್ರಮದಲ್ಲಿ ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕಿ ಡಾ.ಶುಭಾ ಮರವಂತೆ ಮಾತನಾಡಿದರು.