ನಾಗರ ಪಂಚಮಿ ಹಬ್ಬದ ಸಂಭ್ರಮದ ನಡುವೆಯೇ ಜಿಲ್ಲೆಯ ವಿವಿಧೆಡೆ ಇಸ್ಪೀಟ್ ಜೂಜಾಟ ಎಗ್ಗಿಲ್ಲದೆ ನಡೆಯುತ್ತಿದೆ. ಮಕ್ಕಳು, ಮಹಿಳೆಯರು ಉಂಡೆ ತಿಂದು, ಜೋಕಾಲಿ ಜೀಕಿ ಸಂಭ್ರಮಿಸುತ್ತಿದ್ದರೆ, ಜೂಜುಕೋರರು ಕೈಯಲ್ಲಿ ಎಕ್ಕಾ, ರಾಜಾ ಎಲೆ ಹಿಡಿದು ದಿನವಿಡೀ ಜೂಜಾಟದಲ್ಲಿ ನಿರತರಾಗಿರುವುದು ಬೆಳಕಿಗೆ ಬಂದಿದೆ.

ಹಾವೇರಿ: ನಾಗರ ಪಂಚಮಿ ಹಬ್ಬದ ಸಂಭ್ರಮದ ನಡುವೆಯೇ ಜಿಲ್ಲೆಯ ವಿವಿಧೆಡೆ ಇಸ್ಪೀಟ್ ಜೂಜಾಟ ಎಗ್ಗಿಲ್ಲದೆ ನಡೆಯುತ್ತಿದೆ. ಮಕ್ಕಳು, ಮಹಿಳೆಯರು ಉಂಡೆ ತಿಂದು, ಜೋಕಾಲಿ ಜೀಕಿ ಸಂಭ್ರಮಿಸುತ್ತಿದ್ದರೆ, ಜೂಜುಕೋರರು ಕೈಯಲ್ಲಿ ಎಕ್ಕಾ, ರಾಜಾ ಎಲೆ ಹಿಡಿದು ದಿನವಿಡೀ ಜೂಜಾಟದಲ್ಲಿ ನಿರತರಾಗಿರುವುದು ಬೆಳಕಿಗೆ ಬಂದಿದೆ.

ಪವಿತ್ರ ನಾಗರ ಪಂಚಮಿ ಹಬ್ಬ ಮನೆಗಳಲ್ಲಿ ಎಲ್ಲೆಡೆ ಸಂಭ್ರಮದ ವಾತಾವರಣ ಮೂಡಿಸಿದೆ. ಆದರೆ, ಕೆಲವರು ಹಬ್ಬದ ನೆಪದಲ್ಲಿ ಜೂಜಾಟದಲ್ಲಿ ನಿರತರಾಗಿದ್ದಾರೆ. ಹತ್ತಾರು ಸಾವಿರ ರು. ಪಣಕ್ಕಿಟ್ಟು ಆಟದಲ್ಲಿ ಅದನ್ನು ಕಳೆದುಕೊಂಡು ಮನೆಯಲ್ಲಿ ಹಬ್ಬದ ಸಂಭ್ರಮವನ್ನೇ ಕಸಿದುಕೊಂಡಿದ್ದಾರೆ. ಇಸ್ಪೀಟ್‌ ಜೂಜಾಟ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಜೂಜುಕೋರರ ಮೇಲೆ ಕೇಸ್‌ ದಾಖಲಿಸಿದೆ.

ವಿವಿಧೆಡೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಒಂದೇ ದಿನ ಸಾರ್ವಜನಿಕ ಸ್ಥಳಗಳಲ್ಲಿ ಹಣ ಪಣಕ್ಕಿಟ್ಟು ಇಸ್ಪೀಟ್ ಆಡುತ್ತಿದ್ದವರ ವಿರುದ್ಧ 7 ಪ್ರಕರಣಗಳ ದಾಖಲಿಸಿದ್ದಾರೆ. ಆ. 17ರಂದು ಹಾವೇರಿ ಶಹರ ಠಾಣೆಯಲ್ಲಿ 2, ಹಾವೇರಿ ಗ್ರಾಮೀಣ ಠಾಣೆಯಲ್ಲಿ 3 ಹಾಗೂ ಬ್ಯಾಡಗಿ ಠಾಣೆಯಲ್ಲಿ 2 ಸೇರಿ ಒಟ್ಟು 7 ಇಸ್ಪೀಟ್ ಜೂಜಾಟ ಪ್ರಕರಣಗಳು ದಾಖಲಾಗಿವೆ. ಹಬ್ಬದ ದಿನ ಜನರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಕೆಲವರು ಸಾರ್ವಜನಿಕ ಸ್ಥಳಗಳನ್ನೇ ಜೂಜಾಟದ ಅಡ್ಡೆಗಳನ್ನಾಗಿ ಮಾಡಿಕೊಂಡಿರುವುದನ್ನು ಪೊಲೀಸರು ಪತ್ತೆಹಚ್ಚಿ ದಾಳಿ ನಡೆಸಿದ್ದಾರೆ. ರೈಲ್ವೆ ಅಂಡರ್‌ಬ್ರಿಡ್ಜ್, ಎಪಿಎಂಸಿ ಸಮೀಪ, ಬಸ್‌ಸ್ಟ್ಯಾಂಡ್ ಹಿಂಭಾಗ, ಗ್ರಾಮದ ಬಯಲು ಪ್ರದೇಶ, ಕ್ರಾಸ್ ಹಾಗೂ ಸಾರ್ವಜನಿಕ ರಸ್ತೆಗಳ ಬಳಿಯೂ ಜೂಜಾಟ ನಡೆದಿರುವುದು ಪ್ರಕರಣಗಳ ವಿವರದಿಂದ ಬೆಳಕಿಗೆ ಬಂದಿದೆ.

ನಗರದಲ್ಲೇ ಎರಡು ಪ್ರಕರಣ..

ಹಾವೇರಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ವಿಜಯನಗರ ಬಡಾವಣೆಯ ರೈಲ್ವೆ ಅಂಡರ್‌ಬ್ರಿಡ್ಜ್ ಕೆಳಗಿನ ಸಾರ್ವಜನಿಕ ಸ್ಥಳದಲ್ಲಿ ಐದಾರು ಜನ ಜೂಜುಕೋರರು ಗುಂಪಾಗಿ ಕುಳಿತು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದ ಬಗ್ಗೆ ದೂರು ದಾಖಲಾಗಿದೆ.

ಹಾವೇರಿ ನಗರದ ಗುತ್ತಲ ರಸ್ತೆಯಲ್ಲಿರುವ ಹಳೆ ಎಪಿಎಂಸಿ ಸಮೀಪ ಸಾರ್ವಜನಿಕ ಸ್ಥಳದಲ್ಲಿ ನಾಲ್ಕು ಜನ ಹಣ ಪಣಕ್ಕಿಟ್ಟು ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಮತ್ತೊಂದು ದೂರು ದಾಖಲಾಗಿದೆ.

ಗ್ರಾಮೀಣರ ಅಬ್ಬರ: ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಅಗಡಿ ಗ್ರಾಮದ ಬಸ್‌ಸ್ಟ್ಯಾಂಡ್ ಹಿಂಭಾಗದ ಸಾರ್ವಜನಿಕ ಬಯಲು ಪ್ರದೇಶದಲ್ಲಿ ಕೆಲವರು ಗುಂಪಾಗಿ ಕುಳಿತು ಹಣ ಪಣಕ್ಕಿಟ್ಟು ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ, ಚಿಕ್ಕಲಿಂಗದಹಳ್ಳಿ ಗ್ರಾಮದ ವಡ್ಡಮ್ಮನ ಕ್ರಾಸ್ ಸಮೀಪದ ಸಾರ್ವಜನಿಕ ಬಯಲು ಪ್ರದೇಶದಲ್ಲೂ ಕೆಲವರು ಗುಂಪಾಗಿ ಕುಳಿತು ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ದೂರು ದಾಖಲಾಗಿದೆ. ನೆಲೋಗಲ್ ಗ್ರಾಮದ ಹದ್ದಿಯಲ್ಲಿರುವ ಶಿವಾಜಿ ದಾಬಾ ಹಿಂದಿನ ಬಯಲು ಪ್ರದೇಶದಲ್ಲಿ ಕೆಲವರು ಗುಂಪಾಗಿ ಕುಳಿತು ಹಣ ಪಣಕ್ಕಿಟ್ಟು ಇಸ್ಪೀಟ್ ಆಡುತ್ತಿದ್ದ ಬಗ್ಗೆ ಮತ್ತೊಂದು ದೂರು ದಾಖಲಾಗಿದೆ. ಈ ಪ್ರಕರಣವೂ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಬ್ಯಾಡಗಿಯಲ್ಲೂ ಪೊಲೀಸರ ದಾಳಿ: ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯ ತೆರೇದಹಳ್ಳಿ ಗ್ರಾಮದ ದುರಗಮ್ಮನಗುಡಿ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಅಡ್ಡಾದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಕೊಡಿಹಳ್ಳಿ-ಮಲೂರು ಸಾರ್ವಜನಿಕ ರಸ್ತೆಯಲ್ಲೂ ಇಸ್ಪೀಟ್ ಜೂಜಾಟ ನಡೆದಿರುವುದು ಪತ್ತೆಯಾಗಿದೆ. ನಗರದಿಂದ ಗ್ರಾಮೀಣ ಭಾಗದವರೆಗೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ನಡೆದಿರುವ ಜೂಜಾಟ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿರುವುದು ಗಮನಾರ್ಹವಾಗಿದೆ. ಪೊಲೀಸ್ ಇಲಾಖೆ ಮುಂದಿನ ದಿನಗಳಲ್ಲೂ ಇಂತಹ ಸ್ಥಳಗಳ ಮೇಲೆ ನಿರಂತರ ನಿಗಾ ವಹಿಸಿ, ಜೂಜಾಟದ ಅಡ್ಡೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕರ ಒತ್ತಾಸೆಯಾಗಿದೆ.

ಹಬ್ಬದ ನೆಪದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಹೀಗಾಗಿ ಜೂಜಾಟಕ್ಕೆ ಅವಕಾಶ ಕಲ್ಪಿಸದೇ ವಿಶೇಷ ಕಾರ್ಯಾಚರಣೆ ನಡೆಸಿ ನಡೆಸಿ ಪ್ರಕರಣ ದಾಖಲಿಸಿದ್ದೇವೆ ಎಂದು ಹಾವೇರಿ ಎಸ್ಪಿ ಯಶೋದಾ ವಂಟಗೋಡಿ ಹೇಳಿದರು.