‘ನಮ್ಮ ನಡೆ ಮತ ರಕ್ಷಣೆ ಕಡೆ’ ಎಂಬ ಘೋಷಣೆಯೊಂದಿಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ 23ರಂದು ಎಸ್‌ಐಆರ್ ಕುರಿತು ಜನಜಾಗೃತಿ ಸಮಾವೇಶ ನಡೆಯಲಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ತಿಳಿಸಿದರು.
ಮಂಗಳೂರು: ‘ನಮ್ಮ ನಡೆ ಮತ ರಕ್ಷಣೆ ಕಡೆ’ ಎಂಬ ಘೋಷಣೆಯೊಂದಿಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ 23ರಂದು ಎಸ್‌ಐಆರ್ ಕುರಿತು ಜನಜಾಗೃತಿ ಸಮಾವೇಶ ನಡೆಯಲಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ತಿಳಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಸಮಾವೇಶ ಉದ್ಘಾಟನೆಗೊಳ್ಳಲಿದ್ದು, ಚಿಕ್ಕಮಗಳೂರು, ಉಡುಪಿ, ದ.ಕ. ಹಾಗೂ ಉತ್ತರ ಕನ್ನಡ ಜಿಲ್ಲೆಯ ಬಿಎಲ್‌ಎ (ಬೂತ್ ಲೆವೆಲ್ ಏಜೆಂಟ್)ಗಳು ಭಾಗವಹಿಸಲಿದ್ದಾರೆ ಎಂದರು.
ಎಸ್‌ಐಆರ್‌ಗೆ ಸಂಬಂಧಿಸಿ ಈಗಾಗಲೇ ಪಕ್ಷದ ವತಿಯಿಂದ ಎಲ್ಲ ಕಡೆ ಬಿಎಲ್‌ಎಗಳಿಗೆ ತರಬೇತಿ ನೀಡಲಾಗಿದೆ. ಎಸ್‌ಐಆರ್ ನಡೆದಿರುವ ರಾಜ್ಯಗಳಲ್ಲಿ ಈಗಾಗಲೇ ಆಗಿರುವ ಅನಾಹುತಗಳ ಬಗ್ಗೆ ಬಿಎಲ್‌ಎಗಳಿಗೆ ತಿಳಿಸಿ ಜಾಗೃತಿ ಮೂಡಿಸಲಾಗಿದೆ. ಕೆಪಿಸಿಸಿಯ ಹಿರಿಯ ನಾಯಕರ ಜತೆಗೆ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕೂಡಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.ಕರಾವಳಿ ಬಗ್ಗೆ ಸಿಎಂ ವಿಶೇಷ ಕಾಳಜಿ:
ಕರಾವಳಿ ಅಭಿವೃದ್ಧಿಯ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಕರೆಯುವುದಾಗಿ ತಿಳಿಸಿದ್ದು, ಈ ಮೂಲಕ ಕರಾವಳಿ ಪ್ರವಾಸೋದ್ಯಮ ಹೊಸ ರೂಪ ಪಡೆಯುವ ನಿರೀಕ್ಷೆ ಇದೆ ಎಂದು ಕೆ.ಹರೀಶ್ ಕುಮಾರ್ ತಿಳಿಸಿದರು.ಕರಾವಳಿಯ ಪ್ರವಾಸೋದ್ಯಮ ಕುರಿತಂತೆ ಅವರು ಬೆಂಗಳೂರಿನಲ್ಲಿ ಸಭೆ ನಡೆಸಿದ್ದಾರೆ. ಪ್ರವಾಸೋಮದ್ಯಕ್ಕೆ ಸವಾಲಾಗಿರುವ ಸಿಆರ್‌ಝೆಡ್, ಅರಣ್ಯ ಇಲಾಖೆಯ ಕೆಲವು ತಾಂತ್ರಿಕ ಸಮಸ್ಯೆಗಳ ನಿವಾರಣೆ ಹಾಗೂ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಕರಾವಳಿಯ ಆಕರ್ಷಣೆಯ ಜನಪದ ಕ್ರೀಡೆಯಾದ ಕಂಬಳವನ್ನು ಈ ಬಾರಿ ದಸರಾ ಸಂದರ್ಭ ಮೈಸೂರಿನಲ್ಲಿ ನಡೆಸಲು ಮುಂದಾಗಿರುವುದಲ್ಲದೆ, ಕಂಬಳ ಸಮಿತಿಯ ಬೇಡಿಕೆಯಂತೆ 5 ಕೋಟಿ ರು. ನೆರವು ನೀಡುವ ಭರವಸೆಯನ್ನೂ ನೀಡಿದ್ದಾರೆ. ಈ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸಿ ಜಿಲ್ಲೆಯ ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನೂತನ ಮುಖ್ಯಮಂತ್ರಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದರು.ಮಾಜಿ ಸಚಿವ ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಶಾಸಕ ಜೆ.ಆರ್. ಲೋಬೋ, ಮುಖಂಡರಾದ ಪದ್ಮರಾಜ್, ಬಿ.ಕೆ. ಸಲೀಂ, ಜೆ.ಅಬ್ದುಲ್ ಸಲೀಂ, ವಿಕಾಸ್, ಜೋಕಿಂ ಡಿಸೋಜಾ, ಇಬ್ರಾಹಿಂ ನವಾಜ್, ನಝೀರ್ ಬಜಾಲ್, ಪ್ರಕಾಶ್ ಸಾಲಿಯಾನ್ ಮತ್ತಿತರರು ಇದ್ದರು.